ನಾವು-ನೀವು ಬಂಗಾರದ್ಹಂಗ ಇರೋಣ !

ನಾಡಿನೆಲ್ಲೆಡೆ ನಾಡಹಬ್ಬದ ಸಂಭ್ರಮ. ವಿಜಯದಶಮಿ ಹಬ್ಬವು ನಾಡಿನೆಲ್ಲೆಡೆ ದಸರಾ ಹಾಗೂ ಬನ್ನಿ ಹಬ್ಬವೆಂದೆ ಆಚರಿಸಲ್ಪಡುತ್ತದೆ. ಭಾರತೀಯ ಪರಂಪರೆಯನ್ನು ಅವಲೋಕಿಸಿದಾಗ ಪ್ರತಿಯೊಂದು ರಾಜ್ಯದಲ್ಲಿಯೂ ವಿಶೇಷ ಆಚರಣೆಗಳಿವೆ. ವಿಭಿನ್ನ ನಡೆ-ನುಡಿಗಳಿವೆ. ಭಾರತ ಅನೇಕ ಧರ್ಮಗಳ ಸಮುದಾಯ. ವಿವಿಧತೆಯಿದ್ದರೂ ಐಕ್ಯತೆಗೆ ಕೊರತೆಯಿಲ್ಲ. ಎಷ್ಟಷ್ಟೆ ಧರ್ಮಗಳು ಟೊಂಗೆ ಟಿಸಿಲುಗಳನ್ನೊಡೆದು ಜಾತಿಮತಗಳಾಗಿ ಹಂಚಿಹೋಗಿದ್ದರೂ ಧರ್ಮದ ವಿಶಾಲ ಪರಿಕಲ್ಪನೆ ಬದಲಾಗಿಲ್ಲ. ಅಂತಹ ಪರಂಪರೆಯ ಜನಪದರು ನಿರೀಶ್ವರವಾದಿಗಳಲ್ಲ. ದೈವದ ಇರುವಿಕೆಯನ್ನು ನಂಬಿದವರು. ರೈತರಿಗೆ ಉತ್ಸಾಹವನ್ನು ತಂದೊಡ್ಡುವ, ವ್ಯಾಪಾರಿಗಳಿಗೆ ನವಚೇತನ ತಂದುಕೊಡುವ, ಅರಸರಿಗೆ ವಿಜಯದ ಸಂಕೇತವಾಗಿರುವ ಹಬ್ಬವೇ ಮಹಾನವಮಿ ಹಾಗೂ ವಿಜಯದಶಮಿ. ಬಡವನಿಂದ ಬಲ್ಲಿದನವರೆಗೆ, ಗುಡಿಸಲಿನಿಂದ ಅರಮನೆವರೆಗೂ ಉತ್ಸಾಹದಿಂದ ಕೂಡಿ ಆಚರಿಸುವ ಹಬ್ಬ. ಇದು ನಾಡಿನ ಜನರಿಗೆ ದಸರಾ ಹಾಗೂ ಬನ್ನಿ ಹಬ್ಬವೆಂದೆ ಚಿರಪರಿಚಿತ.
ದಸರೇಕ ತವರೀಗೆ, ಕುಸಲದಿ ನಾಹೋದೆ
ಸೊಸಿ ನೋಡಿ ಕೊಟ್ಟೆ ಹಿಡಿ ಬನ್ನಿ| ಅಣ್ಣಯ್ಯ
ಖುಸಿಲಿಂದ ಬೊಟ್ಟ ಸೊಸಿಗಿಟ್ಟೆ|
ನವರಾತ್ರಿ :  ಜನಪದ ಆಚÀರಣೆಗಳು ಬಹುತೇಕ ದೈವೀ ಆರಾಧನೆಯ ಹಿನ್ನಲೆಯಲ್ಲಿ ಬೆಳೆದುಬಂದವು. ಕೆಲವು ಪೂರ್ಣ ಮನರಂಜನೆಗೆ ಮೀಸಲಾಗಿದ್ದರೆ, ಮತ್ತೆ ಕೆಲವು ಪೂರ್ಣ ಧಾರ್ಮಿಕ ಆಚರಣೆಗಳಾಗಿವೆ. ಅಶ್ವೀಜ ಮಾಸದ ಶುದ್ಧಪಾಡ್ಯಮಿವರೆಗಿನ ಹತ್ತು ದಿನಗಳು ಬಹುಶುಭದಿನಗಳು. ಮೊದಲಿನ ಒಂಭತ್ತು ದಿನಗಳನ್ನೆ ನವರಾತ್ರಿ ಎಂದು ಕರೆಯುವರು. ಈ ದಿನಗಳಲ್ಲಿ ಲಕ್ಷ್ಮೀ, ಸರಸ್ವತಿ, ಕಾಳಿ, ದುರ್ಗೆಯರನ್ನು ಉಪಾಸನೆ ಮಾಡಲಾಗುತ್ತದೆ. ಗುಡಿ-ಗುಂಡಾರಗಳಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ, ಪುರಾಣಗಳನ್ನು ಹೇಳಲಾಗುತ್ತವೆ. ಮಳೆ, ಬೆಳೆ, ಧನ, ಧಾನ್ಯ, ಸಂಪತ್ತು, ಯಶಸ್ಸು ಪ್ರಾಪ್ತವಾಗಲು ದೇವಿಯನ್ನು ಭಕ್ತಿಯಿಂದ ಆರಾಧಿಸಲಾಗುತ್ತದೆ. ಜನಪದರು ಜ್ಞಾನ, ಐಶ್ವರ್ಯ, ಸಾಹಸ, ಸಂಪತ್ತನ್ನೂ ಅಪೇಕ್ಷಿಸಿ ಶಕ್ತಿದೇವತೆಯನ್ನು ಪೂಜಿಸುತ್ತಾ ಬಂದಿದ್ದಾರೆ.


