“ಕವಲು ದಾರಿಯಲ್ಲಿ ಇಂಜನೀಯರಿಂಗ್ ಶಿಕ್ಷಣ.........”

ಇಂದು ವಿಶ್ವವಿಖ್ಯಾತ ಸಿವ್ಹಿಲ್ ಇಂಜನೀಯರ್ ಭಾರತರತ್ನ ಸರ್ ಮೋಕ್ಷಗೊಂಡಂ ವಿಶ್ವೇಶ್ವರಯ್ಯನವರ ಜನ್ಮ ದಿನ. ತನ್ನಿಮಿತ್ತ 52ನೇ ಇಂಜನೀಯರ್ಸ್-ಡೇ (Engineer’s Day) ಆಚರಿಸುತ್ತಿದ್ದೇವೆ.

16 ಟ್ರಿಲಿಯನ್ ಡಾಲರ್ ಆರ್ಥಿಕ ಸಂಪನ್ಮೂಲವಿರುವ ಅಮೇರಿಕಾ ರಾಷ್ಟ್ರ ವರ್ಷವೊಂದಕ್ಕೆ ಕೇವಲ ಒಂದು ಲಕ್ಷ ಇಂಜನೀಯರ್‍ಗಳನ್ನು ಉತ್ಪಾದಿಸಿದರೆ, ಬರೀ 2 ಟ್ರಿಲಿಯನ್ ಡಾಲರ್ ಆರ್ಥಿಕ ಸಂಪನ್ಮೂಲವಿರುವ ಭಾರತ 15 ಲಕ್ಷ ಇಂಜನೀಯರ್‍ಗಳನ್ನು ಪ್ರತಿವರ್ಷ ತಯಾರು ಮಾಡುತ್ತಿದೆ. ಇಂದು ನಾವುಗಳೆಲ್ಲ ಡಿಜಿಟಲ್ ಇಂಡಿಯಾ ಸಂಪನ್ಮೂಲ ಸೇವೆಗಳನ್ನು ಬಳಸಿಕೊಳ್ಳುವ ಡಿಜಿಟಲ್ ಸಿಟಿಝನ್ (Digital Citizen)ಗಳಾಗಿ ಹಾಗೂ ಅಂತರ್‍ಜಾಲ ಬಳಕೆಯ (Internet) ನೆಟಿಜನ್‍ಗಳಾಗಿ (Netigen) ಬದಲಾಗುತ್ತಿದ್ದೇವೆ.

ಆದರೆ, ಆರ್ಥಿಕ ಹಿಂಜರಿತದಿಂದಾಗಿ ಬ್ಯಾಂಕುಗಳಿಂದ ಸಾಲ ತೆಗೆದುಕೊಳ್ಳುವವರಿಲ್ಲದೇ, ಕಾರು, ಇತರೆ ಮೋಟಾರು ವಾಹನ ಕೊಳ್ಳುವವರಿಲ್ಲದೆ, ತಯಾರಿಕಾ ಘಟಕದಲ್ಲಿ ದುಡಿಯುತ್ತಿರುವ ಕುಶಲಕರ್ಮಿ (ಇಂಜನೀಯರಿಂಗ್) ಉದ್ಯೋಗಿಗಳಿಗೆ ಸಂಬಳ ನೀಡುವುದು ದುಸ್ತರವಾಗಿದೆ. ಲಕ್ಷಾನುಗಟ್ಟಲೆ ಉದ್ಯೋಗಿಗಳು ನಿರ್ಮಾಣ ಮತ್ತು ಉತ್ಪಾದನಾ ಚಟುವಟಿಕೆ (No Production) ಗಳಿಲ್ಲದೇ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಆರೋಗ್ಯ, ಶಿಕ್ಷಣ ಹಾಗೂ ಕೃಷಿ ಕ್ಷೇತ್ರದಲ್ಲಿ ಇಂಜನೀಯರುಗಳ ನೇಮಕಾತಿ ಅತೀ ವಿರಳ. ಹೊಟೆಲ್, ರೆಸ್ಟೋರೆಂಟ್‍ಗಳು ಹಾಗೂ ಫೈನಾನ್ಸ್ ವಲಯದಲ್ಲಿ ಇಂಜನೀಯರುಗಳ ಸೇವೆ ಬೇಡವೇ ಬೇಡ ಎಂಬಂತಾಗಿದೆ. ಉತ್ಪಾದನಾ ವಲಯದಲ್ಲಿ ಕೇವಲ ಸಿವ್ಹಿಲ್, ಇಲೆಕ್ಟ್ರಿಕಲ್, ಮೆಕ್ಯಾನಿಕಲ್ ಇಂಜನೀಯರಿಂಗ್ ವಿಭಾಗದ ಇಂಜನೀಯರುಗಳಿಗೆ ಮಾತ್ರ ಮಣೆ ಹಾಕುತ್ತಾರೆ. ಇನ್ನುಳಿದಂತೆ ಹೆಚ್ಚಿನ ಪ್ರಮಾಣದಲ್ಲಿ ಇಂಜನೀಯರುಗಳಿಗೆ ಕೆಲಸ ಸಿಗುವುದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಾತ್ರ !.

