ಕನ್ನಡ ಕಾವ್ಯ ಪ್ರಪಂಚದೊಳಗಿನ ಔಚಿತ್ಯ-ಅಪಸ್ವರ

ಕಾವ್ಯವು ತನ್ನ ಶ್ರೇಷ್ಠತೆಯನ್ನು ಉಳಿಸಿಕೊಂಡು ಹೋಗುವ ಸಹೃದಯತೆಗೆ ಗಮನ ಹರಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಕಾವ್ಯ ಪ್ರಪಂಚವು ತೆರೆದ ಆಕಾಶದಂತೆ ಸರ್ವತ್ರವೂ ಮುಕ್ತವಾಗಿದೆ. ಇಲ್ಲಿ ಕಾವ್ಯ ಯಾವುದು ? ಎಂಬುದನ್ನೆಲ್ಲ ವಿಶದಿಕರಿಸಿದ ತಥ್ಯಗಳು ಇದ್ದರೂ, ನಾವು ಆಧುನಿಕರು, ನಮ್ಮ ದಾರಿಯನ್ನು ನಾವು ನಿಶ್ಚಿಯಿಸಿ ನಡೆದುಕೊಂಡು ಹೋಗುವವರೆಂಬ ಆಶಯ ಹಿನ್ನೆಲೆಯೊಳಗೆ ಕಾವ್ಯ ಮಾಧ್ಯಮವನ್ನು ಪಳಗಿಸುವವರಿಗೆ ಅಂಕುಶ ಹಾಕಲಾಗದು. ಈವತ್ತಿನ ಕ್ಷಣ ಕ್ಷಣದ ಸ್ಥಿತ್ಯಂತರಗಳು, ಸಾಧನೆ- ಸಿದ್ದಿಗಳು ವಿಪ್ಲವಗಳು, ಅನಾಚಾರ-ವಿವಾದಗಳು, ಕಂದಾಚಾರ- ಮೌಢಚಾರಗಳು ವಾಮಾಚಾರಗಳು, ಕಾವ್ಯವಾಗಬೇಕೆಂದು ಬಯಸುವವರೂ ಅಸಂಖ್ಯರಿದ್ದಾರೆ. ಅದೇ ರಾಮಾಯಣ, ಮಹಾಭಾರತದ ನೆರಳಿನೊಳಗೆ ಕಾವ್ಯ ಕಟ್ಟುವಿಕೆಗೆ ಭವ್ಯ ಪರಂಪರೆವಿದ್ದರೂ, ಇಂದಿನ ಸಾಮಾನ್ಯ ಮನುಷ್ಯನ ಅಗು-ಹೋಗುಗಳನ್ನೆಲ್ಲವನ್ನು ಅಭಿವ್ಯಕ್ತಿ ಮಾಧ್ಯಮದೊಳಗೆ ಭಟ್ಟಿ ಇಳಿಸುವುದೇ ಶ್ರೇಷ್ಠತೆ ಎಂದು ಭಾವಿಸುವವರೂ ಸಾಕಷ್ಟಿದ್ದಾರೆ. ಏನ್ನಿದ್ದರೂ ಈಗಲೇ ಎಂಬ ಧೋರಣೆಯೂ ಸಹ ಕಾವ್ಯ ಪ್ರಪಂಚದ ಭಾಗವಾಗುತ್ತಲಿದೆ. ಮನುಷ್ಯನು ಸಮೂಹ ಮಾಧ್ಯಮದ ಮೋಹಕತೆಯನು ಹೊಂದಿರುವ ಇಂದಿನ ಸಂದರ್ಭದೊಳಗೆ ಕಾವ್ಯವೂ ಸಹ ಇವತ್ತಿನ ಅದ್ಯತೆ, ಅಚರಣೆ, ವಾದ- ವಿವಾದ ಆಚಾರ- ವಿಚಾರದಂತೆ ಅಭಿವ್ಯಕ್ತಗೊಳ್ಳಬೇಕೆಂಬ ತಹತಹಕೆ ಇರುವುದು ಸಹಜವೇ ಅಗಿದೆ. ಹೀಗಾಗಿ ಕಾವ್ಯ ಎಂದಿನಂತೆ ಇಂದು ಒಂದು ತೆರನಾದ ಮುಕ್ತ ಆದರ್ಶದ ಹಿನ್ನೆಲೆಯೊಳಗೆ ಸ್ವರೂಪ ಪಡೆದುಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ.

