ನೆನಪಿನಂಗಳದಿ

ಜೀವನ ಎಂದರೆ “ದೇವ ಪಯಣ’, ದೇವ ಯಾತ್ರೆ, ಎಷ್ಟೇ ಕಷ್ಟಗಳು ಬಂದರೂ ನಿಲ್ಲದೆ ಸಾಗಬೇಕು ಜೀವನ ಪಯಣ, ಜೀವನ ನಿಂತ ನೀರಲ್ಲ ನಿರಂತರ ಬದಲಾವಣೆ ಅದರ ನಿಯಮ. ನಮ್ಮ ಹಿತಕ್ಕೂ ಪರರ ಹಿತಕ್ಕೂ ಕಷ್ಟಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಕಷ್ಟ-ನಷ್ಟ ಅನುಭವಿಸುವ ಮನಸ್ಥಿತಿ ಜೀವನಕ್ಕೆ ಏಳ್ಗೆ ತಂದು ಕೊಡುತ್ತದೆ. ಜಗತ್ತಿನಲ್ಲಿ ಯಾವುದೂ ಪರಿಫೂರ್ಣವಲ್ಲ, ಎಲ್ಲವೂ ಅಪೂರ್ಣ ಇಂಥ ಅಪೂರ್ಣತೆಯಲ್ಲಿ ಪೂರ್ಣತೆಯನ್ನು ಪಡೆಯುವ ಪ್ರಯಾಸ ಅದುವೇ ಸಾಧನೆ.


ಹೀಗೆ ಜೀವನದಲ್ಲಿ ನಮ್ಮ ತಂದೆ ದಿವಂಗತ ರಾಚಯ್ಯ ವೀರಯ್ಯ ಹಿರೇಮಠ ಹಿರೇಮುನವಳ್ಳಿ ಇವರು ಬದುಕಿನುದ್ದಕ್ಕೂ ಎಚ್ಚರಿಕೆಯಿಂದ ಜೀವನ ಸಾಗಿಸಿದವರು. ಬೇರೊಬ್ಬರ ಸೊಬಗು ಕಂಡು ಅಸೂಯೆ ಪಡಲಿಲ್ಲ. ಎಲ್ಲರನ್ನೂ ಅಪ್ಪಿಕೊಂಡು ವಿಶಾಲ ಮನೋಭಾವನೆ ಹೊಂದಿ, ಬದುಕಿ-ಬಾಳಿ ಮರೆಯಾದರು ಪರೋಪಕಾರಕ್ಕೆ ತಮ್ಮ ಜೀವನ ಮೀಸಲಿಟ್ಟಿದ್ದರು. “ದೇಹಿ” ಎಂದವರಿಗೆ ಕೊಡುಗೈ ದೊರೆಯಾಗಿ ಬಾಳಿದರು. ತನು-ಮನ-ಧನದಿಂದ ಸಹಾಯ ಮಾಡಿದರು. ಅಂತರಂಗ ಬಹಿರಂಗಗಳೆರಡಲ್ಲೂ ನಿರ್ಮಲ ಮನಸ್ಸಿನ ಭಾವವನ್ನು ತುಂಬಿಕೊಂಡು ಜನರ ಪ್ರೀತಿಗೆ ಪಾತ್ರರಾಗಿದ್ದರು. ನಾನು ನನ್ನದೆಂಬ ಅಹಂಕಾರ ಅವರ ಹತ್ತಿರ ಎಂದೂ ಸುಳಿಯಲಿಲ್ಲ. ಇನ್ನೊಬ್ಬರ ಸುಖದಲ್ಲಿಯೇ ತಮ್ಮ ಸುಖವನ್ನು ಕಂಡರು. ಆತ್ಮ ಸಾಕ್ಷಿಗನುಗುಣವಾಗಿ ಬದುಕಿದರು. ಸಮಾಜದ, ಗ್ರಾಮದ ಜನರ ಮನಸ್ಸಿನಲ್ಲಿ ಸತ್ಯದ ಅರಿವನ್ನು ಮೂಡಿಸಿದರು. ಸಣ್ಣ ಪುಟ್ಟ ಕ್ಷುಲ್ಲಕ ಸಂಗತಿಗಳಿಗೆ ಮಹತ್ವ ಕೊಡದೇ ಮನಸ್ಸನ್ನು ತಿಳಿಯಾಗಿಟ್ಟುಕೊಂಡು ಸುಂದರ ಬದುಕನ್ನು ಸಾಗಿಸಿದರು. ತಾಯಿ ಸಂತೋಷಿಸುವಂತೆ ತಂದೆ ಆನಂದಿಸುವಂತೆ, ಸಹೋದರ-ಸಹೋದರಿಯರು ಪ್ರೀತಿಸುವಂತೆ ಪತ್ನಿ-ಪುತ್ರರು-ಪುತ್ರಿಯರು ಹೆಮ್ಮ ಪಡುವಂತೆ ಬಂಧುಗಳು ಸಂಭ್ರಮಿಸುವಂತೆ, ಸೊಸೆಯಂದಿರು ಮೊಮ್ಮಕ್ಕಳು ಆತ್ಮೀಯತೆ ತೋರಿಸುವಂತೆ ಸತ್ಯವಾದ ಜೀವನ ಸಾಗಿಸಿದರು. ಇದೇ ಭಗವಂತನೊಲಿಸುವ ಜೀವನ ಎಂದರೆ ಅತೀಶಯೋಕ್ತಿಯಾಗಲಿಕ್ಕಿಲ್ಲ. ದಾನ-ಧರ್ಮ ಮಾಡಿ ಸಂಪಾದಿಸಿದ ಪುಣ್ಯ ಇವೆಲ್ಲ ಅವರಿಗೆ ಕಾವಲಾಗಿ ನಿಂತು ಸಂತೃಪ್ತ ಜೀವನ ನಡೆಸಿದ ಹೆಮ್ಮೆ ಅವರದಾಗಿದೆ. ಅವರ ಪುಣ್ಯ ದಿನದಂದು ನಾವೆಲ್ಲರೂ ಅವರನ್ನು ಸ್ಮರಿಸುತ್ತವೆ.


