ನಾಗರಪಂಚಮಿ ನಾಡ ಹೆಣ್ಣಿಗೆ ಹಬ್ಬ ನಾಗರಪಂಚಮಿ ನಾರೀಮಣಿಗಳ ಹಬ್ಬ

ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿ. ಶ್ರಾವಣ ಬಂತೆಂದರೆ ಸಾಕು ಹಬ್ಬಗಳ ಸುರಿಮಳೆಯೇ ಆರಂಭ. ಹಸನಾದ ಹೊಲದಲ್ಲಿ ಹಸಿರಾದ ಬೆಳೆ ಕಂಡು ರೈತರ ಮೊಗದಲ್ಲಿ ಸಂಭ್ರಮ. ರೈತರ ಸಂಭ್ರಮಕ್ಕೆ ಆಷಾಢ-ಶ್ರಾವಣದ ಮಳೆ, ಇಳೆಯಲ್ಲಿನ ಹಸಿರುಸಿರಿ ಕಳೆಯನ್ನೊದಗಿಸುತ್ತವೆ.


ನಾಗರಪಂಚಮಿ ನಾಡಿಗೆ ದೊಡ್ಡ ಹಬ್ಬ. ನಾಡಿನ ಹೆಣ್ಣುಮಕ್ಕಳಿಗೆಲ್ಲ ಅಚ್ಚುಮೆಚ್ಚಿನ ಹಬ್ಬ. ಜಾನಪದರು ಆಚರಿಸುವ ಅನೇಕ ಹಬ್ಬಗಳಲ್ಲಿ ನಾಗರಪಂಚಮಿಯೂ ಒಂದು. ಹಬ್ಬಕ್ಕೂ ಮುಂಚೆಯೇ ಅಣ್ಣ-ತಮ್ಮಂದಿರು ತಮ್ಮ ತಂಗಿಯನ್ನು ತವರಿಗೆ ಕರೆದೊಯ್ಯುವುದಕ್ಕೆ ಬರುತ್ತಾರೆ. ಬರದಿದ್ದಾಗ ಅಕ್ಕ-ತಂಗಿಯರು “ಪಂಚಮಿ ಬಂತವ್ವ ಸನಿಯಾಕ; ನಮ್ಮಣ್ಣ ಬರಲಿಲ್ಲ ಕರಿಯಾಕ” ಎಂದು ತವರಿನ ಹಾದಿಯನ್ನೆ ನೋಡುತ್ತಿರುತ್ತಾರೆ. ಅವರಿಗೆ ಬಾಲ್ಯದ ಗೆಳತಿಯರ ನೆನಪು; ಅವ್ವನ ಕೈಯ ರುಚಿ; ಆಟವಾಡಿದ ಅಂಗಳ ಇವುಗಳನ್ನು ನೋಡುವಾಸೆ, ಜೋಕಾಲಿ
ಜೀಕುವಾಸೆ. ಗೆಳತಿಯರೊಡನೆ ಮತ್ತೆ ಕುಣಿದಾಡುವಾಸೆ; ಹೀಗೆಯೇ ಮಳೆಗಾಲದ ಹಸಿರಸಿರಿಯನ್ನು ನೋಡುತ್ತ ಜಾನಪದ ಗರತಿಯೊಬ್ಬಳು ತನ್ನ ಮನದಿಂಗಿತವನ್ನು ವ್ಯಕ್ತಪಡಿಸುತ್ತಾಳೆ.


ಚಲಿಸುವ ಕರಿಮೋಡ ಬಿರುಸಿನ ಮಳೀ ತಂತು
ಹಸನಾದ ಬಾಳಿಗೆ ಹುಲುಸಾದ ಬೆಳೀ ಬಂತು |
ನಾಡಿಗೆ ದೊಡ್ಡ ನಾಗರ ಪಂಚಮಿ ಹಬ್ಬ ಬಂತು
ನಾನೀರುವ ಬಾಗಿಲೀಗೆ ದೊರೆ ಅಣ್ಣನ ಕರೆತಂತು |
ನಾಗರಪಂಚಮಿ ಹಬ್ಬದ ಹಿನ್ನಲೆ
ಜನಪದರಿಗೆ ಭೂಮಿ ದೈವಕ್ಕೆ ಸಮ. ಅಂತೆಯೇ ಹಲವು ಹಬ್ಬಗಳ ಮೂಲಕ ಮಣ್ಣು(ಭೂಮಿ) ಪೂಜಿಸುವುದು ರೂಢಿ. ಹೀಗೆ ಮಣ್ಣನ್ನು ಪೂಜಿಸುವುದರ ಸಲುವಾಗಿಯೇ ಮಣ್ಣಿನಿಂದ ಮಾಡಿದ ನಾಗಪ್ಪ, ಗಣಪ, ಗುಳ್ಳವ್ವ, ಬಸವ, ಗೌರಿ ಮತ್ತು ಕಾಮನ ಮೂರ್ತಿಗಳನ್ನು ಆಯಾ ಹಬ್ಬಗಳಲ್ಲಿ ಪೂಜಿಸುತ್ತಾರೆ.