ಕಾವ್ಯವು ಯಾವಾಗ ಪ್ರವರ್ಧಮಾನಕ್ಕೆ ಬಂದಿತು, ಅದೆಂದು ಸರ್ವಶ್ರೇಷ್ಠತೆಯನ್ನು ಪಡೆದುಕೊಂಡಿತೆಂಬುದಲ್ಲವೂ ಅಂದಂದಿನ ಕಾವ್ಯ ಪ್ರತಿಭೆಗೆ ಒಳಗೊಂಡ ಸಂಗತಿಯೇ ಆಗಿದೆ. ಕಾವ್ಯ ಅದರಲ್ಲಿ ಕನ್ನಡ ಕಾವ್ಯವು ತನ್ನ ದೇಶೀಯ ಸಂಸ್ಕøತಿಯ ಜೊತೆ ಜೊತೆಗೆ ಪಾಶ್ಚಿಮಾತ್ಯ ಕಾವ್ಯದ ಸೊಗಡಿನೊಳಗೆ ಬೆಳಕು ಕಾಣುತ್ತ ಬಂದಿದೆ. ಸಂಸ್ಕøತ ಭಾಷೆಯ ನೆಲೆಯಂತೆ ಕನ್ನಡ ಕಾವ್ಯವು ಪಾಶ್ಚಿಮಾತ್ಯರ ಭಾಷೆಯ ಪ್ರಭಾವಕ್ಕೂ ಒಳಗೊಂಡಿದ್ದು, ಸರ್ವಶೃತವೇ ಆಗಿದೆ. ಹೀಗೆಂದು ಮಾತ್ರಕ್ಕೆ ಕನ್ನಡ ಕಾವ್ಯಕ್ಕೆ ಸ್ವಂತಿಕೆ ಇಲ್ಲೆಂದು ಭಾವಿಸಲಿಕ್ಕಾಗದು. ಅದಕ್ಕೆ ಸೂಕ್ತ ಮಾದರಿ ವಚನ ಸಾಹಿತ್ಯ ವೆಂದು ಧೈರ್ಯದಿ ಹೇಳಬಹುದಾಗಿದೆ. ಕನ್ನಡ ಕಾವ್ಯವು ತನ್ನ ನೆಲದ ಗುಣವನ್ನು ಹೀರಿಕೊಂಡು ತನ್ನದೇಯಾದ ಲಯಗಾರಿಕೆ, ಲಾಲಿತ್ಯವನ್ನು ಗಳಿಸಿಕೊಂಡು ಅಂದಂದಿನ ಕಾಲ ಘಟ್ಟದ ಸ್ಥಿತಿ-ಗತಿಗಳನ್ನು ಶಬ್ದರೂಪಕೊಡುವಲ್ಲಿ ಯಶಸ್ವಿಯಾಗಿದೆ. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದಲ್ಲಿ ಕಾವ್ಯವು ವಿವಿಧ ಪ್ರಕಾರಗಳಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದ ಪ್ರತೀತಿಯ ಇತಿಹಾಸ ಹೊಸ ಹೊಸ ನೋಟದಿಂದ ಪ್ರಸಿದ್ದಿಗೊಂಡಿದೆ. ಕನ್ನಡ ಕಾವ್ಯ ಅದ್ಭುತವಾಗಿ, ಸಾಲು ದೀಪ ಹೆಚ್ಚಿದೆ.

