ಕಲಬೆರಕೆ ಆಹಾರದ ಕಿರಿಕಿರಿ

ತಕ್ಷಣ ಲಾಭ ಪಡೆಯಬೇಕೆಂಬುದೇ ಕಲಬೆರಕೆ ಉತ್ಪನ್ನಗಳನ್ನು ಮಾರಾಟ ಮಾಡುವ ಮುಖ್ಯ ಉದ್ದೇಶ. ಇನ್ನು ಸಂಸ್ಕರಿತ ಆಹಾರಗಳು ನಮ್ಮ ದೇಹವನ್ನು ಬಲು ಬೇಗ ಕ್ಷೀಣಿಸುವಂತೆ ಮಾಡುತ್ತವೆ. ಈ ಹಿನ್ನೆಲೆಯಲ್ಲಿ, ಕೋವಿಡ್-19ರ ನಂತರ, ನಂಬಿಕೆ ಹಾಗೂ ಗ್ರಾಹಕರ ವಿಶ್ವಾಸ ಕಾಪಾಡಿಕೊಳ್ಳಲು ಆಹಾರ ಉದ್ಯಮವು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವುದನ್ನು ನಾವು ಆದ್ಯತೆಯೊಂದಿಗೆ ಗಮನಿಸಬೇಕಾಗಿದೆ.


ಆರೋಗ್ಯಕರ ಜೀವನ ನಡೆಸಲು ನಮಗೆ ಪೌಷ್ಟಿಕ ಮತ್ತು ಸಮತೋಲಿತ ಆಹಾರ ಬೇಕು. ಒಟ್ಟಾರೆ ಆರೋಗ್ಯ ಕುರಿತಂತೆ ಕೋವಿಡ್-19 ಸಾಂಕ್ರಾಮಿಕವು ಹೊಸ ರೀತಿಯ ಆಸಕ್ತಿಯನ್ನು ಮೂಡಿಸಿದೆ. ಆರೋಗ್ಯಕರ ಆಹಾರದ ಮಹತ್ವ ಎಷ್ಟಿದೆ ಎಂಬುದನ್ನು ಈ ಸಾಂಕ್ರಾಮಿಕವು ಒತ್ತಿ ಹೇಳಿದೆ.


ಇನ್ನೊಂದೆಡೆ, ಕಲಬೆರಕೆ ಮತ್ತು ಹೆಚ್ಚು ಸಂಸ್ಕರಿಸಿದ ಆಹಾರ ಉತ್ಪನ್ನಗಳು ಇಡೀ ಜಗತ್ತನ್ನು ಆವರಿಸಿಕೊಂಡಾಗಿದೆ. ಪೆÇೀಷಕಾಂಶಗಳಿಂದ ಸಮೃದ್ಧವಾದ ಆಹಾರಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾದರೆ, ಸಂಸ್ಕರಿತ ಆಹಾರಗಳು ನಮ್ಮ ದೇಹವನ್ನು ಬಲು ಬೇಗ ಕ್ಷೀಣಿಸುವಂತೆ ಮಾಡುತ್ತವೆ. ಈ ಹಿನ್ನೆಲೆಯಲ್ಲಿ, ಕೋವಿಡ್-19ರ ನಂತರ, ನಂಬಿಕೆ ಹಾಗೂ ಗ್ರಾಹಕರ ವಿಶ್ವಾಸ ಕಾಪಾಡಿಕೊಳ್ಳಲು ಆಹಾರ ಉದ್ಯಮವು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದೆ.


ಆಹಾರ ಸಂಸ್ಕರಣೆ, ಉತ್ಪಾದನೆ ಮತ್ತು ಮಾರುಕಟ್ಟೆ, ಹೀಗೆ ಸರಪಳಿಯ ಪ್ರತಿಯೊಂದು ಹಂತದಲ್ಲಿಯೂ ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ಆಹಾರ ಉದ್ಯಮ ಅನುಸರಿಸಲೇಬೇಕು. ಆದರೆ, ಈ ರೂಢಿಯನ್ನು ಯಾವುದಾದರೂ ದೇಶೀಯ ಕೈಗಾರಿಕೆಗಳು ಅನುಸರಿಸುತ್ತವೆ ಎಂಬುದು ಅನುಮಾನಾಸ್ಪದ. ಜಾಗತಿಕ ಆಹಾರ ಭದ್ರತಾ ಸೂಚ್ಯಂಕ (ಜಿಎಫ್‍ಎಸ್‍ಐ - ಗ್ಲೋಬಲ್ ಫೂಡ್ ಸೆಕ್ಯುರಿಟಿ ಇಂಡೆಕ್ಸ್) 2019 ರಲ್ಲಿ 87.4 ಅಂಕಗಳೊಂದಿಗೆ ಸಿಂಗಾಪುರ ಅಗ್ರಸ್ಥಾನದಲ್ಲಿದ್ದು, ಐರ್ಲೆಂಡ್ (84) ಮತ್ತು ಅಮೆರಿಕ (83.7) ನಂತರದ ಸ್ಥಾನದಲ್ಲಿದೆ. 58.9ರ ಅಲ್ಪ ಪ್ರಮಾಣದೊಂದಿಗೆ 72ನೇ ಸ್ಥಾನದಲ್ಲಿರುವ ಭಾರತವು ದೇಶದ ಕಳಪೆ ಪರಿಸ್ಥಿತಿಗಳನ್ನು ಪ್ರತಿಬಿಂಬಿಸುತ್ತದೆ.