ಮಹಾನವಮಿ : ‘ನವಮಿ’ ಎಂದರೆ ಒಂಭತ್ತನೇ ದಿನ. ಈ ದಿನದಂದು ದೇವಿಗೆ ಮಹಾಪೂಜೆಯನ್ನು ಕೈಗೊಳ್ಳಲಾಗುತ್ತದೆ. ಘಟ್ಟ ಹಾಕುವ ಪದ್ಧತಿಯೂ ಜನಪದರಲ್ಲಿ ರೂಢಿಯಲ್ಲಿದ್ದು, ಅದು ಕೊನೆಗೊಳ್ಳುವುದು. ಮಹಾನವಮಿಯ ದಿನದಂದೇ. ಈ ಸಂದರ್ಭದಲ್ಲಿ ಮಡಿಯಿಂದ ಬನ್ನಿ ಮರಕ್ಕೆ ತೆರಳಿ ಭಕ್ತಿ ಭಾವವನ್ನು ಅರ್ಪಿಸುತ್ತಾರೆ. ಮಹಾಭಾರತದ ಶಮೀವೃಕ್ಷವೇ ಈ ಬನ್ನಿಮರ. ಬನ್ನಿ ಮರದೆಲೆಗಳನ್ನು ‘ಬಂಗಾರ’ವೆಂದು ಪೂಜಿಸುತ್ತಾರೆ. ಜೀವನ ವಿಧಾನವೆಂಬ ನೀತಿ ನಿಯತ್ತಿನ ಬೇಲಿಯನ್ನು ತಮಗೆ ತಾವೇ ವಿಧಿಸಿಕೊಂಡು, ಧರ್ಮಾಧಾರಿತ ಸಮುದಾಯ ರೂಪಿಸಿಕೊಂಡವರು. ಹಳ್ಳಿಗರು ಯಾರಿಗೂ ಅಂಜದ ದೇವರಿಗೆ ಅಂಜುತ್ತಿದ್ದರು. ಧರ್ಮವಂತರಾಗಿ ಬಾಳುತ್ತಿದ್ದರು. ದೈವಕ್ಕೆ ತಲೆಬಾಗಿ ಬದುಕಿದರು. ಇಂತಹ ನಾಡಸಂಸ್ಕøತಿಗೆ ಪ್ರತಿಕವಾಗಿ ಇಂದಿಗೂ ಜನಪದ ಗೀತೆಗಳು ಸಾಕ್ಷಿಗಳೆನಿಸಿವೆ.
