ಎಲ್ಲರೂ ಸೋತಾಗ ಸ್ತ್ರೀ ಶಕ್ತಿ ಜಯಿಸಿದಂತೆ ಇಂದು ಸರಾಯಿ ಮುಕ್ತತೆಯೂ ಅವಳಿಂದಾಗಬೇಕು

ನಮ್ಮ ಸ್ವಾತಂತ್ರ್ಯ ನಂತರದ ಸ್ವತಂತ್ರ ಭಾರತದ ಸರಕಾರಗಳೆಲ್ಲ ಬಡವರ ಉದ್ದಾರದ ಜಪದಿಂದಲೇ ಅಧಿಕಾರಕ್ಕೆ ಬರುತ್ತ ಬಡತನ ನಿರ್ಮೂಲನೆ ತನ್ನ ಗುರಿಯೆಂದು ಸಾರುತ ಅಧಿಕಾರವನ್ನು ಸುಮಾರು ಏಳು ದಶಕಗಳವರೆಗೆ ಚಲಾಯಿಸಿ ಆಯಿತು. ಆದರೆ ಬಡತನ ನಿರ್ಮೂಲನೆಯ ಕಸರತ್ತು ಮಾತ್ರ ನಿಂತಿಲ್ಲ. ಬಡತನ ರೇಖೆಯನ್ನೇನೋ ಅವರು ಎಳೆದು ಈ ದೇಶವಾಸಿಗಳನ್ನು ಆ ರೇಖೆಯ ಕೆಳಗಿನವರು ಮತ್ತು ಮೇಲಿನವರು ಎಂದು ಎರಡು ಗುಂಪುಗಳಲ್ಲಿ ವರ್ಗೀಕರಣವನ್ನಂತೂ ಮಾಡಿದರು. ಬಡತನ ರೇಖೆಯ ಕೆಳಗಿನವರು ಆ ರೇಖೆಯ ಮೇಲೆ ಬರಬೇಕೆಂಬ ಆಶಯದಿಂದ ಪ್ರಯತ್ನಗಳು ನಡೆದವು, ನಡೆಯುತ್ತಲಿವೆ. ಆದರೆ ಕೆಳಗಿನವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಅದು ಬೆಳೆಯುತ್ತಲಿದೆ. ಅದಕ್ಕೇನು ಕಾರಣವಿರಬೇಕು ? ಅದೊಂದು ರಹಸ್ಯಮಯ ಪ್ರಶ್ನೆ ಅಗಿದೆಯೆಂದರೆ ತಪ್ಪಾಗದು. ಇದೇ ಸಂದರ್ಭದಲ್ಲಿ ಒಂದು ಮಾತನ್ನು ಹೇಳದೇ ಹೋದರೆ ಅನುಚಿತವಾದೀತೆಂಬುದು ನಮ್ಮ ಅಭಿಪ್ರಾಯವಾಗಿದೆ. ಬಡತನ ನಿರ್ಮೂಲನೆಯ ಸರಕಾರದ ಅನೇಕ ಪ್ರಯತ್ನಗಳಲ್ಲಿ ನಿಶ್ಚಿತವಾಗಿಯೂ ಕೆಲವರ ಬಡತನ ನಿರ್ಮೂಲನೆ ಆಗಿದೆ. ಮಾತ್ರವಲ್ಲ ಅವರು ಮೇಲೆ ಮೇಲೆ ಎಂದರೆ ತುದಿಯುವರೆಗೂ ಏರಿರುವರು. ಅದಕ್ಕೆ ಕಾರಣ ಈ ಬಡವರೆನ್ನುವವರ ಬಡತನ ನಿರ್ಮೂಲನೆಯ ಅವಕಾಶಗಳು. ಆದರೆ ಅವರು ಮಾತ್ರ ಬಡವರ ಉದ್ದಾರದ ಬಡತನ ನಿರ್ಮೂಲನೆಯ ಪ್ರಯತ್ನವನ್ನು ಮಾತ್ರ ನಿಲ್ಲಿಸಿಲ್ಲ. ಮೇಲಾಗಿ ತಾವು ಆ ಉದ್ದಾರಕರ ಗುಂಪಿನಿಂದ ಹೊರಗೂ ಬಂದಿಲ್ಲ. ಹೊರ ಬರುವ ಚಿಹ್ನೆಗಳೂ ಕಾಣುತ್ತಿಲ್ಲ.