ಇದೇ ಸಂದರ್ಭದಲ್ಲಿ ನಮ್ಮ ತಂದೆಯವ ಚಿಕ್ಕ ತಮ್ಮ
21-09-2018 ರಂದು ಚಿಕ್ಕವರಿಗೆ ಉಪದೇಶಿಸುತ್ತ ಶಿವನ ಸಾನಿಧ್ಯ ಸೇರಿದರು. ಇವರು ಸಹ ತಮ್ಮ ಅಣ್ಣನ ಮಾರ್ಗದಲ್ಲಿಯೇ ಬದುಕನ್ನು ಸವೆಸಿದರು. ಭೂಮಿ ತಾಯಿಯ ಸೇವೆ ಮಾಡುತ್ತ ಎಲ್ಲರಿಗೂ ಬೇಕಾಗಿ ಸುಂದರ ಬದುಕನ್ನು ಸವೆಸಿದರು. ಮೃದುಭಾಷಿಯಾಗಿ ಹೃದಯ ವೈಶಾಲ್ಯತೆಯಿಂದ, ಎಲ್ಲರನ್ನೂ ಪ್ರೀತಿಸುತ್ತ ಜೀವನ ಸಾಗಿಸಿದರು. ಫಲಾಪೇಕ್ಷವಿಲ್ಲದೆ ದುಡಿದರು. ಸಂತೋಷದಿಂದ ಕೆಲಸ ನಿರ್ವಹಿಸಿದರು. ಸ್ವಹಿತದ ಜೊತೆಗೆ ಪರರ ಹಿತ ಬಯಸಿದರು. ಅತೀ ಬಯಸದೆ “ತೂಕದ ಬಯಕೆ” ಯಿಂದ ಸಂತೃಪ್ತ 87 ವಸಂತಗಳನ್ನು ಕಂಡು ರಾತ್ರಿ ಆಹಾರ ಸೇವಿಸಿ, ಮಾತನಾಡುತ್ತಲೇ ಇದ್ದಾಗ ಹೃದಯ ಸ್ತಂಭನ ನಿಂತು ಜೀವ ದೇವರಲ್ಲಿ ಲೀನವಾಯಿತು. ಅವರನ್ನು ಕೂಡ ನಾವೆಲ್ಲರೂ ಸ್ಮರಣೆಗೈಯುತ್ತೇವೆ.