ಬಂಜಿ ಬಾಗಿಲದಾಗ ಬಂಗಾರದೊಳಕಲ್ಲ
ಬಂದು ಕುಟ್ಟಾಕ ಸೊಸಿಯಿಲ್ಲ| ಮಹಾನವಮಿ
ಬನ್ನಿ ಮುಡಿಯಾಕ ಮಗನಿಲ್ಲ|
ವಿಜಯದಶಮಿ
ಬನ್ನಿ ಮುಡಿಯುವ ದಿನವೇ ವಿಜಯದಶಮಿ. ವಿಜಯೋತ್ಸವ ಆಚರಿಸುವ ದಿನ. ಅಜ್ಞಾತವಾಸಕ್ಕೆ ತೆರಳಿದ ಪಾಂಡವರಿಗೆ ಶಮೀವೃಕ್ಷದಿಂದ ಶಸ್ತ್ರಾಸ್ತ್ರ ತೆಗೆದುಕೊಂಡು ವಿಜಯೋತ್ಸವ ಆಚರಣೆ ಮಾಡಿದ್ದು ಇದೇ ದಿನ. ಶ್ರೀರಾಮನು ಲಂಕೆಯ ರಾವಣನನ್ನು ದುರ್ಧಿಸಿದ್ದು ಇದೇ ದಿನ. ಅದಕ್ಕಾಗಿ ಉತ್ತರ ಭಾರತದಲ್ಲೆಡೆ ವಿಜಯದಶಮಿಯಂದು ರಾವಣದಹನ ಎಂಬ ವಿಶಿಷ್ಠ ಆಚರಣೆ ರೂಢಿಯಲ್ಲಿದೆ. ಜನರು ಆಚರಿಸುವ ಪ್ರತಿಯೊಂದು ಆಚರಣೆಯ ಹಿನ್ನಲೆಯಲ್ಲಿಯೂ ಯಾವುದಾದರೊಂದು ಸಮಾಜಸುಧಾರಣೆಯ ಅಂಶವಿದ್ದೇ ಇರುತ್ತದೆ. ನಿತ್ಯ ದೇವರನ್ನು ಪೂಜಿಸುತ್ತ ಬಂದ ಜನಪದÀರು. ಹಬ್ಬ-ಹರಿದಿನಗಳಲ್ಲಿ, ಜಾತ್ರೆ-ಉತ್ಸವಗಳಲ್ಲಿ ಮನದುಂಬಿ ಆರಾದಿಸುತ್ತ ಮೈಮರೆವರು. ಪಾಂಡವರ ಕಷ್ಟದ ದಿನಗಳ ಕುರಿತು ಜನಪದರ ಒಡಲನುಡಿಗಳಂತಿವೆ.
ಕಲ್ಲು ಕಡುಬ ಮಾಡಿ, ಮುಳ್ಳ ಸ್ಯಾಂವಿಗೆ ಮಾಡಿ
ಬನ್ನಿ ಎಲಿಯಾಗ ಎಡೆಮಾಡಿ| ಪಾಂಡವರು
ಬಂದು ಹೋಗ್ಯಾರೊ ವನವಾಸೊ|
ಇದೇ ವಿಜಯದಶಮಿಯಂದೇ ವಿಜಯನಗರ ಸಾಮ್ರಾಜ್ಯ ಉದಯವಾಯಿತೆಂದು ಜನಪದರ ತಿಳುವಳಿಕೆ. ಹಂಪೆಯ ಸಮೀಪ ನಿರ್ಮಿತವಾದ ರಾಜ್ಯಕ್ಕೆ ‘ವಿಜಯನಗರ’ವೆಂದು ಅವರು ಕರೆದಿರಬಹುದು. ಅದಕ್ಕೆ ವಿಜಯನಗರದ ಅರಸರು ಬಹುವಿಜೃಂಭಣೆಯಿಂದ ವಿಜಯದಶಮಿ ಹಬ್ಬವನ್ನು ಆಚರಿಸುತ್ತಿದ್ದರು. ಅವರಿಗೆ ಕೇವಲ ಹಬ್ಬವಾಗಿರದೆ ನಾಡಹಬ್ಬವಾಗಿತ್ತು. ಅಂದು ನಾಡದೇವಿಯ ತೇರನ್ನು ಎಳೆಯುತ್ತಿದ್ದರು. ಹಳ್ಳಿಗಳ ಮೋಜು ಮಜಲುಗಳೇ ಅಲ್ಲಿ ಅನಾವರಣಗೊಳ್ಳುತ್ತಿದ್ದವು.

ಬನ್ನಿಯ ಗಿಡಹುಟ್ಟಿ, ಹೊನ್ನೀನ ಮಳೆಗರೆದು
ಚೆನ್ನಪಟ್ಟಣಕೆ ಹೊಳೆ ಹರಿದು| ಹಂಪ್ಯಾಗ
ಬಿನ್ನಾಣ ವೀರ ಗುಟ್ಟಾಗಿ|
ಮುಂದೆ ಮೈಸೂರು ಅರಸರು ನಾಡಹಬ್ಬವನ್ನು ಮುಂದುವರೆಸಿಕೊಂಡು ಬಂದರು. ಅಲ್ಲದೇ ಮೈಸೂರಿನ ದಸರಾ ಇಂದಿಗೂ ಜಗತ್ತಿನ ತುಂಬೆಲ್ಲ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿನ ಜಂಬೂಸವಾರಿ ಇಡೀ ಜಗತ್ತೇ ಭಾರತದೆಡೆಗೆ ಗಮನ ಸೆಳೆಯುವಂತೆ ಆಕರ್ಷಣೀಯವೆನಿಸಿದೆ.
