ಕಾವ್ಯ ಕನ್ನಿಕೆಯ ಕನವರಿಸಿದ ಕನಸು -ನೆನಹುಗಳು

ಕೃತಿಯ ಹೆಸರು : ನಾ ನಿನ್ನ ಹಾಡಿದಲ್ಲದೆ ಸೈರಿಸಲಾರೆ
ಲೇಖಕರು : ಡಾ. ಸೋಮನಾಥ ಯಾಳವಾರ
ಪ್ರಕಾಶಕರು : ನಂದಾದೀಪ ಪ್ರಕಾಶನ, ಬಸವೇಶ್ವರನಗರ,
ಹುಮನಾಬಾದ-585330, ಜಿ: ಬೀದರ
ಪುಟಗಳು : 94 ಬೆಲೆ ರೂ. 50/-

‘ನಾ ನಿನ್ನ ಹಾಡಿದಲ್ಲದೆ ಸೈರಿಸಲಾರೆ’  ಎಂಬ ಸಂಕಲನದ 101 ಬಿಡಿ, ಬಿಡಿ ಭಾವಲಹರಿಗಳನ್ನು ಅವಲೋಕಿಸುತ್ತ ಹೋಗಿ, ಇದು ಸಾಹಿತ್ಯದ ಯಾವ ಪ್ರಕಾರಕ್ಕೆ ಸೇರಿದೆಂಬ ವಿಚಾರವು ಬರದೇ ಹೋಗಲಿಲ್ಲ. ಹೀಗಾಗಿ ಮುನ್ನಡಿ ಮತ್ತು ಲೇಖಕರ ನುಡಿಯನ್ನು ಅವಲೋಕಿಸುವ ಪ್ರಸಂಗ ಎದುರುಗೊಂಡಿತು. ಮುನ್ನುಡಿಯನ್ನು ಬರೆದಿರುವ ಡಾ. ವ್ಹಿ.ಎಸ್. ಮಾಳಿ ಅವರು ಇಲ್ಲಿಯ ಭಾವಲಹರಿಗಳನ್ನು ಹನಿಗವನ ಎಂದು ಪರಿಗಣಿಸಿ ಹೇಳಿರುವ ಈ ಮಾತು ಗಮನಕ್ಕೆ ಬಂದೀತು. ಬಿಡಿಸಿಕೊಳ್ಳಲಾಗದ ಶರಣರ ದಟ್ಟ ಪ್ರಭಾವದ ಒತ್ತಡದ ನಡುವೆಯೂ ಕಾವ್ಯ ಸಖಿಯ ಹುಡುಗಾಟ ಕುತುಹಲವನ್ನು ಕೆರಳಿಸುತ್ತದೆ. ಕವಿ ಮತ್ತು ಕವಿತೆಯ ಸಮರಸದ ಅಭಿವ್ಯಕ್ತಿಗೆ ಈ ಹನಿಗವನಗಳು ಉತ್ತಮ ನಿದರ್ಶನಗಳು. ಇವು ಬರೆದ ಕವಿತೆಗಳಲ್ಲ ; ಹೃದಯದಿಂದ ತೊಟ್ಟಿಕ್ಕಿದ ಭಾವ ಬಿಂದುಗಳು ಅಂದರೆ ಇಲ್ಲಿಯ ಅಭಿವ್ಯಕ್ತಿಗಳು ಭಾವಬಿಂದುಗಳಾಗಿ ಹೆಚ್ಚು ಅಂದರೆ ಇಲ್ಲಿಯ ಅಭಿವ್ಯಕ್ತಿಗಳು ಭಾವ ಬಂದುಗಳಾಗಿ ಹೆಚ್ಚು ಗಮನಾರ್ಹವಾಗಿವೆ. ಹೊರತಾಗಿ ಕವಿತೆಗಳಾಗಿ ಹನಿಗವನಗಳಾಗಿ ಅಲ್ಲವೆಂಬುದು ವಿಧಿತವಾಗದೇ ಇರದು. ಇನ್ನು ಲೇಖಕg ಮಾತುಗಳತ್ತ ಹೊರಳಿದಾಗ ಲೇಖಕರಾದ ಡಾ. ಸೋಮನಾಥ ಯಾಳವಾರ ಇವರು ಅತ್ಯಂತ ವಿನ್ರತೆಯಿಂದ ಹೇಳಿಕೊಂಡ ಈ ಮಾತುಗಳು ಉಲ್ಲೇಖನೀಯ : ಇಲ್ಲಿಯ ನನ್ನ ಭಾವನೆಗಳು ಎಷ್ಟರಮಟ್ಟಿಗೆ ಕಾವ್ಯತ್ವವನ್ನು ಪಡೆದುಕೊಂಡು ನಿಂತಿವೆ ಎನ್ನುವುದು ನನಗೆ ತಿಳಿದಿಲ್ಲ. ಅದನ್ನು ಸಹೃದಯಗಳು ತಿಳಿಸುತ್ತಾರೆಂದು ನಂಬಿರುವೆನು. ಇಲ್ಲಿಯ ಪದ್ಯಗಳು ಬಿಡಿ ಬಿಡಿಯಾಗಿದ್ದು ಕಾವ್ಯದ ಯಾವ ಪ್ರಕಾರಕ್ಕೆ ಸೇರುತ್ತದೆ ಎಂಬುದನ್ನು ಓದುಗರೇ ನಿರ್ಣಯಿಸುತ್ತಾರೆ.