 

ತಾಳ್ಮೆಯ ಸಾಕಾರ ಮೂರ್ತಿ ಶ್ರೀ. ಎಸ್.. ವಿಭೂತಿ
ಲೋಕದೊಳಗೆ ಹುಟ್ಟಿದ ಬಳಿಕ
ಸ್ತುತಿ ನಿಂದೆಗಳು ಬಂದರೆ
ಮನದಲ್ಲಿ ಕೋಪವೇ ತಾಳದೇ ಸಮಾಧಾನಿಯಾಗಿರಬೆಕು
ಅಕ್ಕಮಹಾದೇವಿ
ಜೀವನದಲ್ಲಿ ಸುಖಬಂದಾಗ ಸಂತೋಷ ಪಡುವುದು. ಕಷ್ಟ ಬಂದಾಗ ದುಖಃ ಪಡುವುದು ಸಹಜವೆ. ಆದರೆ ಸ್ಥಿತ ಪ್ರಜ್ಞರಾಗಿ, ಸಮಾಧಾನಿಯಾಗಿ ಜೀವಿಸುವುದು ಒಂದು ಕಲೆ.
ಈ ದಿಸೆಯಲ್ಲಿ 93ನೇ ವಯಸ್ಸಿನ ಶ್ರೀ. ಎಸ್.ಎ. ವಿಭೂತಿ ಅವರು ಬದುಕಿರುಷ್ಟು ಕಾಲ ಸಂತೃಪ್ತ ಜೀವನ ನಡೆಸಿಕೊಂಡು ಬಂದಿದ್ದಾರೆ. ಸಾಮರಸ್ಯದ ಸುಂದರ ದಾಂಪತ್ಯ ಜೀವನ ನಡೆಸಿ, ಪುತ್ರರರಿಗೆ ಪುತ್ರಿಯರಿಗೆ ಆದರ್ಶಪ್ರಾಯರಾಗಿದ್ದಾರೆ. ತೀವ್ರ ಹಂಬಲ, ಸತತ ಪರಿಶ್ರಮದಿಂದ ತಮ್ಮನ್ನು ತಾವು ಅರಿತುಕೊಂಡು ಆತ್ಮ ವಿಶ್ವಾಸದಿಂದ ಜೀವನ ಸಾಗಿಸಿದ್ದಾರೆ. ಹೃದಯಾಂತರಾಳದಲ್ಲಿ ಚೈತನ್ಯದ ಚೆಲುಮೆ ತುಂಬಿಕೊಂಡು, ಬಲ್ಲವರ ಅಭಿಪ್ರಾಯಗಳನ್ನು ಕಡೆಗಣಿಸದೆ ಸಕಾರಾತ್ಮಕ ಆಲೋಚನೆಗಳಿಂದ ಜೀವನದ ಮೆಟ್ಟಿಲುಗಳನ್ನು ಏರಿ ಬಂದಿದ್ದಾರೆ. ಸರಿದಾರಿಯಲ್ಲಿ ಬದುಕಿದ್ದಾರೆ. ಆಚಾರ. ವಿಚಾರ, ನಿಯಮಗಳಡಿ ಜೀವನದ ಸೌಂದರ್ಯ ಹೆಚ್ಚಿಸಿಕೊಂಡಿದ್ದಾರೆ.