ನಾಗರಪಂಚಮಿಯಲ್ಲಿ ಹುತ್ತದ ಮಣ್ಣಿನ ನಾಗಪ್ಪನನ್ನು ಮಾಡಿ, ನಾಡಿನ ಅಕ್ಕ-ತಂಗಿಯರೆಲ್ಲ ತವರಿಗೆ ಬಂದು ಹಾಲು ಎರೆಯುತ್ತಾರೆ. ಜನಪದರ ಎಲ್ಲ ಆಚರಣೆಗಳಿಗೆ ಸಾಮಾನ್ಯವಾಗಿ ಎರಡು ಹಿನ್ನಲೆಗಳಿವೆ. ಒಂದು ಪೌರಾಣಿಕ ಹಿನ್ನಲೆ; ಮತ್ತೊಂದು ತನ್ನ ಅನುಭವದಿಂದ ಬಂದದ್ದು ಹಾಗೂ ಕೃಷಿಗೆ ಪೂರಕವಾದಂತದ್ದು. ನಾಗರಪಂಚಮಿ ಹಬ್ಬ ಇಲ್ಲಿ ಎರಡನೆಯ ವಿಧಕ್ಕೆ ಸೇರಿದ್ದು. ಏಕೆಂದರೆ ನಾಗರಪಂಚಮಿ ಬೆಳೆದು ಬಂದ ಕತೆಯನ್ನು ಜನಪದರು ಪೂರ್ವಿಕರ ಅನುಭವದ ಹಿನ್ನಲೆಯನ್ನು ಹೀಗೆ ಬಿಚ್ಚಿಡುತ್ತಾರೆ.
ಒಂದಾನೊಂದು ಕಾಲದಲ್ಲಿ ತನ್ನ ಹೊಲದಲ್ಲಿ ಒಬ್ಬ ರೈತ ಉಳುಮೆ ಮಾಡುವಾಗ ರಂಟೆಯ ಕುಳಕ್ಕೆ ಹಾವಿನ ಮರಿಗಳು ಸಿಕ್ಕು ಸತ್ತುಹೋಗುತ್ತವೆ. ಆ ದೃಶ್ಯವನ್ನು ಕಂಡ ಹಾವುಗಳ ತಾಯಿ ಕುಪಿತಗೊಂಡು; ರೈತನ ಮನೆಯವರನ್ನೆಲ್ಲ ಕಚ್ಚಿ ಸಾಯಿಸುತ್ತದೆ. ರೈತನ ಉಳಿದೊಬ್ಬ ಮಗಳನ್ನು ಕಚ್ಚಿ ಸಾಯಿಸಬೇಕೆಂದು ಹಾವು ಅವಳ ಊರಿಗೆ ಹೋಗುತ್ತದೆ. ಅವಳು ಆಗ ಗಂಡನ


ಮನೆಯಲ್ಲಿ ಮಣ್ಣಿನ ನಾಗಪ್ಪನನ್ನು ಮಾಡಿ ಶ್ರದ್ಧೆ ಭಕ್ತಿಯಿಂದ ಪೂಜಿಸುತ್ತಿರುತ್ತಾಳೆ. ತಾಯಿ ಹಾವಿಗೆ ತನ್ನ ಕೋಪವೆಲ್ಲ ಆಗ ಕರಗಿಹೋಗುತ್ತದೆ.
ಹಾಲೆರೆಯುತ್ತಿದ್ದ ಆಕೆಗೆ ಹಾವು ಅವಳ ವಂಶದವರನ್ನೆಲ್ಲ ಕಚ್ಚಿಕೊಂದ ಸುದ್ದಿಯನ್ನು ತಿಳಿಸಲಾಗಿ; ಅವಳು ದುಃಖತಪ್ತಳಾಗಿ ಅಳತೊಡಗುತ್ತಾಳೆ. ನಂತರ ಅವಳು ತನ್ನ ಬಂಧುಬಳಗವನ್ನೆಲ್ಲ ಬದುಕಿಸಿ ಕೊಡು ಎಂದು ಹಾವಿಗೆ ಗೋಗರೆದು ಬೇಡುತ್ತಾಳೆ. ಕರುಣೆಯುಳ್ಳ ತಾಯಿ ಹಾವು ರೈತನ
ಮಗಳೊಂದಿಗೆ ತವರಿಗೆ ಬಂದು ಎಲ್ಲರ ದೇಹದಲ್ಲಿದ್ದ ವಿಷವನ್ನು ಹೀರಿ ಪುನಃ ಬದುಕಿಸುತ್ತದೆ. ಆಗ ಎಲ್ಲರೂ ನಾಗಮಹಿಮೆಯನ್ನರಿತು ‘ನಾಗಪೂಜೆ’ ಮಾಡಿದರು. ಇದರಿಂದಲೇ ನಾಗರಪಂಚಮಿಯ ಸಂಪ್ರದಾಯ ಬೆಳೆದುಬಂದಿದೆ. ಇದು ನಡೆದದ್ದು ಶ್ರಾವಣ ಶುದ್ಧ ಜಾತಿ ಚೌತಿ ಪಂಚಮಿ ದಿನದಂದು. ಆ ಕಾರಣದಿಂದಲೇ ಅಕ್ಕ-ತಂಗಿಯರು ಗಂಡನ ಮನೆಯಲ್ಲಿದ್ದರೆ ತವರೂರಿಗೆ ಅವರನ್ನು ಕರೆತರುವ ರೂಢಿಯಿದೆ.