ಯಾವುದೇ ವ್ಯಕ್ತಿಯ ಬಡತನ ಅಥವಾ ದೇಶದ ಬಡತನ ನಿರ್ಮೂಲನೆಯಾಗಲು ಪ್ರಮುಖವಾದ ಕಾರಣ ಪಡುವ ಪರಿಶ್ರಮವಾಗಿದೆ. ಪರಿಶ್ರಮಪಟ್ಟರೆ ಮಾತ್ರ ಉತ್ಪಾದಕತೆಯ ಸಾಧ್ಯತೆಯಿದೆ. ಉತ್ಪಾದಕತೆಯು ಬೆಳೆಯದೇ ಹೋದರೆ ಸಿರಿತನ ಹೇಗೆ ಬರಲು ಸಾಧ್ಯ? ದೇಶದಲ್ಲಿ ದೊರೆಯುವ ನೈಸರ್ಗಿಕ ಸಂಪತ್ತನ್ನು ಸದುಪಯೋಗಪಡಿಸಿಕೊಂಡು ಅಧುನಿಕ ಪ್ರಯೋಜನಕ್ಕೆ ಅಳವಡಿಸಲು ದೇಶದ ಕೋಟ್ಯಾಂತರ ಕೈಗಳಿಗೆ ಶ್ರಮದ ಹೊಣೆ ವಹಿಸಿದಾಗ ಅದರಿಂದ ಉಂಟಾಗುವ ಉತ್ಪಾದಕತೆಯು ನಿಜವಾದ ಸಂಪತ್ತಾಗುವುದು. ಅದರ ಸೂಕ್ತ ಹಂಚಿಕೆಯಾದರೆ ಸಂಬಂಧಿಸಿದವರ ಬಡತನ ನಿರ್ಮೂಲನೆಯಾಗಲು ಸಾಧ್ಯ. ಆದರೆ ಶ್ರಮರಹಿತ, ಉತ್ಪಾದಕತೆಯಲ್ಲಿ ತೊಡಗದವರ ಬಡತನ ನಿರ್ಮೂಲನೆಯ ಕ್ರಮ ವ್ಯರ್ಥ ಎನ್ನುವ ಅನುಭವ ಕಾಲಾಂತರದ್ದೇ ಆದಾಗ ಅದನ್ನು ಮೀರಿ ಮಾಡುವ ಯಾವುದೇ ಪ್ರಯಾಸ ಅನುಭವಕ್ಕೆ ನಿಲುಕದಾರದಂತಹದು. ವೈಜ್ಞಾನಿಕ ಪ್ರಗತಿ ಎಷ್ಟೇ ಆಗಿದ್ದರೂ, ತಾಂತ್ರಿಕ ಕ್ಷೇತ್ರ ಅತಿಯಾಗಿ ವಿಸ್ತರಿಸಿದ್ದರೂ ಪ್ರತಿಯೊಬ್ಬ ವ್ಯಕ್ತಿಯ ಕೈಗಳು ಚಲಿಸದೇ ಆತನ ಬಡತನ ನಿರ್ಮೂಲನೆಯು ಅಸಾಧ್ಯದ ಮಾತು. ಕೇವಲ ಬಾಹ್ಯ ಕೃತಕ ಪೂರೈಕೆಯಿಂದ ನಿರ್ಮೂಲನೆ ಶಾಶ್ವತ ಪರಿಹಾರ ಕಾಣಲು ಸಾಧ್ಯವಿಲ್ಲ. ಆದರೆ ಆಯ್ಕೆಯ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ. ಅದನ್ನು ಒದಗಿಸುವವರಿಗಂತೂ ಪ್ರಾಶಸ್ತ್ಯದÀ ಆಯ್ಕೆಯಿದೆ.

ಯಾರು ನಿಜವಾಗಲು ಬಡವರಿರುವರು ಅವರು ತಮ್ಮ ಬಡತನದಿಂದ ಹೊರಬರುವ ಆಶಯ ಹೊಂದಿದ್ದರೆ ಅವರು ಒಂದು ಮಾತನ್ನು ಸ್ಮರಣೆಯಲ್ಲಿಡಲೇಬೇಕು ಎಂದರೆ ಬೇರಾರೂ ತಮ್ಮ ಬಡತನವನ್ನು ದೂರ ಮಾಡಲಾರರು. ಅವರ ಬಾಯುಪಚಾರ ತಮ್ಮ ಬಡತನ ನಿರ್ಮೂಲನೆಗೆ ಸಹಾಯಕಾರಿ ಆಗಲಾರದು. ತಮ್ಮ ಕಷ್ಟಕರ ಪ್ರಯತ್ನ ಮಾತ್ರ ತಮ್ಮನ್ನು ಬಡತನದಿಂದ ಮೇಲೆತ್ತ ಬಲ್ಲದು. ಎಲ್ಲರ ಹಿತ ಕಾಪಾಡಬೇಕಾದ ಸರಕಾರ ಪೂರಕ ಅವಕಾಶ ಕಲ್ಪಿಸಿದರೆ ಅದು ಅಲ್ಪಮಟ್ಟಿಗೆ ಅನುಕೂಲಕರವಾದೀತು.