ಮಾರುಕಟ್ಟೆಯಲ್ಲಿನ ಆಹಾರ ಉತ್ಪನ್ನಗಳ ಮೂಲ, ಗುಣಮಟ್ಟ ಮತ್ತು ಶುದ್ಧತೆಯ ಕುರಿತು ಆಳವಾಗಿ ಗಮನಿಸಿದರೆ, ಅವು ಕೆಲವು ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸುತ್ತವೆ. ಜೇನುತುಪ್ಪದಲ್ಲಿ ಕಲಬೆರಕೆ ಪ್ರಮಾಣ ಎಷ್ಟಿದೆ ಎಂಬುದನ್ನು ಕಂಡುಕೊಳ್ಳಲು ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್‍ಇ) ನಡೆಸಿದ ಪರೀಕ್ಷೆಯಲ್ಲಿ ಬಹುತೇಕ ಎಲ್ಲ ಉನ್ನತ ಬ್ರಾಂಡ್‍ಗಳು ವಿಫಲವಾಗಿವೆ. ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರದ (ಎಫ್‍ಎಸ್‍ಎಸ್‍ಎಐ) ಪರೀಕ್ಷೆಗಳನ್ನು ಅಡ್ಡಮಾರ್ಗದಲ್ಲಿ ದಾಟಿಕೊಳ್ಳುವುದನ್ನು ಹಲವಾರು ಉತ್ಪನ್ನಗಳು ಕಲಿತುಕೊಂಡಿವೆ.


ಅರಿಶಿಣ, ಮೆಣಸಿನಪುಡಿ, ಸಕ್ಕರೆ, ಬೆಲ್ಲ, ಮೆಣಸು ಮತ್ತು ಅಡುಗೆ ಎಣ್ಣೆಯಲ್ಲಿ ಅಪಾಯಕಾರಿ ಮಾಲಿನ್ಯಕಾರಕಗಳ ಉಪಸ್ಥಿತಿಯು ಜೀವನಶೈಲಿಯ ಕಾಯಿಲೆಗಳ ಹೆಚ್ಚಳಕ್ಕೆ ಕಾರಣವಾಗಿದೆ.ಆರ್ಥಿಕ ಅಭಿವೃದ್ಧಿ ಸಾಧಿಸುವ ಅಂಗವಾಗಿ ಪೌಷ್ಠಿಕ ಆಹಾರಕ್ಕೆ ಸರ್ಕಾರದ ಅನುದಾನ ಹೆಚ್ಚಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‍ಒ - ವಲ್ರ್ಡ್ ಹೆಲ್ತ್ ಆರ್ಗನೈಜೇಶನ್) ಭಾರತಕ್ಕೆ ಹೇಳಿದೆ. ಫುಡ್ ಬಾರ್ನ್ ಡಿಸೀಸ್ ಬರ್ಡನ್ ಎಪಿಡೆಮಿಯಾಲಜಿ ರೆಫರೆನ್ಸ್ ಗ್ರೂಪ್ ಅಧ್ಯಯನದ ಪ್ರಕಾರ, 2011ರಲ್ಲಿ 10 ಕೋಟಿ ಭಾರತೀಯರ ಮೇಲೆ ಕಲಬೆರಕೆ ಆಹಾರವು ಪರಿಣಾಮ ಬೀರಿದೆ.