ಜನಪದರು ನಾಗಪಂಚಮಿ ಆಚರಣೆಗೆ ಇನ್ನೊಂದು ಕಥೆಯನ್ನು ಈ ರೀತಿ ಹಿನ್ನಲೆಯಾಗಿ ಹೇಳುತ್ತಾರೆ. ಅಣ್ಣನೊಬ್ಬ ಸುಂದರವಾಗಿದ್ದ ತನ್ನ ತಂಗಿಯನ್ನು ಪಕ್ಕದೂರಿನ ಸಿರಿವಂತನಿಗೆ ಮದುವೆ ಮಾಡಿಕೊಡುತ್ತಾನೆ. ಶ್ರಾವಣ ಮಾಸದಲ್ಲಿ ಅವಳನ್ನು ತವರಿಗೆ ಕರೆಯಲು ಅಣ್ಣ ಬರುತ್ತಾನೆ. ಅಣ್ಣನೊಡನೆ ಸಂತೋಷದಿಂದ ತಂಗಿ ಗಂಡನ ಮನೆಯವರು ಕೊಟ್ಟ ಬಂಗಾರದ ಆಭರಣಗಳನ್ನೆಲ್ಲ ತೊಟ್ಟು, ಅವನೊಟ್ಟಿಗೆ ಬಂಡಿಯೇರುತ್ತಾಳೆ. ತಂಗಿಯ ಮೈಮೇಲಿನ ರೇಷ್ಮೆ ಸೀರೆ, ಬಂಗಾರದೊಡವೆಗಳನ್ನು ಕಂಡ ಅಣ್ಣ ಅವಳನ್ನು ಸಾಯಿಸಲು ಆಭರಣ ಕದಿಯಲು ಸಂಚು ಮಾಡುತ್ತಾನೆ. ಮಾರ್ಗ ಮಧ್ಯದಲ್ಲಿ ಕಾಸಿನ ದುರಾಸೆಯಿಂದ ಅಣ್ಣನು ತಂಗಿಯನ್ನು ಬಂಡಿಯಿಂದ ಇಳಿಸಿ; ಅವಳ ಮೇಲೆ ಬಂಡೆಯನ್ನೆತ್ತಿ ಹಾಕಿ ಸಾಯಿಸಲು ಮುಂದಾಗುತ್ತಾನೆ.


ಆದರೆ ಕಲ್ಲುಬಂಡೆಯ ಕೆಳಗಿದ್ದ ಹಾವೊಂದು ಅಣ್ಣನನ್ನು ಕಚ್ಚಿ ಸಾಯಿಸುತ್ತದೆ. ಆಗ ತಂಗಿಯು
ದುಃಖದಿಂದ ಅಳುತ್ತಾ, ನಾಗದೇವನನ್ನು ಪ್ರಾರ್ಥಿಸುತ್ತಾಳೆ. ತಂಗಿಯ ಬೇಡಿಕೆಯಂತೆ ಪುನಃ ಅಣ್ಣನಿಗೆ ಜೀವ ಬರುತ್ತದೆ. ಈ ಘಟನೆ ನಡೆದದ್ದು ಶ್ರಾವಣ ಮಾಸದಲ್ಲಿಯೇ ಎಂದು ಜನಪದರು ನೆನಪಿಸಿಕೊಳ್ಳುತ್ತಾರೆ. ಹಾಗಾಗಿ ಇವೆರಡು
ಘಟನೆಗಳ ಫಲವಾಗಿ ನಾಗರಪಂಚಮಿ ಅಕ್ಕ-ತಂಗಿಯರ ಹಬ್ಬ.
ನಾಗರ ಪಂಚಮಿ ನಾಡಹೆಣ್ಣಿಗೆ ಹಬ್ಬ
ನಾಗಪ್ಪಗ್ಹಾಲ ಎರಿಯೋಣ | ನನ ಗೆಣತಿ
ನಾಗರ ಹೆಡಿಯ್ಹಾಂಗ ಆಡೋಣ |
ನಾಗರಪಂಚಮಿಯು ನಾಲ್ಕು ದಿನದ ಹಬ್ಬ. ಮೊದಲನೇ ದಿನ ರೊಟ್ಟಿಪಂಚಮಿ, ಎರಡನೇ ದಿನ ನಾಗ ಚೌತಿ, ಮೂರನೇ ದಿನ ನಾಗಪಂಚಮಿ ಹಾಗೂ ನಾಲ್ಕನೇ ದಿನ
ವರ್ಷತೊಡಕು. ಹೀಗೆಯೇ ಒಟ್ಟಾರೆ ನಾಲ್ಕುದಿನ ಹಬ್ಬವನ್ನು
ಆಚರಿ ಸುವ ಪರಂಪರೆ ರೂಢಿಯಲ್ಲಿದೆ. ನಾಗರ ಪಂಚಮಿ ಹೆಣ್ಣುಮಕ್ಕಳ ಹಬ್ಬ. ತಮ್ಮ ಗಂಡನ ಮನೆಯಿಂದ ತವರಿಗೆ ಬಂದು ಬಾಲ್ಯದ ಗೆಳತಿಯರ ಕೂಡಿ ಸುಖ-ದುಃಖವನ್ನು ಹಂಚಿಕೊಳ್ಳುವರು.
ರೊಟ್ಟಿ ಪಂಚಮಿ
ಶ್ರಾವಣದ ಜಿಟಿಜಿಟಿ ಮಳೆ. ಪಚಪಚ ಕೆಸರು. ಮಠದ ಪೂಜಾರಿ ಗಂಟೆ ಸದ್ದು; ನಿತ್ಯ ಮುಂಜಾನೆ ಭಜನೆ, ಪೂಜೆ, ಅಭಿಷೇಕ. ಸಾಲುಸಾಲಾಗಿ ವೃತ; ಮತ್ತೆ ಪುರಾಣ, ಕೀರ್ತನೆಗಳು; ಆಗಾಗ ತೀರ್ಥ-ಪ್ರಸಾದದ ಸವಿ. ಇವು ಇಷ್ಟೂ ನಾಗರಪಂಚಮಿ ಹಬ್ಬದ ಜೊತೆಯಲ್ಲಿನ ಸಡಗರ. ಸಡಗರಕ್ಕೆ ಕಳೆಯೇ ಮನೆಯ ಹೆಣ್ಣುಮಕ್ಕಳು. ಗಂಡನ ಮನೆಯಿಂದ ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ಆಷಾಡಕ್ಕಾಗಿ ತವರಿಗೆ ಬಂದಿರುತ್ತಾರೆ. ಆಗ ಶ್ರಾವಣ ಮಾಸದ ಶುದ್ಧ ತದಿಗೆಯ ದಿವಸ ‘ರೊಟ್ಟಿ ಪಂಚಮಿ’ ಆಚರಿಸುತ್ತಾರೆ. ಸಜ್ಜಿ ರೊಟ್ಟಿ, ರಾಗಿ ರೊಟ್ಟಿ, ಜೋಳದ ರೊಟ್ಟಿಯ ಜೊತೆಗೆ ಎಳ್ಳಿನ ಅಲಂಕಾರವುಳ್ಳ ವಿಧವಿಧ ರೊಟ್ಟಿ.
ರೊಟ್ಟಿಯ ಜೊತೆಗೆ ಮಡಕಿಕಾಳು, ಕಡ್ಲಿಕಾಳು, ಹೆಸರುಕಾಳು ಹಾಗೂ ಉಸುಳಿ ಪಲ್ಯ. ಅಲ್ಲದೇ ಕೆಂಪು ಖಾರದ ಚಟ್ನಿ, ಅಗಸಿ ಚಟ್ನಿ, ಶೇಂಗಾ ಚಟ್ನಿ ಇಷ್ಟೆಲ್ಲ ತರಹಾವೇರಿ ದೇಶಿಭಕ್ಷ್ಯಗಳನ್ನು ಸ್ವತಃ
ತಯಾರಿಸಿ ಸುತ್ತು ಹತ್ತು ಮನೆಯರೆಲ್ಲರಿಗೆ ಕೊಟ್ಟು, ತಾವುಂಡು ಸವಿಯುವ ಹಬ್ಬದೂಟವೇ ರೊಟ್ಟಿಪಂಚಮಿ. ರೊಟ್ಟಿ ಪಂಚಮಿಯ ದಿನದಂದೇ ನಾಗಪಂಚಮಿಯ ತಯಾರಿಯನ್ನು ಮನೆಯ ಹೆಣ್ಣುಮಕ್ಕಳೆಲ್ಲ ನಡೆಸುತ್ತಿರುತ್ತಾರೆ. ನಾನಾ ತರಹÀದ ಸಿಹಿ ಉಂಡೆಗಳನ್ನು ಕಟ್ಟುವಲ್ಲಿ, ಅಳ್ಳು ಹುರಿಯುವಲ್ಲಿ, ಹೊಸಬಟ್ಟೆಗಳನ್ನು ಸರಿಪಡಿಸಿಕೊಳ್ಳುವಲ್ಲಿ, ನಾಗಪೂಜೆಯ ತಯಾರಿಯಲ್ಲಿ ನಿರತರಾಗಿರುತ್ತಾರೆಂಬುದನ್ನು ಗರತಿಯೊಬ್ಬಳು ಹೀಗೆನ್ನುತ್ತಾಳೆ.
ಅಳ್ಳಿಟ್ಟು ತಂಬಿಟ್ಟು, ಮಾಡಿಟ್ಟ ಎಳ್ಳುಂಡಿ
ದಳ್ಳೂರಿ ಕಣ್ಣ ಹಣಿಯವನ | ಕೊರಳಾನ
ನಾಗ ನಿನಗೇಡಿಯೊ ಕೈಮುಗಿದು |
ನಾ ಹೋದ ಮರುದಿನಕ ಅಳ್ಳಿಟ್ಟು, ಎಳ್ಳುಂಡಿ
ಅವ್ವ ಕಟ್ಟ್ಯಾಳ ಬೆಳತನಕ | ಎಡಿಯ
ಮಾಡಿ ನೀಡ್ಯಾಳ ತಿನ್ನಾಕ
ಹೆಸರು ಹಿಟ್ಟಿನ ಉಂಡೆ, ಮಂಡಕ್ಕಿ ಉಂಡೆ, ಎಳ್ಳುಂಡೆ, ಶೇಂಗಾ ಉಂಡೆ, ಬೇಸನ್ ಉಂಡೆ, ರವಾ ಉಂಡೆ, ಬುಂದೆ ಉಂಡೆ, ದಾಣಿ ಉಂಡೆ ಹಾಗೂ ಅಂಟಿನ ಉಂಡೆಗಳನ್ನು ಪ್ರಾದೇಶಿಕವಾಗಿ ಹಬ್ಬದಲ್ಲಿ ಮಾಡುವುದು ರೂಢಿಯಲ್ಲಿದೆ.
ಹಬ್ಬದಡಿಗೆಯ ತಯಾರಿಯಲ್ಲಿ ಉತ್ಸಾಹದಿಂದ ಮನೆಯ ಎಲ್ಲ ಹೆಣ್ಣಮಕ್ಕಳು ಜೊತೆಗೂಡಿ ಕೆಲಸ ಮಾಡುತ್ತಾರೆ. ಹೆಣ್ಣುಮಕ್ಕಳು ಮನೆಯನ್ನು ಸುಣ್ಣ-ಸಾರಣೆಯಿಂದ ಶುದ್ಧಿ ಮಾಡಿದರೆ, ಗಂಡಸರು ತಳಿರು-ತೋರಣಗಳನ್ನು ಬಾಗಿಲೀಗೆ ಕಟ್ಟುತ್ತಾರೆ.
ನಾಗ ಚೌತಿ


ರೊಟ್ಟಿಪಂಚಮಿ ಮರುದಿನವೇ ನಾಗಚೌತಿ. ಶ್ರಾವಣ ಮಾಸದ ನಾಲ್ಕನೇ ದಿವಸ. ಮನೆಮಂದಿಯೆಲ್ಲ ಮುಂಜಾನೆಯೆದ್ದು ಸ್ನಾನಾದಿಗಳನ್ನು ಮುಗಿಸಿ, ಕಲ್ಲು ನಾಗರಕ್ಕೆ ಅಥವಾ ಮಣ್ಣಿನ ನಾಗಪ್ಪನಿಗೆ ಹಾಲೆರೆಯುವ ಹಬ್ಬ. ಮಣ್ಣಿನಿಂದ ಮಾಡಿದ ನಾಗಪ್ಪ ಇಲ್ಲವೇ ಸ್ವತಃ ತಾವೇ ಹುತ್ತದ ಮಣ್ಣನ್ನು ತಂದು ಮಾಡಿದ ಮಣ್ಣಿನ ನಾಗಮೂರ್ತಿಗೆ ಪೂಜೆ ನಡೆಯುವ ದಿನ.