ಖಂಡೇ ಪೂಜೆ
ಮನೆಯಲ್ಲಿನ ಯಂತ್ರ, ವಾಹನ, ಪುಸ್ತಕ, ಲೇಖನಿಗಳನ್ನು, ರೈತನು ತನ್ನ ಉಳುಮೆ ಮಾಡುವ ಸಾಧನಗಳನ್ನು ವ್ಯಾಪಾರಿ ತನ್ನ ಸರಕು-ಸಾಮಗ್ರಿಗಳನ್ನು, ಶುಚಿಯಾಗಿ ತೊಳೆದು ಭಕ್ತಿ-ಭಾವದಿಂದ ಪೂಜಿಸುವ ಪೂಜೆಗೆ ಖಂಡೇಪೂಜೆ ಎಂದು ಕರೆಯಲಾಗುತ್ತದೆ. ಹಿಂದೆ ಅರಸರು ಯುದ್ಧದ ತಯಾರಿಗೋಸ್ಕರ ತಮ್ಮಲ್ಲಿನ ಆಯುಧಗಳನ್ನೆಲ್ಲ ಸರಿಪಡಿಸಿ, ಸಿದ್ಧವಾಗಿರಿಸಿಕೊಂಡು ಪೂಜೆ ಮಾಡುತ್ತಿದ್ದರು. ಅದನ್ನೇ ಆಯುಧ ಪೂಜಾ ಎಂದು ಕರೆಯುವರುÀ. ಆಯುಧ ಪೂಜೆಯೇ ಖಂಡೇಪೂಜೆ. ಹೊಸ ಯಂತ್ರ, ಗೃಹಪ್ರವೇಶ, ಹೊಸ್ತಿಲ ಪೂಜೆ, ಪಾಯ ಹಾಕುವುದು ವಾಹನ ಮುಂತಾದವುಗಳನ್ನು ಕೊಂಡುಕೊಳ್ಳಲು ಶುಭದಿನ.
ಕಣ್ಣು ಮೂಗಿಲೆ ನನ್ನ ಹೆಣ್ಣು ಮಗಳು ಚೆಲುವಿ
ಬಣ್ಣಕ ನನ್ನ ಸೊಸಿ ಚೆಲುವಿ | ದಸರೈಕ
ಬನ್ನಿ ಮುಡಿವಾಗ ಮಗ ಚೆಲುವ|
ಶಮೀವೃಕ್ಷ : ಶಮೀವೃಕ್ಷವೆಂದರೆ ಬನ್ನಿಯಮರ. ದಸರೆಯ ಹತ್ತುದಿನಗಳೂ ನಾರಿಯರಿಂದ ಪೂಜೆಗೊಳಪಡುವ ಬನ್ನಿಮರ.
ನಾಡಜನರಿಗೆ ಶುಭದ ಸಂಕೇತ. ಹತ್ತು ದಿನವೂ ಸೂರ್ಯೋದಯದ ಮುನ್ನ ನಾರಿಯರು ಬನ್ನಿಗಿಡವನ್ನು ಭಕ್ತಿಯಿಂದ ಪೂಜಿಸಿ
ತಮಗಿಷ್ಟವಾದ ವರವನ್ನು ಪಡೆಯುತ್ತಾರೆ. ಜನಪದರಿಗೆ ಬನ್ನಿಮರ ದೈವಸ್ವರೂಪ. ಸಾಕ್ಷಾತ್
ಆದಿಶಕ್ತಿಯ ಅವತಾರ. ಪ್ರತಿ ಹಳ್ಳಿಗಳಲ್ಲಿಯ ಬನ್ನಿಮರವನ್ನು ಶ್ರದ್ಧೆ ಭಕ್ತಿಯಿಂದ ನೆಡವುದರೊಂದಿಗೆ ಪೂಜಿಸುತ್ತಾರೆ. ವಿಜಯದಶಮಿ ದಿನದಂದು ವಿಶೇಷವಾದ ಪೂಜೆಮಾಡಿ, ಮನೆಗೆ ಬನ್ನಿ ಮರದೆಲೆಗಳನ್ನು ತರುತ್ತಾರೆ. ಇದನ್ನೆ ಬನ್ನಿ ಮುಡಿಯುವುದು ಎನ್ನಲಾಗುತ್ತದೆ. ಬನ್ನಿ ಮರದೆಲೆಗಳು ಬರೀ ಎಲೆಗಳಲ್ಲ ಅವು ಬಂಗಾರದೆಲೆಗಳು.. ಅಂದು ಬನ್ನಿ ಜನಪದರಲ್ಲಿ ಹೊನ್ನಾಗಿ ಬಳಕೆಯಾಗಲ್ಪಡುತ್ತದೆ.