ಕನ್ನಡ ಕಾವ್ಯದೊಳಗೆ ಏನ್ನೆಲ್ಲ ಸ್ಥಿತ್ಯಂತರಗಳು ನಡೆದರೂ ಅದು ಜನಾನುರಾಗಿಯಾಗಿ ಉಳಿದುಕೊಂಡಿದೆ. ಇಂದಿನ ಅಧುನಿಕ ಸಮೂಹ ಮಾಧ್ಯಮಗಳು ಕಾವ್ಯ ಪ್ರಪಂಚವನ್ನು ಒಳಗೊಂಡೇ ಮುಂದುವರೆದಿವೆ. ಇವೊತ್ತು ಬದುಕು ವೈವಿದ್ಯಮಯದೊಂದಿಗೆ ವೈಜ್ಞಾನಿಕ-ವೈಚಾರಿಕತೆಗೆ ಸ್ಪಂದಿಸುವ ಸನ್ನಿವೇಶದೊಳಗಿದೆ. ಇಂಥ ಸನ್ನಿವೇಶದೊಳಗೆ ಕಾವ್ಯವು ಸಹ ಇವೊತ್ತಿನ ಅದ್ಯತೆಗಳೆಲ್ಲವನ್ನು ಒಳಗೊಂಡು ಬೆಳೆಯಬೇಕಿದೆ. ಸಮೂಹ ಮಾಧ್ಯಮದ ತೀವ್ರ ಪೈಪೋಟಿಯೊಳಗೆ ಕಾವ್ಯವು ತನ್ನ ರಾಸಗಂಧವೆಲ್ಲವನ್ನು ಪೂರೈಸಿಕೊಳ್ಳುವುದೆಂದರೆ ಬದುಕಿನ ಅಂತರ್ಯ ಹೆಚ್ಚಿನ ಸೂಕ್ಷ್ಮತೆಯನ್ನು ಗ್ರಹಿಸಿಕೊಳ್ಳಬೇಕಾಗುತ್ತದೆ. ಇಂದಿನ ದಿನಮಾನಗಳಲ್ಲಿ ಮಾನವೀಯ ಸಂಬಂಧಗಳಲ್ಲಿ ಬಿರುಕು, ಒಣ ಪ್ರತಿಷ್ಟೆಗಳು, ಹೆಚ್ಚುಗಾರಿಕೆ, ಅಹಂಕಾರ, ಕೃತಕತೆ, ಅಡಂಬರಗಳೆಲ್ಲವೂ ತುಂಬಿಕೊಂಡು ಮನುಷ್ಯನ ನೈಜತೆಗೆ ಧಕ್ಕೆ ತರುತ್ತಲಿದೆ. ಇಂಥ ಮೌಡ್ಯಗಳನ್ನು ಸರಿಪಡಿಸುವ ಚಲುವಿನ ಚೇತನವನ್ನು ತುಂಬುವ ರಸಗಂಧಮುಕ್ತ ಕಾವ್ಯ ಸಮಯ ಸರ್ವತ್ರವೂ ಪರಿಸರಬೇಕಾದ ಅಗತ್ಯವಿದೆ. ಇದೆಲ್ಲ ಕನ್ನಡ ಕಾವ್ಯಕ್ಕೆ ಹೊಸದೆನ್ನಲ್ಲಕನ್ನಡ ಕಾವ್ಯ ಸಂಪತ್ತನ್ನು ಅತ್ಯಂತ ಜಾಗರುಕತೆಯಿಂದ ಬೆಳಗಿಸಿದ ಕೀರ್ತಿ ಅಧುನಿಕ ಕವಿ ಪರಂಪರೆಗೂ ಸಲ್ಲುತ್ತದೆ. ಪಾಶ್ಚಿಮಾತ್ಯ ಕಾವ್ಯ ಪ್ರಯೋಗಗಳಿಂದ ಪ್ರೇರಣೆ ಪಡೆದುಕೊಂಡು ಮುಕ್ತ ಛಂದದೊಳಗೆ ಕಾವ್ಯ ವಿಸ್ತಾರಗೊಂಡದ್ದು ಸರ್ವರನ್ನು ಬೆರಗುಗೊಳಿಸುವಷ್ಟು ಸಶಕ್ತ ರಸಯುಕ್ತವೂ ಅಗಿದೆ. ಹೀಗೆ ಕನ್ನಡ ಕಾವ್ಯ ಲೋಕವು ಗುರುತರವಾಗಿದ್ದರೂ ಗುಣಾತ್ಮಕತೆಯ ಕಂಪನ್ನು ಪಸರಿಸಿಕೊಳ್ಳುವ ಮತ್ತು ಕಾಪಾಡಿಕೊಳ್ಳುವ ಸಾಹಸಕ್ಕೂ ಇಳಿಯಬೇಕಾದ ಸಮಕಾಲಿನ ಸವಾಲನ್ನು ಸಹ ಎದುರಿಸಬೇಕಿದೆ. ಬಾಲಕರು ಯುವಕರು, ಆದಿಯಾಗಿ ಸಕಲರು ಕಾವ್ಯ ಕೃಷಿಯೊಳಗೆ ತೊಡಗಿರುವುದು ಕನ್ನಡ ಭಾಷೆಯ ಬೆಳವಣಿಗೆಯ ದೃಷ್ಟಿಯಿಂದಲೂ, ಅನುಭವಗಳ ಕ್ರೋಢಿಕರಣದ ಆಶಯದಿಂದಲು ಗಮನಾರ್ಹ ಸಂಗತಿಯಾಗಿದೆ. ಕನ್ನಡ ಕಾವ್ಯ ಲೋಕವು ನವ-ನವೀನ ಆಯಾಮಗಳನ್ನು ಬಳಸಿ ಇಂದು ಸಂಕೀರ್ಣತೆಗೆ ಒಳಗಾಗಿದ್ದನ್ನು ಪರಾಮರ್ಶಿಸಿಕೊಳ್ಳುವ ಅನಿವಾರ್ಯತೆ ಇದೆ. ಕಾವ್ಯದ ಸಂಕೀರ್ಣತೆ ಇದು ಇವತ್ತಿನ ಸವಾಲಾಗಿದೆ ಎಂದು ಭಾವಿಸುವದು ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡು ಅನೇಕ ಪ್ರತಿಭೆಗಳಿಂದ ಸಮೃದ್ದಗೊಳ್ಳುತ್ತಲಿದೆ. ಕನ್ನಡ ಕಾವ್ಯ ಲೋಕಕ್ಕೆ ಇಂದಿನ ಯುವಕರು ಮತ್ತು ಶಿಕ್ಷಕರು ಅಪೂರ್ವ ಕೊಡುಗೆಯನ್ನು ನೀಡುತ್ತಲಿದ್ದಾರೆ. ಅವರು ಎದುರುಗೊಳ್ಳುತ್ತಿರುವ ಸಾಮರಸ್ಯ, ವೈರುದ್ಯ, ವಿದ್ರೋಹ, ಭ್ರಷ್ಟಾಚಾರ, ಅನಾಚಾರ, ಭಾಷೆಯ ಕೀಳರಿಮೆ, ಕನ್ನಡಕಟ್ಟ ಬೇಕಾದ ಕೆಲಸ ಇತ್ಯಾದಿಗಳನ್ನು ಕಾವ್ಯದೊಳಗೆ ಕಟ್ಟಿಕೊಡುತ್ತಿರುವುದು ಅಭಿಮಾನಕ್ಕೆ ಬಲ ತರುವ ಹೆಜ್ಜೆಯೇ ಅಗಿದೆ.