ಕಾಬಾಳಿ, ಬಾಳೆ, ಕುಂಬಳ, ಮಂಡಲ ಎಲೆಯಲ್ಲಿ ನಾಗಪ್ಪನನ್ನು ಇಟ್ಟು ಹಂಗನೂಲು, ಕೊಕ್ಕಾಬತ್ತಿ-ಕೋಡಾಬತ್ತಿ ಹಾಕಿ, ದಾಸವಾಳ, ಕೇದಿಗೆ, ಡೇರೆ ಹೂವುಗಳನ್ನು ಏರಿಸಿ, ಮಾನಿಂಗನ ಬಳ್ಳಿಯ ಮಾಲೆ ಹಾಕಿ, ಮನೆಮಂದಿಯೆಲ್ಲ ಹೊಸ ಬಟ್ಟೆಗಳನ್ನು ಧರಿಸಿಕೊಂಡು ನಾಗಪ್ಪನಿಗೆ ಹಾಲು ಎರೆಯುತ್ತಾರೆ.

ಚಂದ್ರ ಕಾಳಿಯ ಸೀರಿ ಚಂದ್ರ ಕುಪ್ಪಸ ತೊಟ್ಟು
ಬಂದ ಹಬದಾಗ ನಲಿಯೋನ | ನಕ್ಕಾಡಿ
ಒಂದಾಗಿ ಇದ್ದು ಅಗಲೋಣ
ಗುರುದೇವ ನಿಮಪಾಲ ಹರಿಹರಕೆ
ಶರಣರ ಪಾಲಂತ ಹಾಲೆ ಎರಿಯೋನ | ಮತ್ತ
ಕಿರಿಯರಿಗೆ ಹಾಡಿ ಹರಿಸೋಣ |
ಊರ ನಾರಿಯರೆಲ್ಲ ನಾಗಪ್ಪನಿಗೆ ಹಾಲನ್ನೆರೆಯುವಾಗ ‘ದೇವರ ಪಾಲು, ದಿಂಡಿರ ಪಾಲು, ಅವ್ವನ ಪಾಲು, ಅಪ್ಪನ ಪಾಲು ಹಿರಿಯರ ಪಾಲು, ಕಿರಿಯರ ಪಾಲು ಮನೆಯವರೆಲ್ಲ ಪಾಲು ಎಂದು ಅನ್ನುತ್ತಾರೆ. ಅರ್ಧ ಒಣಕೊಬರಿಯ ಬಟ್ಟಲು (ಹೊಳಿಕೆ) ತೆಗೆದುಕೊಂಡು, ಅದರಲ್ಲಿಯೇ ಹಾಲನ್ನು ಹಾಕಿಕೊಂಡು ವೀಳ್ಯದ ಎಲೆಯಿಂದ ಹಾಲನ್ನೇರೆಯುತ್ತಾರೆ. ಹಾಲೆರೆದ ನಂತರ ಕೊನೆಯಲ್ಲಿ ‘ಹಾಲುಂಡ ಬಾಯಿ ನೀರುಣ್ಣಲಿ’ ಎಂದು ಸ್ವಲ್ಪ ನೀರನ್ನು ಹೊಯ್ಯುತ್ತಾರೆ. ಹೀಗೆಯೇ ಮನೆಯ ಗರತಿಯರೆಲ್ಲರೂ ಕೂಡಿಕೊಂಡು ನಾಗಚೌತಿಯಂದು ‘ನಾಗರಾಧನೆ’ ಕೈಗೊಳ್ಳುತ್ತಾರೆ. ಅಳ್ಳಿಟ್ಟು, ಅಳ್ಳು, ಉಸುಳೆಯನ್ನು ಬಾಳೆಲೆಯಲ್ಲಿಟ್ಟು ಎಡೆ ಮಾಡುತ್ತಾರೆ. ನಂತರ ಮನೆಮಂದಿಯೆಲ್ಲ ಸೇರಿಕೊಂಡು ಹಬ್ಬದೂಟವನ್ನು ಸವಿಯುತ್ತಾರೆ.


ನಾಗಪೂಜೆ ಹಾಗೂ ಪ್ರಸಾದವನ್ನು ಸೇವಿಸಿದ ನಂತರ ಸಾಯಂಕಾಲ ಸಮಯದಲ್ಲಿ ಗೆಳತಿಯರೆಲ್ಲ ಸೇರಿ ಯಾರದೋ ಮನೆಯಲ್ಲಿಯೋ, ಊರ ಬಯಲಲ್ಲಿಯೋ ಇಲ್ಲವೇ ಗಿಡಕ ಕಟ್ಟಿದ ಜೋಕಾಲಿಯನ್ನು ಸಾಕಾಗುವರೆಗೂ ಜೀಕುತ್ತಾರೆ. ಜೋಕಾಲಿಯ ನಾನಾ ಆಟಗಳನ್ನು ಕೆಲವೊಂದು ಹಳ್ಳಿಗಳಲ್ಲಿ ಎರ್ಪಡಿಸುತ್ತಾರೆ. ಮಕ್ಕಳೆಲ್ಲ ಕೊಬರಿ ಬಟ್ಟಲದ ಬಗರಿಯ ಆಟದಲ್ಲಿ ನಿರತರಾಗಿದ್ದಾರೆ. ಊರ ಗಂಡಸರೆಲ್ಲ ನಿಂಬೆ ಹಣ್ಣಿನ ಶರ್ಯತ್ತು, ಚಕ್ಕಡಿ ಎಳೆಯುವ ಶರ್ಯತ್ತುಗಳಲ್ಲಿ ಮನರಂಜನೆ ತೆಗೆದುಕೊಳ್ಳುತ್ತಿರುತ್ತಾರೆ. ಹೀಗೆಯೇ ತಾವು ಕಂಡುಂಡ ನೋವನ್ನು ಮರೆತು ಜನಪದರು ನಲಿವನ್ನು ಪಡೆಯುತ್ತಾ, ಹಬ್ಬದಾಚರಣೆಯೊಂದಿಗೆ, ಸಿಹಿಉಂಡಿಯನ್ನು ಮೆಲ್ಲುತ್ತಾ, ನಾಗಚೌತಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ.