ಬನ್ನಿಯ ಮರದವ್ವ ಬಾಣಾ ಇಟ್ಯವಿ ತಾಯಿ|
ಯಾರು ಬಂದರು ಕೊಡಬಾರದ| ತಾಯವ್ವ
ಅರ್ಜುನ ಬಂದರ ಕೊಡಬೇಕ|
ಬನ್ನೀಯ ಮುಡಿಯಾಕ, ಸಣ್ಣ ಸೊಸಿಮನಿಯಾಗ
ಕನ್ನ್ಯುಳ್ಳ ಮಗ ಮಂದ್ಯಾಗ| ಮುಡಿದಾರ
ಹೊನ್ನ ತುಂಬ್ಯಾರ ಉಡಿಯಾಗ
ಹೀಗೇಯೇ ಚಿಕ್ಕವರಿಂದ ದೊಡ್ಡವರವರೆಗೆ ಬಹುಸಡಗರ, ಸಂಭ್ರಮದಿಂದ ಆಚರಿಸಲ್ಪಡುವ ಹಬ್ಬ ವಿಜಯದಶಮಿ. ಪೌರಾಣಿಕವಾಗಿ, ಐತಿಹಾಸಿಕವಾಗಿ ಎನೇ ಹಿನ್ನಲೆಯಿದ್ದರೂ ನಾಡಿನಾದ್ಯಂತ ಅದ್ಧೂರಿ ಆಚರಣೆ. ಅಬ್ಬರದ ಪಲ್ಲಕ್ಕೆ ಉತ್ಸವ, ಊರ ಮುಂದಿನ ಬನ್ನಿ ಮರದ ಪೂಜೆ, ಬನ್ನಿ ಮುಡಿದು ಮರಳುವ ಗಂಡುಮಕ್ಕಳು, ಬನ್ನಿ ತಂದ ಗಂಡಸರಿಗೆ ಆರತಿಯೆತ್ತುವ ಹೆಂಗಸರು ಪ್ರತಿಯೊಂದು ಹಳ್ಳಿಗಳಲ್ಲಿ ಹಬ್ಬದ ದಿನದಂದು ಕಂಡುಬರುವ ಸಾಮಾನ್ಯ ದೃಶ್ಯಗಳು. ಇದಲ್ಲದೇ ಸಂಜೆಯಾದೊಡೆ ದೇವರಿಗೆ ಬನ್ನಿಯನ್ನು ಅರ್ಪಿಸಿದ ಜನರು ಪ್ರತಿಯೊದು ಮನೆಮನೆಗೂ ತೆರಳಿ ‘ನಾವು-ನೀವು ಬನ್ನಿ ಬಂಗಾರದ್ಹಂಗ ಇರೋಣ’ ಎಂದು ಬನ್ನಿ ಕೊಟ್ಟು ಹಾರೈಸುತ್ತಾರೆ. ಹಿರಿಯರಾದರೆ ಆಶೀರ್ವಾದ ಪಡೆಯುವುದು. ಕಿರಿಯರಾದರೆ ಶುಭ ಕೋರುವುದು ನಾಡಜನರ ಸಂಪ್ರದಾಯ ಎಷ್ಟೋ ದಿನಗಳ ವೈಪಮ್ಯ, ಹಗೆತನ, ಸಿಟ್ಟುಗಳೆಲ್ಲವುಗಳಿಗೆ ಮೋಕ್ಷ
ಸಿಗುವುದು ಇದೇ ದಿನದಂದು. ಅಂದು ಕಹಿದಿನಗಳನ್ನು ಮರೆತು ಪರಸ್ಪರ ಒಂದಾಗಿ ‘ಬಂಗಾರ’ (ಬನ್ನಿ) ವಿನಿಮಯ ಮಾಡಿಕೊಳ್ಳುತ್ತಾರೆ. ಆಧುನಿಕ ಯುಗದಲ್ಲಿ ಬದುಕುತ್ತಿರುವ ನಮಗೆ ಹಿಂದಿನ ಆಚರಣೆಗಳೂ ಆಚಾರದಲ್ಲಿ ಮಾತ್ರ ಉಳಿದಿವೆ. ಆಚರಣೆಗೆ ಬರುತ್ತಿಲ್ಲ. ಕೆಲವೊಮ್ಮೆ ಬಂದರೂ ನಿಷ್ಕಾಳಜಿ. ಹಿರಿಯರ ಒತ್ತಾಯಕ್ಕೂ ಸಮುದಾಯದ ಹೆದರಿಕೆಗೂ ಆಚರಿಸುತ್ತಿದ್ದೇವೆ. ಆದರೆ ಆಚಾರಗಳನ್ನು
ಆಚರಣೆಗೆ ತರುವಲ್ಲಿ ಎಡುವುತ್ತಿದ್ದೇವೆ. ಮಧುರವಾದ ಬಾಂಧವ್ಯ ಬೆಸೆವ ನೆಲೆಯಲ್ಲಿಯೂ ಇಂತಹ ಹಬ್ಬಗಳನ್ನು ಆಚರಿಸಲಾಗುತ್ತದೆ.