ತಾವು ಉದ್ಯೋಗಿಯಿದ್ದಾಗಲೂ ಒಳ್ಳೆಯ ಕೆಲಸ ಮಾಡಿ ಸೈ ಎನಿಸಿಕೊಂಡವರು ನಿವೃತ್ತಿ ನಂತರವೂ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಸಿಕೊಂಡು ಸಾರ್ಥಕ ಬದುಕನ್ನು ಬದುಕಿದ್ದಾರೆ. 93ರ ಇಳಿ ವಯಸ್ಸಿನಲ್ಲೂ ಬದುಕಿನಲ್ಲಿಯ ಕಾರ್ಮೋಡಗಳನ್ನು ಸರಿಸಿ ಮುಂದಡಿ ಇಟ್ಟು ಜೀವನದ ಪಯಣ ಮುಂದುವರೆಸಿದ್ದಾರೆ. ಧರ್ಮಪತ್ನಿಯ ಅಗಲಿಕೆಯಿಂದ ತುಸು ವಿಚಲಿತರಾದರು. ಅದು ಸಹಜವೇ ಸಹ ಆದರೆ ದೃತಿಗೆಡದೆ ಮಕ್ಕಳು ಮೊಮ್ಮಕ್ಕಳು ಪ್ರೀತಿಯ ಸೆಳೆತಕ್ಕೆ ತಮ್ಮ ದುಃಖ ದುಮ್ಮಾನಗಳನ್ನು ಬದಿಗಿಸಿರಿ ಜೀವನವೆಂಬ ನದಿಯಲ್ಲಿ ಈಜಬೇಕು ಇದ್ದು ಜಯಿಸಬೇಕು ಎಂಬ ಛಲದಿಂದ ಜೀವನ ಸಾಗಿಸುತ್ತಿದ್ದಾರೆ. ಮನಸ್ಸನ್ನು ಹಗುರವಾಗಿಸಿಕೊಂಡು ಮೃದುವಾಗಿಸಿಕೊಂಡು ಸುಂಧರ ಜೀವನ ಕಟ್ಟಿಕೊಂಡಿದ್ದಾರೆ. ದಿ. ಡಾ. ಮ.ನ.ಪ್ರ. ಶಿವಬಸವ ಮಹಾಸ್ವಾಮಿಗಳು ರುದ್ರಾಕ್ಷಿಮಠ ನಾಗನೂರ, ಬೆಳಗಾವಿ ಹಾಗೂ ಈಗಿನ ಡಾ. ಮ.ನಿ.ಪ್ರ. ಸಿದ್ಧರಾಮ ಶ್ರೀಗಳು ರುದ್ರಾಕ್ಷಿಮಠ ನಾಗನೂರ, ಬೆಳಗಾವಿ ಅವರ ಪರಮ ಶಿಷ್ಯರಾಗಿದ್ದಾರೆ. ಶ್ರೀ. ಎಸ್.ಎ.ವಿಭೂತಿ ಅವರ ಅಭಿನಂದನ ಸಮಾರಂಭ ಯಶಸ್ವಿಯಾಗಿ ಜರುಗಲೆಂದು ಶುಭಾಹಾರೈಸುವೆ.

  • ಎಸ್.ಆರ್.ಹಿರೇಮಠ
    ಆಂಜನೇಯ ನಗರ, ಬೆಳಗಾವಿ.

ಚದುರಂಗದಲ್ಲಿ ರಾಜ್ಯಮಟ್ಟದಲ್ಲಿ ಮಿಂಚಿದ ಸಹೋದರಿಯರು
ಚದುರಂಗ ಕ್ರೀಡೆಯಲ್ಲಿ ತಮ್ಮ ಸ್ವಪ್ರಯತ್ನದಿಂದ ತಾಲೂಕಾ, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಮಿಂಚುತ್ತಿರುವ ಬೈಲಹೊಂಗಲ ಪಟ್ಟಣದ ಸಹೋದರಿಯರಾದ ದೀಪಾ ಮತ್ತು ಸಾಕ್ಷಿ ಇವರು ಉತ್ತಮ ಉತ್ಸಾಹಿ ಚದುರಂಗ ಕ್ರೀಡಾ ಪಟುಗಳಾಗಿ ಬೆಳೆದಿದ್ದಾರೆ.
ಈ ಸಹೋದರಿಯರು ಚದುರಂಗ ಆಟದಲ್ಲಿ ಯಾವ ಕೋಚರನಿಂದ ತರಬೇತಿ ಪಡೆಯದೇ ಮನೆಯಲ್ಲಿ ತಾವೇ ಚೆಸ್ ಆಡುವುದನ್ನು ಕಲಿತು ಚದುರಂಗ ಆಟದಲ್ಲಿ ಆಸಕ್ತಿ ಹೊಂದಿ ಉತ್ತಮ ಕ್ರೀಡಾ ಪಟುಗಳಾಗಿದ್ದಾರೆ. ಶಾಲೆಗಳಲ್ಲಿ ನಡೆಯುವ ಕ್ರೀಡಾಕೂಟ, ವಲಯ ಮಟ್ಟ, ತಾಲೂಕಾ ಮಟ್ಟದ, ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದಾರೆ. ಇವರಿಬ್ಬರ ಕಿರು ಪರಿಚಯ ಹೀಗಿದೆ.