ಅಂದಾಜು 8 ಲಕ್ಷಕ್ಕೂ ಹೆಚ್ಚು ಸೀಟುಗಳು ಇಂಜನೀಯರಿಂಗ್ ಪದವಿ ಶಿಕ್ಷಣಕ್ಕಾಗಿ ಲಭ್ಯವಿದ್ದರೂ ಭರ್ತಿಯಾಗುತ್ತಿರುವುದು ಅಂದಾಜು ಐದುವರೆ ಲಕ್ಷ ಸೀಟುಗಳು ಮಾತ್ರ! ಹೀಗೆ ಇಂಜನೀಯರಿಂಗ್ ಪದವಿ ಮುಗಿಸಿ ಬರುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಲಭ್ಯವಾಗುತ್ತಿರುವುದು ಕೇವಲು 3 ಲಕ್ಷದಷ್ಟು ಮಾತ್ರ ! ಇನ್ನುಳಿದವರಿಗೆ ಉದ್ಯೋಗ ನೆಪಮಾತ್ರಕ್ಕೆ ! ಹಲವು ಬಿ.ಇ. ಪದವಿಧರರು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ-ಬ್ಯಾಂಕುಗಳಲ್ಲಿ ಕಾರಕೂನರಾಗಿ, ಅಂಚೆ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್‍ಗಳಾಗಿ, ರೇಲ್ವೆ ಇಲಾಖೆಯಲ್ಲಿ ಮುಂಗಡ ಟಿಕೇಟ್ ಕಾಯ್ದಿರಿಸುವ ಗುಮಾಸ್ತರಾಗಿ, ಡಿಸೇಲ್ ಲೋಕೋಮೊಟಿವ್ ಇಂಜೀನ್ ಡ್ರೈವರ್‍ಗಳಾಗಿ, ಪೋಲೀಸ್ ಇನ್ಸ್‍ಪೆಕ್ಟರ್‍ಗಳಾಗಿ, ವಾಣಿಜ್ಯ ತೆರಿಗೆ ಇಲಾಖೆಗಳಲ್ಲಿ ವಿಚಕ್ಷಕರಾಗಿ ಸೇವೆ ಸಲ್ಲಿಸಲ್ಲಿಸುತ್ತಿದ್ದಾರೆ. ಇದು ತುಂಬಾ ಶೋಚನೀಯ ಸ್ಥಿತಿ! ಅಂದರೆ ತಾವು ಕಲಿತ ಇಂಜನೀಯರಿಂಗ್/ತಂತ್ರಜ್ಞಾನ ಕೌಶಲ್ಯ (Skills) ತಾವು ಮಾಡುತ್ತಿರುವ ಉದ್ಯೋಗದಲ್ಲಿ ಬಳಕೆಯಾಗುತ್ತಿಲ್ಲ. ತಮ್ಮ ಪದವಿಗೆ ತಕ್ಕ ಉದ್ಯೋಗ ದೊರೆಯದೇ ಒಂಥರಾ ಅಂಡರ್ ಎಂಪ್ಲಾಯಿಡ್ ಆಗಿದ್ದಾರೆ ಎಂದರೆ ಅತಿಶಯೋಕ್ತಿಯೇನಲ್ಲ!.ಹೀಗೆ ಹಗಲಿರುಳು ಓದಿ, ಪಡೆದ ಇಂಜನೀಯರಿಂಗ್ ಪದವಿಗೆ ತತ್ಸಮಾನ ಕೌಶಲ್ಯಾಧಾರಿತ ಕೆಲಸ ಸಿಗದಿರುವುದೇ ಇಂಜನೀಯರಿಂಗ್ ಪದವಿ ಪೂರೈಸಬೇಕೆ ಬೇಡವೇ ಎಂದು ಹಿಂತಿರುಗಿ ನೋಡುವಂತಾಗಿದೆ. ಒಟ್ಟಾರೆ ಕವಲುದಾರಿಯಲ್ಲಿದೆ ಅಭಿಯಂತರರಾಗುವ ಪದವಿ ಶಿಕ್ಷಣ.