ಈ ಕೃತಿಯು ಯಾವ ಕಾವ್ಯ ವರ್ಗಕ್ಕೆ ಸೇರಿದ್ದು ಎಂಬುದು ಮುಕ್ತ ಚರ್ಚೆಗೆ ಹಾಗೂ ಸಹೃದಯದ ನಿರ್ಣಯಕ್ಕೆ ಒಳಗೊಂಡಿದೆಂಬುದು ಲೇಖಕರ ಸ್ಪಷ್ಟ ಅಭಿಪ್ರಾಯವಾಗಿದೆ. ಒಂದು ರಚನೆ ಯಾವುದೇ ವರ್ಗಕ್ಕೆ ಸೇರಿರಲಿ, ಅಥವಾ ಭಿನ್ನ ನೆಲೆಯ ಅಭಿವ್ಯಕ್ತಿಯ ರಚನೆಯಾಗಿಯೇ ಹೊರಹೊಮ್ಮಿರಲಿ, ಅದರ ಸಾರ್ಥಕತೆಯು ಸಹೃದಯರಿಗೆ ಸಂತೋಷ ನೀಡುವುದೇ ಆಗಿರುತ್ತದೆ. ಹೀಗಾಗಿ ಸಾಮಾನ್ಯ ಓದುಗರು, ನಾ ನಿನ್ನ ಹಾಡಿದಲ್ಲದೆ ಸೈರಿಸಲಾರೆ’ ಎಂಬ ಕೃತಿಯನ್ನು ತಮ್ಮ ತಮ್ಮ ಅಭಿರುಚಿಗೆ ತಕ್ಕಂತೆ  ಬಳಸುವ ಬೆಳಗಿಸಿಕೊಳ್ಳುವ ಅವಕಾಶ ಪಡೆದುಕೊಂಡಿದ್ದಾರೆ.
ನಾ ನಿನ್ನ ಹಾಡಿದಲ್ಲದೆ ಸೈರಿಸಲಾರೆ ಎಂಬ ಸಂಕಲನದಲಿ ಅಡಕಗೊಂಡಿರುವ ರಚನೆಗಳು ರೋಚಕವಾಗಿವೆ ಮತ್ತು ಹಲವು ಹತ್ತು ವಿಷಯಗಳ ಮೇಲೆ ಬೆಳಕು ಚಲ್ಲುವಷ್ಟು ಪ್ರಖರವೂ ಅಗಿವೆ. ಅಂಥ ಕೆಲ ರಚನೆಗಳನ್ನು ಇಲ್ಲಿ ಆಯ್ದು ಕೊಡಲಾಗಿದೆ.
ನನ್ನ ಮೌನದ ತುಂಬ
ನಿನ್ನ ಧ್ವನಿಯಿದೆ
ಎಂದು ನಾ ಹೇಗೆ ತೋರಿಸಲಿ ?