ಬೈಲಹೊಂಗಲ ಪಟ್ಟಣದ ಮಧ್ಯಮ ವರ್ಗದ ಕಡಬಿ ಕುಟುಂಬದ ದಂಪತಿಗಳಾದ ತಂದೆ ಬಸವರಾಜ ತಾಯಿ ಭಾರತಿ ಇವರ ಉದರದಲ್ಲಿ ಜನಿಸಿದ ದೀಪಾ ಹಾಗೂ ಸಾಕ್ಷಿ ಇವರು ಶಾಲಾ ರಜೆಗಳಲ್ಲಿ ಅಜ್ಜಿಯ ಊರಿಗೆ ಹೋದಾಗ ಅಲ್ಲಿ ಸಮಯ ಕಳೆಯಲು ತಮ್ಮ ಸೋದರ ಮಾವನ ಜೊತೆಗೆ ಮನೆಯಲ್ಲಿ ಚದುರಂಗ ಆಟವನ್ನು ಕಲಿತರು. ಅನಂತರ ಶಾಲೆಗಳಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುತ್ತಿದ್ದರು. ಹಿರಿಯ ಪುತ್ರಿ ದೀಪಾ ಕಡಬಿ ಇವಳು ಸಧ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಾಳೆ. ಕಿರಿಯವಳು ಸಾಕ್ಷಿ ಕಡಬಿ ಇವಳು ಶ್ರೀ ಖಾಸ್ಗತೇಶ್ವರ ಶಿಕ್ಷಣ ಸಂಸ್ಥೆಯ ಆಕ್ಸಫರ್ಡ ಆಂಗ್ಲಮಾಧ್ಯಮ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತದ್ದಾಳೆ.
ಎಷ್ಟೋ ಮಕ್ಕಳಲ್ಲಿ ಅನೇಕ ಪ್ರತಿಭೆಗಳಿದ್ದರೂ ಅವರಿಗೆ ಸರಿಯಾದ ಮಾರ್ಗದರ್ಶಕರಿಲ್ಲದೇ ಅವರ ಪ್ರತಿಭೆ ಮರೆಯಾಗುತ್ತಿವೆ. ನಮ್ಮ ಗ್ರಾಮೀಣ ಪ್ರದೇಶದ ಅದರಲ್ಲೂ ಹೆಣ್ಣು ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕಾಗಿದೆ. ಈ ಇಬ್ಬರೂ


ಸಹೋದರಿಯರು ವಲಯ, ತಾಲೂಕಾ, ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ ಪತ್ರಗಳನ್ನು ಟ್ರೋಫಿಗಳನ್ನು ಹಾಗೂ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಇವರಿಬ್ಬರೂ ಮೊದಲೂ ಆಕ್ಸಫರ್ಢ ಶಾಲೆಯ ವಿದ್ಯಾರ್ಥಿಗಳಾಗಿದ್ದು ವಿದ್ಯಾಭ್ಯಾಸದಲ್ಲೂ ಮುಂದಿದ್ದು ಒಳ್ಳೆಯ ಆದರ್ಶ ವಿದ್ಯಾರ್ಥಿಗಳಾಗಿದ್ದಾರೆ. ಇನ್ನಿತರ ಚಟುವಟಿಕೆಗಳಾದ ಪ್ರಭಂದ ಸ್ಪರ್ಧೆ, ಓಟದ ಸ್ಪರ್ಧೆ ಮುಂತಾದ ಸ್ಪರ್ಧೆಗಳಲ್ಲಿಯೂ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ. ದೀಪಾ ಕಡಬಿ ಇವಳು ಚದುರಂಗ ಸ್ಪರ್ಧೆಯಲ್ಲಿ ಎರಡು ಭಾರಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಳೆ. ಸಾಕ್ಷಿ ಕಡಬಿ ಇವಳು ಎರಡೂ ಭಾರಿ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ಈ ಭಾರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ತಂದೆಯನ್ನು ಕಳೆದುಕೊಂಡ ಇವರಿಬ್ಬರೂ ತಾಯಿಯ ನೆರಳಲ್ಲಿ ಬೆಳೆಯುತ್ತಿದ್ದಾರೆ. ತಾಯಿಯ ಎರಡು ಕಣ್ಣುಗಳಂತಿರುವ ಇವರು ರಾಷ್ಟ್ರ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಭಾಗವಹಿಸಿ ಜಯಗಳಿಸಬೃಕೆಂಬುದೇ ಇವರ ತಾಯಿಯ ಆಸೆ ಅಲ್ಲದೇ ಇದು ನಮ್ಮ ನಿಮ್ಮೆಲ್ಲರ ಆಸೆಯೂ ಕೂಡ ಆಗಿದೆ. ಇವರಿಬ್ಬರೂ ರಾಷ್ಟ್ರ ಮಟ್ಟದ ಕ್ರೀಡಾಪಟುಗಳಾಗಬೇಕೆಂದು ಹಾರೈಸೋಣ.