ಬನ್ನಿ ಮುಡಿಯೋಣ ಬನ್ನಿ
ಹ್ಯಾಂವ ಮರೆಯೋಣ ಬನ್ನಿ
ಜೀವ ಒಂದಾಗಿ ಇರಬನ್ನಿ
- ಪ್ರೊ. ಶಿವಾನಂದ ಬ. ಟವಳಿ
ಜೆ.ಎಸ್.ಎಸ್. ಮಹಾವಿದ್ಯಾಲಯ,
ವಿದ್ಯಾಗಿರಿ, ಧಾರವಾಡ-580004

 

ಮನುಷ್ಯನಲ್ಲಿ ಸೇವಾ ಮನೋಭಾವನೆ ಬರುವದು ಬಹಳ ಅಗತ್ಯ : ಜಯಶಾಂತಲಿಂಗ ಸ್ವಾಮಿ
ಬಸವಕಲ್ಯಾಣ: ಅ., 17- ಈ ಸಾಮಾಜಿಕ ಬದುಕಿನಲ್ಲಿ ಮನುಷ್ಯನಲ್ಲಿ ಸೇವಾ ಮನೋಭಾವನೆ ಬರುವದು ಬಹಳ ಅಗತ್ಯವಾಗಿದೆ ಯಾರು ದೇವರ ಸೇವೆ ಮಾಡುತ್ತಾರೆ ಅಂತವರು ಸಧಾ ಸುಖಿಯಾಗಿ ಜೀವನದಲ್ಲಿ ಬಾಳುತ್ತಾರೆ ಎಂದು ಹಿರನಾಗಾಂವ ಮಠದ ಪೀಠಾಧಿಪತಿ ಶ್ರೀ ಜಯಶಾಂತಲಿಂಗ ಸ್ವಾಮಿ ನುಡಿದರು. ತಾಲೂಕಿನ ಹಿರನಾಗಾಂವ ಗ್ರಾಮದಲ್ಲಿರುವ ಅಂಬಾ ಭವಾನಿ ಮಂದಿರದಲ್ಲಿ ಆಯೋಜಿಸಿದ ನಾಡ ದಸರಾ ಹಬ್ಬದ ನಿಮಿತ್ಯ ದೇವಿಯ ಪುರಾಣ ಕಾರ್ಯಕ್ರಮದ ಏಳನೇ ದಿನದ ಪುರಾಣ ಗೋಷ್ಠಿಯಲ್ಲಿ ದಿವ್ಯಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.