ಜಾಗತೀಕರಣ, ಉದಾರೀಕರಣದ ಹಿನ್ನೆಲೆಯಲ್ಲಿ ಕನ್ನಡ ಭಾಷೆಗೆ ಎಲ್ಲಿಲ್ಲದ ಹಿನ್ನೆಡೆಯ ಪರಿಸರವು ನಿರ್ಮಾಣಗೊಳ್ಳುತ್ತಲಿದೆ. ಮೊಬೈಲ ಸಂಸ್ಕøತಿಯು ಒಂದೆಡೆಯಾದರೆ, ಇಂಗ್ಲೀಷ ಭಾಷೆಯ ವ್ಯಾಮೋಹ ಮೃದಧೋರಣೆಯು ಕನ್ನಡ ಬಳಕೆಗೆ ಅಸ್ಪದವಿರದಂತಹ ವ್ಯಾಕುಲತೆಯನ್ನು ಅನಾವರಣಗೊಳಿಸುತ್ತಲಿದೆ. ಇಂದು ನಮ್ಮ ಸಂಸ್ಕøತಿ, ಸಬ್ಯತೆ ಮತ್ತು ಪರಂಪರೆಯನ್ನು ಸಹ ಮರೆಯುವಂತಹ ವಿದ್ಯಮಾನ ಪ್ರಚಲಿತಕ್ಕೆ ತರುವ ಹುನ್ನಾರಗಳು ಹೆಚ್ಚುತ್ತಲಿವೆ. ಇಂಥ ಅನೇಕ ವಸ್ತು ವಿಷಯಗಳನ್ನು ಇಂದಿನ ಯುವ ಮನಸ್ಸುಗಳನ್ನು ಕಾಡುತ್ತಲಿವೆ. ಅದ್ದರಿಂದ ಕನ್ನಡ ನಾಡು ನುಡಿ ಸಂಸ್ಕøತಿಯ ಪರಂಪರೆಯ ಜೊತೆ ಜೊತೆಗೆ ಸಾಮಾಜಿಕ, ಸಾಂಸ್ಕøತಿಕ, ರಾಜಕೀಯ ವಿಪ್ಲವಗಳ ತೊಳಲಾಟವು ಯುವ ಮನಸ್ಸುಗಳಲ್ಲಿ ಕವಿತೆಯಾಗಿ, ಕವನವಾಗಿ, ಚುಟುಕಾಗಿ, ಹನಿಗವನವಾಗಿ, ಪದವಾಗಿ ಹೊರಹೊಮ್ಮುತ್ತಿರುವುದು ಈ ಹೊತ್ತಿನ ಕಾವ್ಯಲೋಕದ ಬಹು ಆಯಾಮದ ಹೆಜ್ಜೆಯಾಗಿದೆಂದು ಅರಿತುಕೊಳ್ಳುವುದು ವಿಹತವೇ ಆಗಿದೆ. ಅದರೆ ಕನ್ನಡ ಕಾವ್ಯಲೋಕ ತನ್ನ ಆಕರ್ಷಣೆಯನ್ನು ಕಳೆದುಕೊಂಡಿದೆಂದು ಬಿಂಬಿಸುವ ಪ್ರಯತ್ನಗಳು ಕೇವಲ ತಾತ್ಕಾಲಿಕ ಮತ್ತು ಅವಸರದ ನಿರ್ಣಯವೆಂದು ಇಂದಿನ ಕಾವ್ಯ ಕೃಷಿಯು ತೋರಿಸಿ ಕೊಟ್ಟಿದೆ. ಆಧುನಿಕತೆಯ ಸಂಪರ್ಕ ಜಾಲದೊಳಗೆ ವೈವಿದ್ಯಮಯ ಮತ್ತು ಪ್ರಚಲಿತ ವಿದ್ಯಮಾನಗಳನ್ನು ವಿಶ್ಲೇಷಿಸುವ ಭಾವ ಭಾವನೆಗಳಿಗೆ ಆಪ್ತವಾಗಿರುವ ಕವಿತೆ- ಕವನ- ಚುಟುಕುಗಳು ಪ್ರವರ್ಧನಮಾನಕ್ಕೆ ಬರುತ್ತಲಿವೆ. ಇಂದು ಅಂತರಜಾಲದೊಳಗೆ ಹೊರಹೊಮ್ಮುತ್ತಿರುವ ಕಾವ್ಯ ಚಟುವಟಿಕೆಗಳ ಪರಾಮರ್ಶೆ ಮತ್ತು ಮಾರ್ಗದರ್ಶನವೆಲ್ಲವೂ ಕನ್ನಡ ಕಾವ್ಯ ಪ್ರಪಂಚವನ್ನು ರೋಚಕಗೊಳಿಸುವ ಅದ್ಭುತ ಶಕ್ತಿಯಾಗಿರುವುದು ಅಭಿಮಾನದ ಸಂಗತಿಯಾಗಿದೆ. ಕಾವ್ಯದ ಬಗ್ಗೆ ಅಪಸ್ವರ ಎತ್ತುತ್ತಿರುವವರೆಲ್ಲರೂ ಅಂತರಜಾಲದ ಯುವ ಕವಿ/ ಕವಿಯತ್ರಿಯರ ಕಾವ್ಯ ಪ್ರಸ್ತುತಿಯ ಸೊಬಗಿನ ಚರ್ಚೆಯನ್ನು ಅವಲೋಕಿಸುವುದು ಅಗತ್ಯ. ಇದು ಕಾವ್ಯ ಬೆಳವಣಿಗೆಯ ದೃಷ್ಟಿಯಿಂದ ಆಗಬೆಕಾದ ಕಾರ್ಯವಾಗಿದೆ.