  • ಮಹಾಂತೇಶ ಜಿ. ರೇಶ್ಮಿ
    ಬೈಲಹೊಂಗಲ

ಸಾಮಾನ್ಯರ ಸ್ವಾಮೀಜಿ : ನೊಂದವರ ಸೇವೆಯಲ್ಲಿಯೇ ಲಿಂಗಪೂಜೆ ಕಂಡವರು
ನಾಡಿನ ಹೆಸರಾಂತ ಮಠಗಳಲ್ಲಿ ಒಂದಾದ ಗದಗ-ಡಂಬಳ ತೋಂಟದಾರ್ಯ ಸಂಸ್ಥಾನ ಮಠದ 19 ನೇ ಪೀಠಾಧಿಪತಿಗಳಾದ ಡಾ.ತೋಂಟದ ಸಿದ್ಧಲಿಂಗ ಸ್ವಮೀಜಿ ಅವರ ಅಗಲಿಕೆ ಅವರ ಅಸಂಖ್ಯ ಭಕ್ತರಿಗೆ ಸಹಿಸಲಾಗದಷ್ಟು ನೋವೂಂಟು ಮಾಡಿದೆ.


1974 ರಲ್ಲಿ ಡಾ. ಸಿದ್ಧಲಿಂಗ ಶ್ರೀಗಳು ಗದಗ-ಡಂಬಳ ತೋಂಟದಾರ್ಯ ಸಂಸ್ಥಾನ ಮಠದ 19 ನೇ ಪೀಠಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದರು. ಸಮಾಜದಲ್ಲಿನ ಅಸಮಾನತೆ, ಮೇಲು ಕೀಳುಗಳೆಂಬ ಬೇಧಭಾವ, ಮೂಢ ನಂಬಿಕೆ, ಕಂದಾಚಾರಗಳ ವಿರುದ್ಧ ಅವಿರತ ಹೋರಾಟ ಹಾಗೂ ಜಾಗೃತಿ ಮೂಡಿಸುವಲ್ಲಿ ಅವರ ಸೇವೆ ಅವಿಸ್ಮರಣೀಯ.