“ಇಂಜನೀಯರಿಂಗ್ ಡೇ” ಆಚರಣೆಯ ಶುಭವಸರದಲ್ಲಿ ಕೆಲವು ಸಮಯೋಚಿತ ಸುಧಾರಣಾ ಕ್ರಮಗಳು ನಮ್ಮ ಇಂಜನೀಯರಿಂಗ್ ಪದವಿ ಶಿಕ್ಷಣಕ್ಕೆ ಬೇಕೆ ಬೇಕು. ಅವು ಹೀಗಿವೆ:
* ಗ್ರಾಮೀಣ ಭಾಗಕ್ಕೆ ಒಂದು, ತಮ್ಮ ಮತಕ್ಷೇತ್ರಕ್ಕೊಂದು ಜಿಲ್ಲೆಗೆ ಎರಡು ಎಂಬಂತೆ, ಎಲ್ಲೆಂದರೆಲ್ಲಿ ಇಂಜನೀಯರಿಂಗ್ ಕಾಲೇಜುಗಳನ್ನು ಪ್ರಾರಂಭಿಸಬೇಡಿ. ನೆನಪಿಡಿ, ನಮ್ಮ ರಾಜ್ಯದಲ್ಲೆ ಪ್ರತಿ ವರ್ಷ 20 ಸಾವಿರಕ್ಕೂ ಹೆಚ್ಚು ಸೀಟುಗಳು ಭರ್ತಿಯಾಗದೇ ಉಳಿಯುತ್ತವೆ.
* ಪ್ರಾಯೋಗಿಕ ತರಬೇತಿಗೆ ಪೂರಕವಾದ ಕಂಪ್ಯೂಟರ್‍ಗಳು, ಸಾಧನ ಸಲಕರಣೆಗಳು ಸಂಸ್ಥೆಯ ಪ್ರಯೋಗಾಲಯದಲ್ಲಿ ಸುಸ್ಥಿತಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇರಬೇಕು.
* ಕೌಶಲ್ಯಕ್ಕೆ ಒತ್ತು ನೀಡುವ ಸುಧಾರಿತ ಪಠ್ಯಕ್ರಮ, ಉದ್ಯಮಿಗಳ ಜೊತೆಗೂಡಿ ಶಿಕ್ಷಣ ತಜ್ಞರು ತಯಾರಿಸಬೇಕು. ಈ ಹೊಸ ಪಠ್ಯ ಕ್ರಮವು ಉತ್ಪಾದನಾ ಕ್ಷೇತ್ರ, ಮಾರುಕಟ್ಟೆ ಬೇಡಿಕೆಗನುಗುಣವಾಗಿ ಪ್ರತಿ 3 ವರ್ಷಗಳಿಗೊಮ್ಮೆ ಜಾರಿಯಾಗಬೇಕು.
* ಕೌಶಲ್ಯಾಧಾರಿತ ಅಲ್ಪಾವಧಿ ತರಬೇತಿಗಳನ್ನು ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರಗಳ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಲು ಪೂರಕವಾಗುವಂತೆ ಆಯೋಜಿಸಬೇಕು.
* ಭಾವಿ ಇಂಜನೀಯರುಗಳು ಉದ್ಯೋಗಕ್ಕಾಗಿ ಅಲೆಯದೇ ತಾವೇ ಸ್ವಂತ ಉದ್ಯಮ ಪ್ರಾರಂಭಿಸುವಂತೆ ವಿದ್ಯಾರ್ಥಿದೆಸೆಯಲ್ಲಿ ಪ್ರೇರೇಪಿಸಬೇಕು.

ಒಟ್ಟಾರೆ ಯುವ ಅಭಿಯಂತರರೇ
ಸಮೃದ್ಧ ಭಾರತಕ್ಕಾಗಿ
ಕಾರ್ಖಾನೆ ಕಟ್ಟಡ ಜಲಾಶಯಗಳ ಕಟ್ಟೋಣ
ಹಂಗು ತೊರೆದು ನಾಡಿನ ಉದ್ಯಮಿಗಳಾಗೋಣ
ತನ್ಮೂಲಕ ಹಲವು ಉದ್ಯೋಗಗಳ ಸೃಷ್ಟಿಸೋಣ
ಒಡೆದ ಮನಸುಗಳ ಬೆಸೆಯೋಣ ಅಭಿಯಂತರರ ದಿನಾಚರಣೆ ಚಿರಾಯುವಾಗಲಿ
ಸರ್ ಎಂ.ವಿ. ರವರು ಕಂಡು ಕನಸು ನನಸಾಗಲಿ.