ಕನ್ನಡ ಕಾವ್ಯ ಲೋಕದೊಳಗೆ ಸಮಕಾಲಿನ ಎಲ್ಲ ತುಡಿತ ತಲ್ಲಣಗಳು, ಸಮಯೋಜಿತವಾಗಿ ಮೂಡಿ ನಿಲ್ಲುತ್ತಲಿವೆ. ಅದರಲ್ಲು ಯುವ ಕವಿಗಳು, ಕನ್ನಡ ನಾಡು ನುಡಿಯ ಹೆಗ್ಗಳಿಕೆಯನ್ನು ತಮ್ಮ ವಸ್ತು ನಿಷ್ಠವಾಗಿ ಚಿತ್ರಿಸಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ಇದೆಲ್ಲ ಇಂದಿನ ಯುವಶಕ್ತಿಯ ಕಾವ್ಯ ಶಕ್ತಿಯನ್ನು ಅನುಮೋದಿಸುವ ಮತ್ತು ಅನನ್ಯತೆಯನ್ನು ಅರಿತುಕೊಳ್ಳುವ ಅವಸರವೇ ಅಗಿದೆ. ಇಂದು ಕಾವ್ಯ ಬರಹಗಳನ್ನು ಸಾರ್ವತ್ರಿಕಗೊಳಿಸಲು, ಅನೇಕ ವೇದಿಕೆಗಳು ಕಾವ್ಯ ಸಹ ಸಿದ್ದಗೊಂಡಿವೆ. ಕವಿತೆಗಳಿಗೆ ಪ್ರಶಸ್ತಿ ಕೊಡುವ ಸಂಘಟನೆಗಳು ಪ್ರಚಲಿತಕ್ಕೆ ಬಂದಿವೆ. ಒಂದು ಅರ್ಥದಲ್ಲಿ ಚುಟುಕು, ಹನಿಗವನ ಮತ್ತು ಅಧುನಿಕ ವಚನ ಹಾಗೂ ಹೈಕೂಗಳಲ್ಲಿ ಇಂದಿನ ಕಾವ್ಯ ಸಮಾಜವು ವಿಸ್ತ್ರೂತಗೊಂಡಿದೆ. ದೃಶ್ಯ ಮಾಧ್ಯಮದೊಳಗೆ, ವಿವಿಧ ಸಂದರ್ಭಗಳಲ್ಲಿ ಕಾವ್ಯ ಗೋಷ್ಠಿಗಳು ಪ್ರಸಾರಗೊಳ್ಳುತ್ತಲಿವೆ. ಈ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವ ಅಗತ್ಯವಿದೆ.