ಸಾಮಾನ್ಯರ ಸ್ವಾಮೀಜಿ ಎಂದೇ ಖ್ಯಾತರಾಗಿದ್ದ ಶ್ರೀಗಳು ಶಿವಶರಣರ ವಚನಗಳಿಂದ ಪ್ರಭಾವಿತರಾಗಿ, ವಚನ ಸಾಹಿತ್ಯ ಪ್ರಚಾರಕ್ಕೆ ವಿಶೇಷ ಸೇವೆ ಸಲ್ಲಿಸಿದ್ದಾರೆ. ಬಸವ ಧರ್ಮ ದೀಕ್ಷೆ ನೀಡುವ ಮೂಲಕ ದೇಶದಾಚೆಗೂ ಬಸವ ಧರ್ಮ, ತತ್ವಗಳನ್ನು ವಿಸ್ತರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ದಿನ, ದಲಿತರ, ಶೋಷಿತರ, ನೊಂದವರ ಸೇವೆಯೇ ಲಿಂಗಪೂಜೆ ಎಂದು ಸಿದ್ಧಲಿಂಗ ಶ್ರೀಗಳು ಭಾವಿಸಿದ್ದರು. ಯಾದಗಿರಿ, ಬಳ್ಳಾರಿ ಸೇರಿದಂತೆ ಹಿಂದುಳಿದ ಜಿಲ್ಲೆಗಳಲ್ಲಿ ವಸತಿ ನಿಲಯಗಳ ಸ್ಥಾಪನೆಗ ಭೂಮಿ ದಾನ ಹಾಗೂ ರೈತರಿಗಾಗಿ 3 ಸಾವಿರ ಎಕರೆ ಭೂಮಿ ಮತ್ತು ಮಠ, ಮಂದಿರ, ಮಸೀದಿಗಳ ಸ್ಥಾಪನೆಗಾಗಿ ಭೂಮಿಯನ್ನು ದಾನ ಮಾಡಿದ್ದರು. 1974 ರಿಂದಲೂ ಶ್ರೀಮಠದಲ್ಲಿ ಶಿವಾನುಭವ ಕಾರ್ಯಕ್ರಮ ಆಯೋಜಿಸುವ ಮೂಲಕ ಆಧ್ಯತ್ಮೀಕ, ಧಾರ್ಮಿಕ, ಕೃಷಿ, ಗ್ರಾಮೀಣ, ಮಾನವಶಾಸ್ತ್ರ, ನಾಡು, ನುಡಿ, ಸಾಹಿತ್ಯ, ಕಲೆ, ಸಂಸ್ಕøತಿ, ಇತಿಹಾಸ, ಮಹನೀಯರ ಸ್ಮರಣೆ, ಗಣ್ಯಮಾನ್ಯರ ಜೀವನ


ಚರಿತ್ರೆ ಕೃತಿಗಳ ಮುದ್ರಣ ಮುಂತಾದ ಅಮೂಲ್ಯ ಕಾರ್ಯಕ್ರಮಗಳ ಆಯೋಜನೆ ಒಂದು ದಾಖಲಾರ್ಹ ಕಾರ್ಯ ಎಂದು ಹೇಳಬಹುದು.
ಲಿಂಗಾಯತ ಪ್ರತೇಕ ಧರ್ಮ ಹೋರಾಟ :


ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಸದಾ ಸಿದ್ಧಲಿಂಗ ಸ್ವಾಮೀಜಿ ಅವರು ಮುಂಚೋಣಿಯಲ್ಲಿ ಇದ್ದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮ ಎಂದು ಮಾನ್ಯತೆ ನೀಡಲು ಮುಂದಾದಾಗ ಅದಕ್ಕೆ ಶ್ರೀಗಳು ಬೆಂಬಲ ಸೂಚಿಸಿದ್ದರು. ರಾಜ್ಯ ಸರ್ಕಾರ ನಿರ್ಧಾರ ಸ್ವಾಗತಿಸಿದ್ದ ಶ್ರೀಗಳು ಸಮಾಜದ ಹಿತ ಹಾಗೂ ಬೆಳವಣಿಗೆ ದೃಷ್ಠಿಯಿಂದ ಲಿಂಗಾಯತ ಸ್ವತಂತ್ರ ಧರ್ಮವಾಗಬೇಕು ಎಂಬ ಹೋರಾಟದ ಮುಂಚೋಣಿಯಲ್ಲಿ ಇದ್ದರು.