ಸಾಕಾಗುತನಕ ಕೂಡಿ ಜೋಕಾಲಿ ಜೀಕೂನ
ನಾಗರ ಮಿಡಿಯಾಗಿ ಸುಳಿಯೋಣ | ವರವರುಷ
ನಾಗರ ಪಂಚಮಿಗೆ ಕೂಡೋಣ
ವಾರೀಗೆ ಗೆಳತೇರ ಕೂಡಿ ನಾವೆಲ್ಲರು ಊರ
ದೇವಿ ಗುಡಿಗ್ಹೋಗೊಣ | ನಾಗಪ್ಪಗ
ಸೂರಾಡಿ ಅರಳ್ಹಾಲ ಹೂಯ್ಯೋಣ |
ನಾಗ ಪಂಚಮಿ : ನಾಗರಹಬ್ಬದ ಮೂರನೇ ದಿನವೇ ನಾಗ ಪಂಚಮಿ. ಶ್ರಾವಣ ಶುದ್ಧ ಐದನೆಯ ತಿಥಿಯಂದೇ ನಾಗರಪಂಚಮಿ ಆಚರಣೆ. ಉತ್ತರ ಕರ್ನಾಟಕದಲ್ಲಿ ಒಳಗಿನ ಹಾಲು, ಹೊರಗಿನ ಹಾಲು ಎಂದು ಎರಡು ವಿಧದ ಆಚರಣೆಗಳಿವೆ. ಹಿಂದಿನ ದಿನ ಮನೆಯಲ್ಲಿನ ದೇವರಮನೆಯಲ್ಲಿಯೇ ಮಣ್ಣಿನ ನಾಗಪ್ಪನಿಗೆ ಹಾಲನ್ನು ಹೊಯ್ಯುತ್ತಾರೆ ಅದುವೇ ನಾಗಚೌತಿ. ನಾಗಪಂಚಮಿಯ ದಿನದಂದು ಮನೆಯ ಹಿಂದಿನ ತೊಟದಲ್ಲಿಟ್ಟು, ನಾಗರಕಟ್ಟೆಗಳಿಗೆ, ನಾಗಮೂರ್ತಿಗಳಿಗೆ, ಹುತ್ತಗಳಿಗೆ ಹಾಲೆರೆಯುವ ಸಂಪ್ರದಾಯವಿದೆ ಇದನ್ನೇ ನಾಗ ಪಂಚಮಿ ಎನ್ನುವರು. ಅಲ್ಲದೇ ಕೆಲವೆಡೆ ಬೆಲ್ಲದ ಹಾಲಿನಿಂದ ಹಾಲೆರೆಯುತ್ತಾರೆ. ನಾಗ ಪಂಚಮಿಯ ಸರಳ ನೈವೇದ್ಯವನ್ನು ಸಿದ್ಧಪಡಿಸಿರುತ್ತಾರೆ. ನೈವಿದ್ಯದಲ್ಲಿ ಕುಚ್ಚಿದ ಕಡಬು ವಿಶೇಷ. ಜನಪದರು ನಾಗ ಪಂಚಮಿಯಂದು ಕಡಬನ್ನು ಕುದಿಸುತ್ತಾರೆ ವಿನ: ಕರಿಯುವುದಿಲ್ಲ, ಎಕೆಂದರೆ ಕರಿಗಡಬು ಮಾಡಿದರೆ ನಾಗಹೆಡೆಯನ್ನು ಕರಿದಂತೆ ಎಂದು ನಂಬಿಕೆಯುಳ್ಳವರು. ಅದಕ್ಕಾಗಿಯೇ ಆ ದಿನ ಕುಚ್ಚಿದ ಕಡುಬಿನ ನೈವೇದ್ಯ. ಈ ದಿನವೇ ಹೆಣ್ಣು ನಿಶ್ಚಯಿಸಿಕೊಂಡ ಹೋದ ಗಂಡಿನಮನೆಯವರು ಸೊಸೆಯಾಗುವವಳಿಗೆ ಬೃಹತ್ ಗಾತ್ರಗಳ ಉಂಡಿ ತರುತ್ತಾರೆ. ಅಲ್ಲದೇ ಹೆಣ್ಣಿನ ಮನೆಯವರಿಂದಲೇ ಪ್ರತಿಯಾಗಿ ಉಂಡಿಗಳು ಬೆಸುಗೆಯ ಸಂಕೇತವಾಗಿ ಗಂಡಿನಮನೆಯವರಿಗೆ ವಿನಿಮಯವಾಗುತ್ತವೆ. ಇದೇ ದಿನ ಜನಪದರು ಗಂಗೆಯ ಪೂಜೆಯನ್ನು ಮಾಡುವುದರ ಮೂಲಕ ಉತ್ತಮ ಮಳೆ ಮೂಲಕ ಕೆರೆ, ಕಾಲುವೆ, ನದಿ, ಬಾವಿಗಳನ್ನು ತುಂಬಿಸೆಂದು ಗಂಗೆಯನ್ನು ಬೇಡಿಕೊಳ್ಳುತ್ತಾರೆ. ಹೆಣ್ಣು ಮಕ್ಕಳೆಲ್ಲ ಸಂತಸ ಸಡಗರವನ್ನು ಅನುಭವಿಸುತ್ತಾ, ಗಂಡನ ಮನೆಯ ನೋವುಗಳನ್ನು ಮರೆಯುತ್ತಾರೆ.