ಕಾವ್ಯ ಲೋಕಕ್ಕೆ ಇಂದು ವಿವಿಧ ವಸ್ತು ವಿಷಯಗಳು ಪ್ರಸ್ತುತಗೊಳ್ಳುತ್ತಲಿವೆ. ಆಧುನಿಕತೆಯ ಭರಾಟೆಯೊಳಗೆ ಮೌಲ್ಯಗಳು ಕುಸಿಯುತ್ತಿರುವುದು ಒಂದೆಡೆಯಾದರೆ, ಬದುಕಿನ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ವಿಜ್ಞಾನ ತಂತ್ರಜ್ಞಾನಗಳ ದುರುಪಯೋಗ ಹೆಚ್ಚಾಗಿ ಹೋಗಿದೆ. ಭವಿಷ್ಯದಲ್ಲಿ ಅಲ್ಲಲ್ಲಿ ಅಲ್ಲ-ಸಲ್ಲದ ಕೀರ್ತಿಯ ಸೇಣಸಾಟ ಮತ್ತು ಡೋಂಗಿತನವು ಹೆಚ್ಚೆಚ್ಚು ಪ್ರಚಲಿತಕ್ಕೆ ಬರುತ್ತಲಿದೆ. ಈ ಎಲ್ಲ ಅನಾಹುತಗಳನ್ನು ತಡೆಯುವ ಮಹತ್ವದ ಜವಾಬ್ದಾರಿಯು ಕಾವ್ಯ ಲೋಕದ ಮೇಲಿದೆ. ನಾಡು ಪಾರತಂತ್ರ್ಯದೊಳಗೆ ನಲಗುತ್ತಿದ್ದಾಗ, ರಾಷ್ಟ್ರಕ್ಕೆ ಆಪತ್ತು ಒದಗಿ ಬಂದಾಗ, ಬದುಕಿನೊಳಗೆ ಬಿಕ್ಕಟ್ಟು ಉದ್ಭವಿಸಿದಾಗಲ್ಲೆಲ್ಲ ಕಾವ್ಯವು ಜನರಲ್ಲಿ ಸ್ಥೈರ್ಯ ತುಂಬುವ ಕಾರ್ಯವನ್ನು ಇಂದಿಗೂ ನಿಭಾಯಿಸುತ್ತಲೇ ಬಂದಿದೆ.

ಕಾವ್ಯ ಸಾಹಿತ್ಯದೊಳಗೆ ಹೊಸ ಹೊಸ ಪ್ರಯೋಗಗಳು ಎಂದಿನಂತೆ ಇಂದೂ ಸಹ ಸಾಂಗಗೊಂಡಿವೆ. ಇದಲ್ಲದೆ ಮಹಾಕಾವ್ಯ ರಚನೆಗಳು ಮತ್ತು ಪುರಾಣಗಲು ಇಂದಿಗೂ ತಮ್ಮ ಛಾಪನ್ನು ಉಳಿಸಿಕೊಂಡಿವೆ. ಮಕ್ಕಳ ಮಹಿಳೆಯರ, ಹಿರಿಯ ನಾಗರಿಕರ ಹಾಗೂ ಶೊಷಿತರ ಸಂವೇದನೆಗಳಂತೂ ಕಾವ್ಯದೊಳಗೆ ವಿನೂತನತೆಯೊಂದಿಗೆ ಪ್ರಚಲಿತಕ್ಕೆ ಬರುತ್ತಲಿವೆ.
ಕನ್ನಡ ಸಾಹಿತ್ಯದೊಳಗೆ ಕಾವ್ಯವೇ ಪ್ರದಾನವಾಗಿದ್ದ ಕಾಲದಿಂದ ಇಂದಿನ ಕಾವ್ಯದ ಸ್ಥಿತಿ ಗತಿಗಳನ್ನು ಅವಲೋಕಿಸಿದಾಗ ಜನ ಬದುಕಲೆಂಬ ಸದಾಶವು ಪ್ರಮುಖವಾಗಿಯೆ ಉಳಿದುದ್ದನ್ನು ನಾವು ಕಾಣಬಹುದಾಗಿದೆ. ಬದುಕಿನ ವಿವಿಧ ಮುಖದೊಳಗೆ ಕಾವ್ಯವು ತನ್ನ ಆದ್ಯತೆ ಅನುಕೂಲ, ವೈವಿದ್ಯತೆಯನ್ನೆಲ್ಲ ಪಡೆದುಕೊಂಡಿದ್ದು ಒಂದೆಡೆಯಾದರೆ ಗುಣಾತ್ಮಕತೆಯನ್ನು