ಮಹದಾಯಿಗಾಗಿ ಶ್ರೀಗಳ ಹೋರಟ :ಉತ್ತರ ಕರ್ನಾಟಕದ ಜೀವಜಲ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ತಿರುವು ಯೋಜನೆಯ ಸಮಸ್ಯೆ ಕುರಿತು ರೈತರು ನಡೆಸುತ್ತಿದ್ದ ಹೋರಾಟ ಬೆಂಬಲಿಸಿ ರೈತರ ಜೊತೆ ಶ್ರೀಗಳು ಕೂಡಾ ಬೀದಿಗಿಳಿದು ಹೋರಾಟಕ್ಕೆ ಜೀವ ತುಂಬಿದ್ದರು.
ಕಪ್ಪತ್ತಗುಡ್ಡ ರಕ್ಷಣೆಗ ಶ್ರೀಗಳ ಅಹೋರಾತ್ರಿ ಹೋರಾಟ : ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಖ್ಯಾತಿ ಪಡೆದಿರುವ, ಕಪ್ಪತ್ತಗುಡ್ಡ ಸಂರಕ್ಷಿತ ಅರಣ್ಯ ಪ್ರದೇಶ ಘೋಷಣೆಗೆ ಆಗ್ರಹಿಸಿ ನಡೆದ ಹೋರಾಟಗಳನ್ನು ಶ್ರೀಗಳು ಬೆಂಬಲಿಸಿದ್ದರು. ನಗರದಲ್ಲಿ ಅಹೋರಾತ್ರಿ 3 ದಿನಗಳ ಉಪವಾಸ ಸತ್ಯಾಗ್ರಹ ಕೂಡಾ ಶ್ರೀಗಳು ನಡೆಸಿದ್ದರು. ಗಣಿಗಾರಿಕೆಯ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಉಪನ್ಯಾಸ ನೀಡಿದ್ದರು. ಬೀದಿ ನಾಟಕಗಳನ್ನು ಆಯೋಜಿಸಿ ಕಪ್ಪತ್ತಗುಡ್ಡ ಮಹತ್ವವನ್ನು ಸಾರಿದ್ದರು.


ಕನ್ನಡ ನಾಡು ನುಡಿಗಾಗಿ ಶ್ರೀಗಳು ಬೀದಿಗೀಳಿದು ಹೋರಾಟ ಮಾಡಿದ್ದು, ಸ್ಮರಣಾರ್ಹ. ಗೋಕಾಕ ವರಿದಿ ಅನುಷ್ಠಾನಕ್ಕಾಗಿ ಮುಂಚೋಣಿಯಲ್ಲಿ ನಿಂತು ಸರ್ಕಾರವನ್ನು ಎಚ್ಚರಿಸಿದ್ದರು.


ಶ್ರೀಗಳನ್ನು ಅರಸಿಬಂದ ಪ್ರಶಸ್ತಿಗಳು :ನಾಡು, ನುಡಿ, ಸಾಹಿತ್ಯ, ವಚನ ಸಾಹಿತ್ಯ, ಬಸವತತ್ವ, ಕೋಮು ಸೌಹಾರ್ದತೆ, ಸಮಸಮಾಜ ನಿಮಾರ್ಣ ನಿಟ್ಟಿನಲ್ಲಿ ತೋಂಟದಾರ್ಯ ಶ್ರೀಗಳ ಸೇವೆ ಪರಿಗಣಿಸಿ 1994 ರಲ್ಲಿ ಗುಲ್ಬರ್ಗ ವಿವಿಯಿಂದ ಡಿಲಿಟ್ ಪದವಿ, 1995 ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, 2001 ರಲ್ಲಿ ಕೋಮು ಸೌಹಾರ್ದತಾ ಹಾಗೂ ದೇಶದ ಏಕತಾ ರಾಷ್ಟ್ರೀಯ ಪ್ರಶಸ್ತಿ ಹಾಗೂ 2009 ರಲ್ಲಿ ಬಸವ ಪುರಸ್ಕಾರಗಳು ಶ್ರೀಗಳನ್ನು ಅರಸಿಕೊಂಡು ಬಂದು ಸಂದಿವೆ.


ಆನಾನುರಾಗಿ, ಸಮಾಜೀಕ ಕ್ರಾಂತಿಯ ಹರಿಕಾರರಾಗಿದ್ದ ಶ್ರೀಗಳು ಇಂದು ಅಪಾರ ಭಕ್ತರನ್ನು ಅಗಲಿದ್ದಾರೆ. ಶ್ರೀಗಳ ಅಗಲಿಕೆಯಿಂದ ಅವಳಿನಗರದಲ್ಲಿ ನೀರವ ಮೌನ ಆವರಿಸಿದೆ.

  • ಮೌನೇಶ ಸಿ. ಬಡಿಗೇರ, ಗದಗ