ದೇವಿಯ ಮಹಾತ್ಮೆ ಬಹಳ ದೊಡ್ಡದು ಯಾರು ಭಕ್ತಿಯಿಂದ ನಡೆದುಕೊಂಡು ಹೋಗುತ್ತಾರೆ ಅಂತವರಿಗೆ ದೇವಿ ಕೈಬಿಡುವವಳಲ್ಲ ಎಂದ ಅವರು ಪುರಾಣ ಕೇಳಿ ಬಿಡಬಾರದು ಅದರಿಂದ ಯುವ ಪೀಳಿಗೆಗಳಿಗೆ ಸದುಪಯೋಗವಾಗ ಬೇಕೆಂಬುದೆ ನಮ್ಮ ಮೂಲ ಉದ್ದೇಶವಾಗಿದೆ ಎಂದರು. ನಮ್ಮ ಮಹಾ ತಾಯಿ ಅಂಬಾ ಭವನಾನಿ ಯಾರ ಕನಸ್ಸಿನಲ್ಲಿ ಬಂದು ಬೇಡಿದವಳಲ್ಲ ಮಗುವಿನಂತೆ ಬಂದು ಆಶಿರ್ವಾದ ನೀಡುವ ಮಹಾತಾಯಿಯಾಗಿದ್ದಾಳೆ ಎಂದರು. ಗದ್ದುಗೆ ಮೇಲೆ ಕುಳಿತವರು ಗುರುವಾಗಿರಬಹುದು ಆದರೆ ಕೆಳಗೆ ಕುಳಿತರು ಯಾವುತ್ತು ಮಗುವಾಗಿ ಸಾಮಾನ್ಯ ವ್ಯಕ್ತಿಯಾಗುತ್ತಾರೆ ಎಂದರು. ಸ್ವಾಮಿಯಾದವರು ಹರಿವ ನೀರಾಗಬೇಕೆ ವಿನಹ ನಿಂತ ನೀರು ಆಗಬಾರದು ಎಂದರು ಘಟದಿಂದ ಮಟ ಬೆಳೆಯ ಬೇಕೆ ವಿನಹ ಮಠದಿಂದ ಘಟ ಬೆಳಗಬಾರದು ಎಂಬುದನ್ನು ಹಾನಗಲ್ಲ ಕುಮಾರ ಸ್ವಾಮಿಗಳು ಹೇಳಿದ್ದಾರೆ ಇದನ್ನು ಎಲ್ಲರು ಅರಿತುಕೊಳ್ಳಬೇಕು ಎಂದರು, ಮನುಷ್ಯನಿಗೆ ಎಲ್ಲವು ಸಂಪತ್ತು ಇರಬೇಕು ಅದರ ಜೋತೆಗೆ ಗರ್ವ ಅಹಂಕಾರ ವಿರಬಾರದು ಅದರಿಂದ ಏನು ಸಾಮ್ರಾಜ್ಯ ಸಾಧಿಸಲು ಅಸಾಧ್ಯ ಎಂದರು. ಇವತ್ತು ಯುವಕರೆಲ್ಲರು ಕೆಟ್ಟ ಚಟಗಳಿಗೆ ಬಲಿಯಾಗುವಂತ್ತಾಗಿದೆ ಸುಂದರ ಸಮಾಜ ಹಾಳಾಗುತ್ತಿದೆ ಇದಕ್ಕೆ ಕಡಿವಾಣ ಹಾಕಲು ಪ್ರತಿಯೋಬ್ಬರು ಅಧ್ಯಾತ್ಮದ ಕಡೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಉಪದೇಶ ನೀಡಿದರು. ಈ ಭೂಮಿ ಮೇಲೆ ಯಾವುದು ಶಾಸ್ವತವಾಗಿ ಉಳಿಯುವದಿಲ್ಲ ಆದರೆ ಮನುಷ್ಯ ಮಾಡಿದ ಒಳ್ಳೆಯ ಕಾರ್ಯಗಳನ್ನು ಉಳಿಯುತ್ತವೆ ಎಂದರು, ಹೋನ್ನಿಗಾಗಿ ಬಂದಾತನಲ್ಲ ಹೆಣ್ಣಿಗಾಗಿ ಬಂದಾತನಲ್ಲ ವ್ಯಸನಕ್ಕಾಗಿ ಬಂದಾತನಲ್ಲ ನಮ್ಮ ಶರಣರಲ್ಲಿ ಭಕ್ತಿ ಪಥ ತೋರಲು ಬಂದಂತ ಭಕ್ತಿಯನ್ನು ಶರಣರು ಸಾರಿದ್ದಾರೆ ಎಂದರು. ಸಾನಿಧ್ಯ ವಹಿಸಿದ ಕಲ್ಲುರಿನ ಶ್ರೀ ಮೃತುಂಜಯ ಶಿವಾಚಾರ್ಯರು ಮಾತನಾಡಿ ಮನುಷ್ಯನ ಜೀವನದಲ್ಲಿ ಭಕ್ತಿ ಭಾವ ದೇವರ ಪೂಜೆ ಮಾಡುವದನ್ನು ಕಲಿತರೆ ಬದುಕಿನ ಬಂಡಿ ಸರಳವಾಗಿ ಸಾಗುತ್ತದೆ ಯಾವುದೆ ಅಡೆ ತಡೆ ಕೇಡು ಗಂಡಾಂತರಗಳು ಬರುವದಿಲ್ಲ ಎಂದರು. ಪುರಾಣ ಆಲಿಸುವದರಿಂದ ಅನೇಕ ಲಾಭಗಳು ಸಿಗುತ್ತವೆ ಎಂದರು.