2030ರ ವೇಳೆಗೆ ಈ ಸಂಖ್ಯೆ 17 ಕೋಟಿಯನ್ನು ತಲುಪುವ ಸಾಧ್ಯತೆಯಿದೆ ಎಂದು ಕೂಡಾ ಅಧ್ಯಯನ ಹೇಳಿದೆ. ಇದರರ್ಥ, ಪ್ರತಿ 9 ಜನರಲ್ಲಿ ಒಬ್ಬರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಆಹಾರ ಮಾಲಿನ್ಯದ ಈ ಪ್ರಕ್ರಿಯೆಯಲ್ಲಿ ಹೆಚ್ಚು ಬಾಧಿತರಾಗುವವರು ಬಡವರು ಮತ್ತು ದುರ್ಬಲರು. ಇತ್ತೀಚೆಗೆ ಆಂಧ್ರಪ್ರದೇಶದ ಎಲೂರಿನಲ್ಲಿ ನೂರಾರು ಜನರನ್ನು ಬೆಚ್ಚಿಬೀಳಿಸಿದ ನಿಗೂಢ ಕಾಯಿಲೆಗೆ ಆಹಾರ ಮತ್ತು ನೀರಿನ ಕಲಬೆರಕೆಯೇ ಮುಖ್ಯ ಕಾರಣ ಎಂದು ನಂಬಲಾಗಿದೆ. ಕೋವಿಡ್-19ರ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಸರ್ಕಾರಗಳು ಮತ್ತು ನೈರ್ಮಲ್ಯ ತಜ್ಞರು ಪ್ರಾರಂಭಿಸಿದ ಜಾಗೃತಿ ಅಭಿಯಾನದ ಹೊರತಾಗಿಯೂ, ಅನೇಕ ಹೋಟೆಲ್‍ಗಳು ಮತ್ತು ಟಿಫಿನ್ ಕೇಂದ್ರಗಳು ಅಸುರಕ್ಷಿತ ಅಭ್ಯಾಸಗಳನ್ನು ಇನ್ನೂ ಅನುಸರಿಸುತ್ತಿವೆ.
ವೈದ್ಯರನ್ನು ಕಾಣುವ ಅಥವಾ ಆಸ್ಪತ್ರೆಗಳಿಗೆ ಭೇಟಿ ನೀಡುವವರ ಪೈಕಿ ಶೇಕಡಾ 20ರಷ್ಟು ರೋಗಿಗಳು ಕಲಬೆರಕೆ ಆಹಾರ ಸೇವಿಸಿರುತ್ತಾರೆ ಎಂಬುದನ್ನು ಹಲವಾರು ಅಧ್ಯಯನಗಳು ಎತ್ತಿ ತೋರಿಸಿವೆ.ತಕ್ಷಣ ಲಾಭ ಪಡೆಯಬೇಕೆಂಬುದೇ ಕಲಬೆರಕೆ ಉತ್ಪನ್ನಗಳನ್ನು ಮಾರಾಟ ಮಾಡುವ ಮುಖ್ಯ ಉದ್ದೇಶ. ಹಾಲಿನ ಸಾಂದ್ರತೆ ಹೆಚ್ಚಿಸಲು ಅಪಾಯಕಾರಿ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಕೃತಕ ಹಾರ್ಮೋನುಗಳ ಮೂಲಕ ಹಣ್ಣುಗಳನ್ನು ಅವಧಿಗೆ ಮುನ್ನವೇ ಹಣ್ಣಾಗಿಸಲಾಗುತ್ತಿದೆ. ಇಂತಹ ಹಲವಾರು ದುರಭ್ಯಾಸಗಳಿಂದಾಗಿ ಜಗತ್ತಿನಾದ್ಯಂತ ಪ್ರತಿ ವರ್ಷ ಅಂದಾಜು 5 ಲಕ್ಷ ಜನರು ಕಲುಷಿತ ಆಹಾರದಿಂದ ಸಾಯುತ್ತಿದ್ದಾರೆ.


ಆಹಾರ ಕಲಬೆರಕೆ ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ರಾಜಕಾರಣಿಗಳು ಘೋಷಿಸಿದರೂ, ವಾಸ್ತವ ಮಾತ್ರ ಬೇರೆಯೇ ಇದೆ. ಗ್ರಾಹಕರ ಆರೋಗ್ಯ ಹಿತರಕ್ಷಣೆ ಹಾಗೂ ಆಹಾರ ಕ್ಷೇತ್ರವನ್ನು ನಿಯಂತ್ರಿಸಲೆಂದು ಕೇಂದ್ರ ಸರಕಾರ 2006ರಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯನ್ನು ಜಾರಿಗೆ ತಂದಿತು. ಆದರೆ ಅದರ ಅನುಷ್ಠಾನ ಮಾತ್ರ ತೃಪ್ತಿಕರವಾಗಿಲ್ಲ. ಆಹಾರ ಸುರಕ್ಷತೆಗೆ ಸಂಬಂಧಿಸಿದ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರ ಪ್ರಮಾಣ ಕೇವಲ ಶೇಕಡಾ 16 ಮಾತ್ರ. ಇವೆಲ್ಲದರ ನಡುವೆ ದೇಶದಲ್ಲಿ ಕಲಬೆರಕೆಯ ಆಹಾರ ಸಾಮ್ರಾಜ್ಯಗಳು ಹೆಚ್ಚುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಹಾರದ ಗುಣಮಟ್ಟದ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು. ದೇಶದಲ್ಲಿ ಆಹಾರದ ಗುಣಮಟ್ಟ ಹೆಚ್ಚಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕು ಹಾಗೂ ನಿಯಂತ್ರಕ ಸಂಸ್ಥೆಗಳನ್ನು ಸ್ಥಾಪಿಸಬೇಕು. ಗ್ರಾಹಕರಲ್ಲಿ ಜಾಗೃತಿ ಮೂಡಿಸುವಿಕೆ ಹಾಗೂ ಕಠಿಣ ಕಾನೂನುಗಳ ಅಳವಡಿಕೆ ಮಾತ್ರ ದೀರ್ಘ ಕಾಲದಲ್ಲಿ ಆಹಾರ ಕಲಬೆರಕೆಯ ಪಿಡುಗನ್ನು ತಡೆಯಬಲ್ಲವು.