ಕಾವ್ಯದ ಸಾಧ್ಯತೆ ಬಳಸಿಕೊಳ್ಳುವ ಹರಸಾಹಸದ `ಅಮ್ಮ’

ಕಾವ್ಯ’ ಧಾರ್ಮೀಕ ನೆಲೆಯೊಂದಿಗೆ ಗುರುತಿಸಿಕೊಂಡು ಇಂದು ಹಲವು ಹಂಬಲಗಳನ್ನು ಹಿಡಿದಿಡುವ ಮಾಧ್ಯಮವಾಗಿ ಪ್ರಚಲಿತದಲ್ಲಿದೆ. ಕಾವ್ಯವೇ ಸಾಹಿತ್ಯದ ಏಕೈಕ ಪ್ರಕಾರವಾಗಿ ಹೊರಹೊಮ್ಮಿದ ಕಾಲದಿಂದ ಹಲವು ಕವಲು ದಾರಿಯೊಳಗೆ ಮಿಂಚಿ ಮಾಯವಾದಂತೆಯೂ ಆಗಿ, ಮತ್ತೇ ಮತ್ತೆ ಹೊಸ ರೂಪತಾಳಿ ಮುನ್ನಡೆದಿದೆ. ಕನ್ನಡ ಸಾಹಿತ್ಯದಲ್ಲಿ ಕಾವ್ಯವನ್ನು ಉತ್ತುಂಗಕ್ಕೇರಿಸಿದ ಪ್ರತಿಭೆಗಳು ಸಾಕಷ್ಟಿವೆ. ಮಹಾಕಾವ್ಯ ರಚಿಸುವ ಶಕ್ತಿಯನ್ನು ಹೊಂದಿರುವ ಪ್ರತಿಭೆಗಳಿಗೂ ಕನ್ನಡದಲ್ಲಿ ಕೊರತೆಯೆನ್ನಿಲ್ಲ.
ಮಹಿಳೆಯರು`ಮಹಾಕಾವ್ಯ’ ರಚಿಸಿ ಸಾಹಿತ್ಯದ ಮೇರು ಪ್ರತಿಭೆಗಳ ಗಮನ ಸೆಳೆಯುತ್ತಿರುವುದು ವಿಶೇಷ ಉಲ್ಲೇಖನೀಯ. ‘ಕಾವ್ಯ’ ಸಾಹಿತ್ಯ ಪ್ರಕಾರದಲ್ಲಿಯೇ ಸಲೀಸು, ಸರಳವೆಂಬ ಭಾವನೆಯಿಂದಾಗಿ, ಮುಕ್ತ ಛಂದಸ್ಸಿಗೆ ಅವಕಾಶವಿರುವುದನ್ನು ಉಪಯೋಗಿಸಿಕೊಳ್ಳುವ ಹಿನ್ನೆಲೆಯಿಂದಾಗಿ ಕನ್ನಡದಲ್ಲಿ ಕಾವ್ಯ ರಚನೆಯು ಹುಚ್ಚು ಹೊಳೆಯಾಗಿ ಹರಿಯುತ್ತಲಿದೆ. ಕಾವ್ಯಾಂಶವನ್ನು ಗಮನದಲ್ಲಿಟ್ಟುಕೊಂಡು ಕಾವ್ಯ ರಚಿಸುತ್ತಿರುವವರು ವಿರಳಾತಿ, ವಿರಳವಾಗಿ ಹೋಗಿದ್ದಾರೆ. ಕಾವ್ಯದ ಸ್ವರೂಪ, ಅದಕ್ಕಿರುವ ಮೂಲಾಂಶ, ಕಲೆಗಾರಿಕೆ, ಶಬ್ದ ಬಳಿಕೆ, ರಸಗಳ ಚಲುವಿಕೆಗಳೆಲ್ಲವನ್ನು ಮನನ ಮಾಡಿಕೊಳ್ಳದೆ, ಪ್ರಾಶಕ್ಕೆ ಗಂಟು ಬಿದ್ದು, ಎನ್ನೆಲ್ಲವನ್ನು ಕಾವ್ಯ ಮಾಡುವ ಅವಸರ ಹೆಚ್ಚಾಗಿದೆ. ಇದರೊಂದಿಗೆ ಉದಯೋನ್ನುಖ ಕವಿಗಳಿಗೆ ಮಾರ್ಗದರ್ಶನದ ಕೊರತೆ ಇದೆ. ಮಾರ್ಗದರ್ಶನವಿದ್ದರೂ ಪ್ರಕಟಣೆಯ ಹಂಚ್ಚಿನಲ್ಲಿ ತಿಳಿಯದನ್ನೆಲ್ಲವನ್ನು ತಿಳಿದುದ್ದೆಲ್ಲವನ್ನು ಕಾವ್ಯ ಮಾಡಿಕೊಂಡು ಪ್ರಕಟಿಸುವವರನ್ನು ತಡೆಯಲಾರದ ಸಂಗತಿಯಾಗಿದೆ. ಕಾವ್ಯದ ತೂಕವನ್ನು ಬಿಂಬಿಸಿದರೂ ಕೇಳದ ಮನಸ್ಥಿತಿಯೊಳಗೆ ಇಂದಿನ ಕವಿಯಾಗುವವರು ಇದ್ದಾರೆ. ಪ್ರಜ್ಞಾವಂತರು ಕಾವ್ಯದ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಬರುವವರಿಗೆ ಸೂಕ್ತವಾದ ‘ಅರಿವು’ ಮೂಡಿಸುವ ಅಗತ್ಯವಿದೆ. ಇದು ಕನ್ನಡ ಕಾವ್ಯ ಪ್ರಪಂಚಕ್ಕೆ ಘನತೆ ತರುವ ಜರೂರಿ ಕೆಲಸಗಳಲ್ಲಿ ಒಂದಾಗಿದೆ. ಈ ಹಿನ್ನೆಲೆಯೊಳಗೆ ಕು.ಹೇಮಾವತಿ ಚ. ಪಾಟೀಲ ಇವರ `ಅಮ್ಮ’ ಕವನ ಸಂಕಲನವನ್ನು ಅವಲೋಕಿಸಬಹುದಾಗಿದೆ.
ಕು.ಹೇಮಾವತಿ ಚ. ಪಾಟೀಲ ಇವರು ಈ `ಅಮ್ಮ’ ಎಂಬ ಕವನ ಸಂಕನದಲ್ಲಿ 55 ಕವನಗಳನ್ನು ಪ್ರಸ್ತುತ ಪಡಿಸಿದ್ದಾರೆ. ಈ ಸಂಕಲನವು ‘ಅಮ್ಮ’ ಎಂಬ ಕವನದಿಂದ ಆರಂಭಗೊಂಡು ‘ರಾಜಕೀಯ’ ಕವನದೊಂದಿಗೆ ಮುಕ್ತಾಯಗೊಳ್ಳುತ್ತದೆ.
‘ಅಮ್ಮ’ ಸಂಕಲನದಲ್ಲಿ ಅಕ್ಷರ ಹೆಜ್ಜೆ ಇದೆ. ನಿಸರ್ಗ ಬರಗಾಲ ಶ್ರಾವಣ ಮಾಸ, ಮುಂಗಾರು ಮಳೆ, ಕಲ್ಪವೃಕ್ಷ ಮುಂತಾದವುಗಳ ಜೊತೆ ‘ಕವಿತೆ’ ಎಂಬ ಕವನವೂ ಇದೆ. ಈ ಕವಿತೆ ಎಂಬ ಕವನದಲ್ಲಿ
ಕು. ಹೇಮಾವತಿ ಚ. ಪಾಟೀಲ ಇವರು ತಮ್ಮ ಅನಿಸಿಕೆ ಹರಡಿ ಕೊಂಡಿದ್ದು ಹೀಗಿದೆ.
ಸಾಹಿತ್ಯವಿರಲಿ, ವೇದ-ಗಾದೆಗಳಿರಲಿ
ಜಾನಪದವಿರಲಿ ಅಕ್ಷರಗಳ ನಾಟ್ಯವಿರಲಿ
ಕವಿತೆ ಹೀಗಿರಲಿ
ಉಪಮಾ ಉಪಮೆಗಳಿರಲಿ, ಪ್ರಾಸಗಳಿರಲಿ
ಶಬ್ದಗಳ ಅಲಂಕಾರಗಳಿರಲಿ, ವಿಷಯವಿರಲಿ
ಕವಿತೆ ಹೀಗಿರಲಿ
‘ಕವಿತೆ’ಯ ಬಗ್ಗೆ ಅವರದೇಯಾದ ವಿಚಾರವನ್ನು ಕುಮಾರಿ ಹೇಮಾವತಿ ಚ. ಪಾಟೀಲ ವ್ಯಕ್ತಗೊಳಿಸಿದ್ದನ್ನು ಅವಲೋಕಿಸಿದರೆ ‘ಕಾವ್ಯ’ದ ಹಿಂದಿನ ಅಧ್ಯಯನವನ್ನು ಅರ್ಥೈಸಿಕೊಳ್ಳಲಾರದ ಸಂದ್ಗಿತೆಗೆ ಒಳಗಾಗಿದ್ದು ಸಹಜವೇ ಆಗಿದೆ. ಕಾವ್ಯದ ಅನುಸಂಧಾನಕ್ಕೆ ತೊಡುವುದೆಂದರೆ ಕಾವ್ಯ ಪರಂಪರೆಯನ್ನು ತಳಸ್ಪರ್ಶಿಯಾಗಿ ಅಧ್ಯಯನಶೀಲತೆಗೆ ಒಳಗಾಗಿದೆ. ಒಂದು ತಪಸ್ಸಿಗೆ ಮನಸ್ಥಿತಿಯನ್ನು ಸಜ್ಜುಗೊಳಿಸುವ
ಅಗತ್ಯವಿದೆ. ಕಾವ್ಯ ಸಾಲು, ಸಾಲುಗಳ ಲಯವೂ ಅಕದಕೆ ಅಲ್ಲ, ಲಾಲಿತ್ಯವೂ, ಪ್ರಾಶಸ್ತಗಳ ಜಂಜಡವೂ ಅಲ್ಲೆಂಬುದನ್ನು ಕಾವ್ಯ ಕಟ್ಟುವವರು ಅರಿತುಕೊಳ್ಳಲೇ ಬೇಕಾದ ಅನಿವಾರ್ಯತೆ
ಇಂದಿನದಾಗಿದೆ.