ಹಾಗಾದರೆ
ಅದು ಮಾತಾಗುತ್ತದೆ
ಕವಿತೆಯಾಗುವುದಿಲ್ಲವಲ್ಲ
ಹೇ ! ನನ್ನ ಕಾವ್ಯ ಸಖಿ
ನಾನು ಸರಳವಾಗಿ
ತಿಳಿದಿದ್ದೆ
ನನ್ನ ಅಂತರಂಗದ
ಒಳಗುದಿಯನು ನೀನು
ತಿಳಿಯಬಲ್ಲೆ ಎಂದು
ಅದರೆ
ಅದು ಎದೆ ಸುಡುವ
ಬೆಂಕಿಯಾಗಿ, ಬಿರುಗಾಳಿಯಾಗಿ
ನನ್ನನ್ನೇ ಸುಡುವುದೆಂದು
ನಾನೀಗ ಅರಿತೆನು
ಹೇ ! ನನ್ನ ಕಾವ್ಯ ಸಖಿ
ಇಲ್ಲಿಯ ರಚನೆಗಳು ಕಾವ್ಯ ಸಖಿಯ ಸಲ್ಲಾಪವನ್ನು ಕಟ್ಟಿ ಕೊಡುವಲ್ಲಿ ಯಶಸ್ವಿಯಾಗಿವೆ. ರಚನೆಗಳು ಒಂದು ರೂಪ ಲಾವಣ್ಯ ಪಡೆದುಕೊಳ್ಳಬೇಕಾದ ನಿರೂಪಣಾ ಶೈಲಿ ಮತ್ತು ಲಾಲಿತ್ಯವು ಈ ಸಂಕಲನದ ವೈಶಿಷ್ಟ್ಯತೆಯಾಗಿದೆ. ಸರಾಗವಾಗಿ ಸಲೀಸಾಗಿ ಸಲ್ಲಾಪದೊಳಗೆ ಭಾಗಿಯಾಗುವ ಅನುಭವ ಓದುಗನಿಗೆ ಈ ರಚನೆಗಳಿಂದಾಗದೇ ಇರಲಾರದು. ಮನಸ್ಸಿನ ಇಕ್ಕಟ್ಟು ಬಿಕ್ಕಟ್ಟುಗಳನ್ನು ಕಾವ್ಯ ಸಖಿಯೊಂದಿಗೆ ಕವಿ ಮುಖಾಮುಖಿಯಾಗುವ ಪ್ರಸಂಗ ಸಂಗ, ಸಂಗಾತಿಯ ಕನಸು, ನೆನಪುಗಳೆಲ್ಲವೂ ಸಕಲರಿಗೂ ಆಪ್ತವಾಗುತ್ತವಲ್ಲದೆ, ವಿಚಾರಕ್ಕೂ ಸ್ಪೂರ್ತಿ ನೀಡುತ್ತವೆ ಎಂದು ಹೇಳಬಹುದಾಗಿದೆ.

ಮಮತೆ
ಕರುಣಾಮಯಿ ಆ ತಾಯಿ
ಆಕೆ ಬಂದುದು ಎಲ್ಲಿಂದ ?
ನನಗೇಕೆ ಆಸರೆಯಾಗಿ ಉಸಿರಾಗಿ ನಿಂತಿಹಳು ಗೊತ್ತಿಲ್ಲ !
ಆಕಾಶದಲಿರುವ ಚುಕ್ಕೆಯನ್ನೆಲ್ಲ ತೋರಿಸುತ್ತ
ದೂರದ ಚಂದಿರ ತೋರಿ ಕರೆಯುತ
ನನಗೇಕೆ ಕೈ ತುತ್ತು ಕೊಡುತಿಹಳು ಗೊತ್ತಿಲ್ಲ !
ಎಬ್ಬಿಸಿ ನಿಲ್ಲಿಸಿ, ನಡೆಯಲು ಕಲಿಸುತ
ತೊದಲು ತೊದಲು ನುಡಿಯ ತೀಡುತ
ನನಗೇಕೆ ಹಾಡಲು ಪಾಡಲು ಹುರಿದುಂಬಿಸುತಿಹಳು ಗೊತ್ತಿಲ್ಲ !
ಜಗದ ಆಗು ಹೋಗುಗಳ ತಿಳಿಸುತ
ಬದುಕಿನ ಮೊದಲ ಗುರುವಾಗಿ ಬೆಳಗಿಸುತ
ನನಗೇಕೆ ಶಿಸ್ತಿನ ಶಿಕ್ಷಣ ಕೊಡಿಸುತಿಹಳು ಗೊತ್ತಿಲ್ಲ !
ಬೇಕು, ಬೇಡು, ಕಷ್ಟಗಳನ್ನೆಲ್ಲ ಸಹಿಸುತ
ಮಡಿಲ ಮಲ್ಲಿಗೆಯ ಹಾಸಿಗೆಯ ಹಾಸಿ ರಕ್ಷಿಸುತ
ನನಗೇಕೆ ಮಮತೆಯ ಮಾತು ಬಿತ್ತುತಿಹಳು ಗೊತ್ತಿಲ್ಲ !
ಇಂದೇಕೊ ಆ ತಾಯಿಗೆ ಅರಳು ಮರಳು
ಕಣ್ಣರಳಿಸಿ ದಿಕ್ಕು ದಿಕ್ಕಿಗೆ ದಿಗಲಾಗಿ ಕುತಿಹಳು
ಈ ಕ್ಷಣ ನನಗೆ ಹೊತ್ತಿಲ್ಲ, ಗೊತ್ತಿಲ್ಲ ಎನ್ನುವ ಹಾಗಿಲ್ಲ !