ಡೊಂಗರಗಾಂವ ಆಶ್ರಮದ ಶ್ರೀ ಉದಯರಾಜೇಂದ್ರ ಶಿವಾಚಾರ್ಯರು ಮಾತನಾಡಿದರು. ರಾಜೋಳಾದ ವೇದ ಮೂರ್ತಿ ಕಾರ್ತಿಕಯ್ಯ ಸ್ವಾಮಿ, ಪಂಚಾಕ್ಷರಿ ಸ್ವಾಮಿ ಗೋರ್ಟಾ, ಬಾಬು ಕೋಟಗಾ, ಲೋಕನಾಥ ಹಳ್ಳಿಖೇಡ (ಕೆ) ಇವರಿಂದ ಸಂಗೀತ ಸೇವೆ ನಡೆಸಿದರು. ಈ ಸಂದರ್ಬದಲ್ಲಿ ಗ್ರಾಮದ ಮುಖಂಡರಾದ ರಾಯಣ್ಣಾ ಬಾಬನೋರ, ಶಿವಶರಣ್ಪ ಪಾಟೀಲ್, ನಾಗಣ್ಣಾ ಕಮಟೆ, ಶಿವರಾಯ ಇಪ್ಪಿ, ನಾಗಶೆಟ್ಟಿ ಪಟ್ಟೆದಾರ, ಹಾರಕೂಡನ ಗೌತಕ ಕೌಡಾಳೆ ಮುಂತಾದವರು ವೇಧಿಕೆಯಲ್ಲಿ ಉಪಸ್ಥಿತರಿದ್ದರು. ಮಾಣಿಕಪ್ಪ ದಾಸ್ರೆ ಕಾರ್ಯಕ್ರಮ ನಿರೂಪಿಸಿದರು.

ಅದ್ದೂರಿಯಾಗಿ ಜರುಗಿದ ದುರ್ಗಾಮಾತೆಯ ಭವ್ಯ ಮೆರವಣಿಗೆ
ರಾಮದುರ್ಗ:ಅ.19- ದಸರಾ ಹಬ್ಬದ ನಿಮಿತ್ಯ ವಿಜಯದಶಮಿ ದಿನವಾದ ಶುಕ್ರವಾರ ದುರ್ಗಾಮಾತಾ ಪ್ರತಿಮೆಯ ಭವ್ಯ ಮೆರವಣಿಗೆ ಪಟ್ಟಣದಲ್ಲಿ ಅದ್ದೂರಿಯಾಗಿ ನಡೆಯಿತು.ಒಂಬತ್ತು ದಿನಗಳ ವರೆಗೆ ಕಾರ್ ಸ್ಟ್ಯಾಂಡ್ ಹತ್ತಿರದ ಗ್ರಾಮದೇವಿಯ ಕಟ್ಟೆಯ ಮೇಲೆ ದುರ್ಗಾಮಾತಾ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿತ್ತು. ಪ್ರತಿನಿತ್ಯ ಸ್ವಾತಂತ್ರ್ಯವೀರ ಸಾವರಕರ್ ಪ್ರತಿಷ್ಠಾಣ ಹಾಗೂ ಸಾರ್ವಜನಿಕ ಉತ್ಸವ ಕಮಿಟಿಯ ಶ್ವೇತ ವಸ್ತ್ರದಾರಿಗಳು ಒಂಬತ್ತು ದಿನಗಳ ವರೆಗೆ ಬೆಳಗಿನ ಜಾವ ದುರ್ಗಾಮಾತಾ ದೌಡ್ ನಡೆಸಿದರು.
ವಿಜಯದಶಮಿ ದಿನವಾದ ಶುಕ್ರವಾರ ದೇವಿಯ ಪ್ರತಿಮೆಯನ್ನು ಅಲಂಕಾರಿಕ ವಾಹನದಲ್ಲಿ ಪಟ್ಟಣ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ದಾರಿಯುದ್ದಕ್ಕೂ ಮನೆಗಳ ಮುಂದೆ ರಂಗೋಲಿ, ಗಲ್ಲಿಗಲ್ಲಿಗಳಲ್ಲಿ ತಳಿರು ತೋರಣ ಕಟ್ಟಿ ಶೃಂಗರಿಸಲಾಗಿತ್ತು. ಸಾವಿರಾರು ಶ್ವೇತ ವಸ್ತ್ರದಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕೊಲ್ಲಾಪೂರದ ಕರವೀರ ಗರ್ಜನಾ ಡೋಲ್ ಪಥಕ ಮೇಳದ ಮಹಿಳೆಯರು ಹಾಗೂ ಪುರುಷರು ಸೇರಿ ಒಟ್ಟು 87 ಸದಸ್ಯರು ಆಕರ್ಷಕ ಡೋಲ್ ಬಾರಿಸುವ ಮೂಲಕ ಮೆರವಣಿಗೆ ಕಳೆಯನ್ನು ಹೆಚ್ಚಿಸಿದರು.