ವಾರೀಗಿ ಗೇಳತೇರ ಕೇರಿಯು ಕೆಳದೇರ
ಸೇರೆ ಒಂದೆಡೆ ಕೂಡೋಣ | ಜೋಕಾಲಿ
ತೂರಿ ಜೀಕವ ಆಡೋಣ |
ಗಂಡನ ಮನಿಯಾನ ಕಂಡ ಬಾಳುವೆ ಹಾಡಿ
ಉಂಡು ಓಡ್ಯಾಡಿ ಆಡೋಣ | ಮನೆ ಮಾತ
ಹಿಂಡಿನಾಗಾಡಿ ಮರೆಯೋಣ |
ವರ್ಷ ತೊಡಕು
ನಾಗರಪಂಚಮಿಯ ನಾಲ್ಕನೇ ದಿವಸವೇ ವರ್ಷ ತೊಡಕು. ಜನಪದರಲ್ಲಿ ರೈತರಿಗೆ ಈ ಆಚರಣೆ ಮಹತ್ವದ್ದು. ಮಣ್ಣೆತ್ತಿನ ಅಮವಾಸ್ಯೆಯ ದಿನ ಮಣ್ಣಿನ ಎತ್ತುಗಳ ಮೂರ್ತಿಗಳನ್ನು ಮಾಡಿ ಪೂಜೆ ಮಾಡಿರುತ್ತಾರೆ. ಅವುಗಳನ್ನು ತಮ್ಮ ತಮ್ಮ ಹೊಲಗಳಿಗೆ ಒಯ್ದು ವಿಸರ್ಜನೆ ಮಾಡುವುದು ಇದೇ ದಿನ. ಇದಕ್ಕೆ ಜನಪದರು ‘ಬೆಚ್ಚ ಇಡೋಡು ಅಥವಾ ಬೆಚ್ಚಿನ ಮಡಕೆ ಇಡೋದು’ ಎಂದು ಕರೆಯುತ್ತಾರೆ. ಮಡಿಕೆಗೇ ಸುಣ್ಣ ಹಚ್ಚಿ, ಮಣ್ಣಿನ ಮೂರ್ತಿಗಳನ್ನು ಹೊಲದಲ್ಲಿ ಇಟ್ಟು, ಪೂಜೆ ಮಾಡಿ ನಂತರ ಎಡೆ ಮಾಡಿದ್ದನ್ನು ಹೊಲಗಳಿಗೆ ಚರಗ ಚೆಲ್ಲುವುದು ಸಂಪ್ರದಾಯ. ಕೆಲ ರೈತರು ಅಂಬಲಿಯನ್ನು ಮಾಡಿ ತಮ್ಮ ಹೊಲಗಳಿಗೆ ಚರಗ ಚೆಲ್ಲುತ್ತಾರೆ. ಇದಕ್ಕೆ ‘ಕೆರಾಂಬ್ಲಿ’ ಎಂಬ ಹೆಸರು ಇದೆ. ಹೊಸ ಮಾಲಗಿತ್ತಿಯರು ತವರಿಗೆ ಹಬ್ಬಕ್ಕೆಂದು ಬಂದವರನ್ನು ಪುನಃ ಗಂಡನ ಮನೆಗೆ ಕಳುಹಿಸಿಕೊಡುವ ದಿನವು ಇದಾಗಿದೆ. ಅಲ್ಲದೇ ಶುಭದಿನವಾಗಿದ್ದು, ನೂತನ ಕಾರ್ಯಗಳನ್ನು ಪ್ರಾರಂಭಿಸಲು ಪ್ರಶಸ್ತ ದಿನವಾಗಿರುತ್ತದೆ. ಹೀಗೆಯೇ ನಾಗರಪಂಚಮಿ ನಾರೀಮಣಿಗಳ ಹಬ್ಬವಾಗಿ ನಾಲ್ಕು ದಿನಗಳವರೆಗೆ ಸಡಗರ-ಸಂಭ್ರಮದಿಂದ ಆಚರಿಸುತ್ತಾರೆ. ಪ್ರತಿವರ್ಷವೂ ತವರಲ್ಲಿ ಕೂಡಿದ ಗೆಳತಿಯರು ಹೀಗೆ ಹಾಡಿ ಹರಸುತ್ತಾರೆ.