ಉಳಿಸಿಕೊಳ್ಳಬೇಕೆಂಬ ಸವಾಲಿಗೂ ಸ್ಪಂದಿಸುವ ಅಗತ್ಯವಿದೆ. ಕನ್ನಡ ಕಾವ್ಯ ಲೋಕದೊಳಗೆ ಹೊಸ ಆಲೋಚನೆಗಳು ಬರುತ್ತಿದ್ದರೂ ಅವುಗಳಿಗೆ ಸೂಕ್ತವಾದ ಪ್ರೋತ್ಸಾಹ ಸಿಗುತ್ತಿಲ್ಲೆಂಬುದು ವಾಸ್ತವತೆಯಾಗಿದೆ. ಒಂದು ಜನಾಂಗವಾಗಿ ಕನ್ನಡಿಗರು, ಹೊರಹೊಮ್ಮುಬೇಕಾದ ಸಾಧ್ಯತೆಗಳ ಹುಡುಕಾಟದೊಳಗೆ ಕನ್ನಡ ಕವಿಗಳು ತಲ್ಲಿಣರಾಗಿದ್ದಾರೆ. ಕನ್ನಡ ಕಾವ್ಯ ಲೋಕವು ಎದುರಿಸುತ್ತಿರುವ ತವಕ- ತಲ್ಲಣಗಳತ್ತ ಗಮನ ಹರಿಸಿರುವ ಕವಿಗಳು, ಮನುಷ್ಯನೊಳಗೆ ಹೃದಯವಂತಿಕೆಯನ್ನು ಬಿಂಬಿಸುವ ಮಹತ್ವದ ಕಾರ್ಯದಲ್ಲಿಯೂ ತೊಡಗಿದ್ದಾರೆ.

ಕನ್ನಡ ಕಾವ್ಯ ಪ್ರಪಂಚವು ತನ್ನ ಗತವೈಭವವನ್ನು ಮರಳಿ ಪಡೆದುಕೊಳ್ಳುವ ಅಗತ್ಯವಿದೆ. ಈ ದಿಶೆಯಲ್ಲಿ ಕಾವ್ಯಾಸಕ್ತರೆಲ್ಲರೂ ಒಗ್ಗೂಡಿ ಸೂಕ್ತ ವೇದಿಕೆ ರಚಿಸಿಕೊಳ್ಳುವುದು, ಕನ್ನಡ ನುಡಿಯ ಸೇವೆಯ ಭಾಗವೆಂದು ಅರಿತುಕೊಳ್ಳಬೇಕಿದೆ. ಗುಂಪು ಗುಂಪುಗಳಾಗಿ, ಗುಂಪುಗಾರಿಕೆಯನ್ನೇ ಬಂಡವಾಳ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕಾದ ಅಗತ್ಯವಿದೆ. ಚುಟುಕು ಹನಿಗವನ ಮುಂತಾದವುಗಳು ಸಹ ಸಾಹಿತ್ಯವನ್ನು ಸಹ ಕಾವ್ಯ ಸಾಹಿತ್ಯದ ಭಾಗವೆಂದು ಪರಿಗಣಿಸಿಕೊಂಡು ಮತ್ತು ಇತರ ಕಾವ್ಯ ಪ್ರಕಾರಗಳ್ಳಲ್ಲೂ ಆಸಕ್ತಿಯನ್ನಿಟ್ಟುಕೊಂಡು ದುಡಿಯುವ ಅಗತ್ಯವಿದೆ. ಕಾವ್ಯ ಒಂದು ಜನಾಂಗವನ್ನು ಸದಾ ಲವಲವಿಕೆಯಿಂದ ಕೂಡಿಕೊಂಡಿರುವಂತೆ ಮತ್ತು ಸುಖ- ದುಃಖಗನ್ನು ಅಭಿವ್ಯಕ್ತಿಗೊಳಿಸಿ ಸ್ಥಿತಪ್ರಜ್ಞೆಯನ್ನು ರೂಢಿಸಿಕೊಳ್ಳುವ ದಿವ್ಯತೆಯೇ ಆಗಿದೆ. ಈ ದಿವ್ಯತೆಯನ್ನು ಭವ್ಯಗೊಳಿಸುವ ಕಾರ್ಯದಲ್ಲಿ ನಿರಸಕ್ತಿ ಕೊಂಡು ನುಡಿ, ಅನಾದರ, ಅಲಕ್ಷ್ಯತೆ ವಹಿಸುವುದೆಲ್ಲವೂ ಬದುಕಿನ ವಿಗತಿಯೇ ಆಗುತ್ತದೆ.