ಪಂಚಮಿ ಬರಲೆವ್ವ, ಮಂಚ ಕಟ್ಟಲಿ ಮನೆಗೆ
ಕೆಂಚೆ ಗೆಳತೇರು ಕೂಡಲಿ | ನಮ್ಮ ಜೀಕ
ಮಿಂಚಿ ಮುಗಲೀಗೆ ಏರಲಿ |
ಜನಪದರ ಪ್ರತಿಯೊಂದು ಆಚರಣೆಗಳ ಹಿಂದೆಯೂ ತನ್ನದೇ ಆದ ವೈಶಿಷ್ಟ್ಯತೆ ಇರುತ್ತದೆ. ನಾಗರಪಂಚಮಿಯ ಆಚರಣೆಯಲ್ಲಿಯೂ ಜನಪದರ ಜಾಣತನ ಕಾಣುತ್ತೇವೆ. ಮಣ್ಣಿನ ನಾಗಪ್ಪನ ಮಾಡಿ ಮೊದಲಪೂಜೆ ಮಣ್ಣಿಗೆಂದು ನಿರೂಪಿಸುತ್ತಾನೆ. ಮೊದಲ ಹಬ್ಬದಲ್ಲಿಯೇ ಭೂತಾಯಿ ಆಶೀರ್ವಾದ ಪಡೆಯುತ್ತಾನೆ. ಅಲ್ಲದೇ ತಾನು ಹೊಲಗಳಲ್ಲಿ ಬಿತ್ತಿದ ಬೀಜಗಳೆಲ್ಲ ಇಲಿ, ಹುಳ-ಹುಪ್ಪಡಿಗಳ ಪಾಲಾಗಬಾರದೆಂದು ನಾಗಪೂಜೆಯ ಮೂಲಕ ಬೆಳೆಗೆ ರಕ್ಷೆ ಬೇಡುತ್ತಾನೆ. ನೆನೆದೊಡೆ ಬರುವ ನಾಗದೇವನನ್ನು ಆಶ್ರಯಿಸುತ್ತಾನೆ. ನಾಗರಪಂಚಮಿಯಂದು ಮಣ್ಣಿನ ನಾಗನನ್ನು ಪೂಜೆ ಮಾಡಿ; ವರವನ್ನು ಪಡೆಯುತ್ತಾನೆಂಬುದು ನಂಬಿಕೆಗೆ ಅರ್ಹ. ನಾಗರಪಂಚಮಿ ಹಬ್ಬಕ್ಕೆ ವೈಜ್ಞಾನಿಕ ಹಿನ್ನಲೆಯೂ ಇದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ನಾಗರಪಂಚಮಿ ಬರುವ ಹಬ್ಬ. ದೇಹದ ಉಷ್ಣತೆಯನ್ನು ಹೆಚ್ಚಿಸುವ ನಾನಾ ತರಹದ ರುಚಿಕರ ತಿನಿಸುಗಳನ್ನು ಹಬ್ಬ ತರುತ್ತದೆ. ಮಳೆಗಾಲದ ಚಳಿಯನ್ನು ಎದುರಿಸಲು ದೇಹ ಸಜ್ಜುಗೊಳ್ಳಲು ನಾಗರ ಪಂಚಮಿಯ ವಿಧ ವಿಧ ಉಂಡೆಗಳು, ಉಸುಳಿ ನೆರವಾಗುತ್ತವೆ. ಅದಕ್ಕಾಗಿಯೇ ಜನಪದರ ಆಚರಣೆಗಳಲ್ಲಿ ಋತುಮಾನ, ಕಾಲಮಾನ, ವಾತಾವರಣಕ್ಕೆ ತಕ್ಕಂತೆ ಬರುವ ಹಬ್ಬಗಳಿಗೆ ಅನುಸಾರವಾಗಿ ಭಕ್ಷ್ಯ-ಭೋಜನಗಳನ್ನು ತಯಾರಿಸುತ್ತಾರೆ. ಅಲ್ಲದೇ ದೇಹದ ಆರೋಗ್ಯದ ಸ್ಥಿತಿಯನ್ನು ಸಮಪ್ರಮಾಣದಲ್ಲಿ ಕಾಪಾಡಿಕೊಳ್ಳುತ್ತಾರೆ. ಹೀಗೆ ಬೆಳೆದು ಬಂದಿರುವ ನಾಡಿನ ಹಳ್ಳಿಹಳ್ಳಿಗಳಲ್ಲೂ ಆಚರಣೆಯಲ್ಲಿದೆ. ಆಚರಣೆಯ ಹಿಂದಿನ ವಿಜ್ಞಾನ ಎನೇ ಇರಲಿ ಹಬ್ಬಗಳು ಬಂದಾಗ ಜಡ್ಡುಗಟ್ಟಿದ ನಾಲಿಗೆ ಸುಖ-ಸವಿ ಭೋಜನ ಸವಿಯೋದು ಖಚಿತ.
ಆಕರ ಸಾಹಿತ್ಯ


ಹಳ್ಳಿಯ ಹಾಡುಗಳು -ಸಂ. ಗೊರೂರು ರಾಮಸ್ವಾಮಿ ಅಯ್ಯಂಗಾರ್,ಹಳ್ಳಿಯ ಬಾಳು- ಸಂ. ಗೊರೂರು ರಾಮಸ್ವಾಮಿ ಅಯ್ಯಂಗಾರ್,ಗರತಿಯ ಹಾಡು- ಹಲಸಂಗಿ ಗೆಳೆಯರು,ಕನ್ನಡ ಜಾನಪದ ಗೀತೆಗಳು- ಡಾ. ಬಿ.ಎಸ್. ಗದ್ದಗಿಮಠ, ಜಾನಪದ ಗೀತಾಂಜಲಿ-ದೇ.ಜವರೇಗೌಡ,ಜೀವಂತ ಜಾನಪದ -ಪ್ರೊ. ದೊಡ್ಡರಂಗೇಗೌಡ,ದುಂಡಮಲ್ಲಿಗಿ ಹೂವ ಬುಟ್ಟಿಲಿ ಬಂದಾವ - ಎಚ್.ಎಲ್. ನಾಗೇಗೌಡ,ಕನ್ನಡ ಜಾನಪದ ಕೋಶ-ಸಂ. ಎಚ್.ಎಲ್. ನಾಗೇಗೌಡ, ಟಿ.ಆರ್. ಮಹಾದೇವಯ್ಯದೇಸಿ- ಡಾ. ವೀರಣ್ಣ ದಂಡೆ
ಕನ್ನಡ ಸಂಕ್ಷಿಪ್ತ ನಿಘಂಟು- ಕನ್ನಡ ಸಾಹಿತ್ಯ ಪರಿಷತ್ತು

  • ಶಿವಾನಂದ . ಟವಳಿ
    ಕನ್ನಡ ಉಪನ್ಯಾಸಕರು, ವಿದ್ಯಾಗಿರಿ, ಧಾರವಾಡ