ಬಡತನಕ್ಕಿರುವ ಮೂಲ ಕಾರಣ ಅಜ್ಞಾನವಾಗಿರುತ್ತದೆ. ಎಲ್ಲಿಯವರೆಗೆ ವ್ಯಕ್ತಿಯ ಅಜ್ಞಾನ ದೂರಾಗದು ಅಲ್ಲಿಯವರೆಗೆ ಆತನಿಗೆ ಅರಿವು ಮೂಡದು. ಅರಿವಿನ ಕೊರತೆಯಿಂದಾಗಿ ತನ್ನತನದ ಅರಿವಾಗುವುದಿಲ್ಲ. ತನ್ನತನದ ಅರಿವಿನ ಕೊರತೆಯಿಂದ ಆತನು ತನ್ನಲ್ಲಿ ಬದಲಾವಣೆ ತರಲು ಬಯಸುವುದಿಲ್ಲ. ಆಗ ಇದ್ದ ಸ್ಥಿತಿಯ ನಿರ್ಮೂಲನೆ ಹೇಗೆ ಆಗಲು ಸಾಧ್ಯ ? ಆದ್ದರಿಂದ ಪ್ರತಿಯೊಬ್ಬನು ಶಿಕ್ಷಣ, ಅದರಲ್ಲಿಯೇ
ಗುಣಾತ್ಮಕ ಶಿಕ್ಷಣ ಪಡೆಯಬೇಕು. ಇನ್ನೊಂದು ಪ್ರಮುಖ ಕಾರಣ ಆತನ ವ್ಯಸನಾಧಿನತೆ, ಮಧ್ಯ ಸೇವನೆಯು ಆತನ ಹಣವನ್ನು ಮಣ್ಣುಗೂಡಿಸುವುದರ ಸಂಗಡ ತುಂಬಲಾರದ ಹಾನಿಯಾದ ಆರೋಗ್ಯ ಭಾಗ್ಯವನ್ನು ಮಣ್ಣುಗೂಡಿಸುತ್ತದೆ. ಇವೆರಡು ಹಾಳಾಗುತ್ತ ನಡೆದಾಗ ಬಡತನ ಹೇಗೆ ನಿರ್ಮೂಲನೆಯಾಗಲು ಸಾಧ್ಯ ? ಆಗ ಭಾಗ್ಯದ ಬಾಗಿಲು ಕಾಯುತ್ತ ಅದೇ ಪರಮ ಭಾಗ್ಯವೆಂದು ಭಾವಿಸಿ ತನ್ನ ಇದ್ದ ಸ್ಥಿತಿಯಲ್ಲಿಯೇ ಮಣ್ಣುಗೂಡುವ ದಾರಿ ಕಾಯಬೇಕು.

ಈ ದೇಶದ ಪಿತಾಮಹರಾದ ಮಹಾತ್ಮಾ ಗಾಂಧಿಜೀಯವರು ಈ ದೇಶದ ಅಬಾಲ ವೃದ್ದರ ಕರುಣಾಜನಕ ಸ್ಥಿತಿಯನ್ನು ಕಣ್ಣಾರೆ ಕಂಡಿದ್ದರು. ಆ ಎಲ್ಲ ಅಮಾಯಕರ ಉದ್ದಾರವೇ ದೇಶದ ಉದ್ದಾರವೆಂದು ಭಾವಿಸಿ ತಾವೂ ಸಹ ಅದರಲ್ಲೊಬ್ಬರಂತಹ ಜೀವನ ಸಾಗಿಸುತ್ತ ದೇಶದ ಸ್ವಾತಂತ್ರ್ಯಕ್ಕೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ಪಡೆಯುವಂತೆ ಮಾಡಿದರು. ಅವರ ಕನಸು ರಾಮರಾಜ್ಯದ ಸ್ಥಾಪನೆಯ ಪ್ರತಿಪಾದನೆ ಆಗಿದ್ದಿತು. ಅವರ ಪ್ರತಿಪಾದನೆಯಲ್ಲಿ ಸಂಪೂರ್ಣ ಸರಾಯಿ ಮುಕ್ತ ಜೂಜಾಟ ಮುಕ್ತ ಅಹಿಂಸೆಯ ಜೀವನದ ಸರಳ ಭಾರತೀಯ ಜೀವನ ನಿರ್ವಹಣೆಯ ಸುಖ ಸಮಾಧಾನದ ಸಂಸಾರಗಳ ಇಂತು ಅದೇ ಬಗೆಯ ಸಮಾಜದ ನಿರ್ಮಾಣದ ಕನಸಾಗಿದ್ದಿತು. ಕನಸಿನ ಮಹಾತ್ಮರು ಸ್ವಾತಂತ್ರ್ಯನಂತರದ ಕೆಲವೇ ಕೆಲವು ದಿನಗಳಲ್ಲಿ ಹುತಾತ್ಮರಾದರು. ಅವರು ಹುತಾತ್ಮರಾಗುತ್ತಲೇ ಅವರ ಕನಸಿನ ನಿರ್ಮಾಣದ ಭಾರತವೂ ಹುತಾತ್ಮವಾಯಿತೇನೋ ಎನ್ನಿಸುವುದು. ಇದಕ್ಕೆ ಕಾರಣವೆಂದರೆ ನಾವು ಕಾಣುತ್ತಿರುವುದು ಪಾಶ್ಚಾತ್ಯ ಸಂಸ್ಕøತಿಯ ಅಂಧಾನುಕರಣೆಯನ್ನು ಹಾಗೂ ಭಾರತೀಯವಲ್ಲದ ಪರದೇಶದ ಕಂಪನಿಗಳ ಉತ್ಪಾದನೆಯನ್ನು ಮತ್ತು ಅವು ಮಾಡುತ್ತಿರುವ ಸುಲಿಗೆಯನ್ನು. ಸರಕಾರ ಸುಲಭದ ಆದಾಯದ ಬೆನ್ನಟ್ಟಿ ಮಧ್ಯದ ಉತ್ಪಾದಕತೆಯನ್ನು ಮೀತಿಮೀರಿ ಆಗುವಂತೆ ಪ್ರಯತ್ನಿಸುವುದರ ಸಂಗಡವೇ ಮಾಂಸ ನಿರ್ಯಾತದಂತಹ ಕೆಲಸಕ್ಕೆ ಕೈಹಾಕಿ ನಮ್ಮ ಅಪರೂಪದ ಪ್ರಯೋಜಕಾರಿ ಪಶು ಸಂಪತ್ತನ್ನು ನಿರಾಯಾಸವಾಗಿ ಪಾಶ್ಚಾಮತ್ಯರ ಹೊಟ್ಟೆ ತಣಿಸುವಂತೆ ಮಾಡಿ ತಾತ್ಕಾಲಿಕ ಲಾಭದ ಸಂತೋಷ ಪಡೆಯುತ್ತಿರುವುದು. ಈ ಅಹಿತದ ಬೆಳವಣಿಗೆಯನ್ನು ಬೆಂಬಲಿಸುವವರ ಸಂಖ್ಯೆಯೇ ಅತಿಯಾಗಿರುತ್ತದೆ.

ಸಂಪೂರ್ಣ ಪಾನ ನಿಷೇಧ ನಮ್ಮ ದೇಶದಲ್ಲಿ ಚಾಲನೆಗೆ ಬಂದಿದ್ದಿತು. ಅದರೆ ಸರ್ಕಾರದ ಇಚ್ಛಾ ಶಕ್ತಿಯ ಕೊರತೆಯಿಂದಾಗಿಯೋ ಅಥವಾ ಸುಲಭದ ಆದಾಯದ ಮಾರ್ಗಕ್ಕಾಗಿಯೋ ಅಥವಾ ಭ್ರಷ್ಟಾಚಾರದ ಪ್ರಬಲತೆಗಾಗಿಯೋ ಅಥವಾ ಮತ್ತಾವುದೋ ಕಾರಣಕ್ಕಾಗಿಯೋ ಅದು ಯಶಸ್ಸು ಕಾಣಲಿಲ್ಲ. ಹಳೆಯ ಕುಡುಕರನ್ನೇ ಹೊಂದಿರುವುದೂ ಸಹ ಅದಕ್ಕೊಂದು ಕಾರಣ ಆಗಿರುವ ಸಾಧ್ಯತೆಯೂ ಇರುತ್ತದೆ. ಅದಕ್ಕಾಗಿ ಸೋಲೋಪ್ಪಿದ ಸರಕಾರ ಪಾನ ನಿಷೇಧವನ್ನು ಮುಕ್ತಾಯಗೊಳಿಸಿ ಮಧ್ಯ ಸೇವನೆ ಮುಕ್ತವಾಗುವಂತೆ ಮಾಡಿತು. ಅದರಿಂದ ಹಳೆಯ ಕುಡುಕರೊಡನೆ ಹೊಸ ಕುಡುಕರ ಸೇರ್ಪಡೆ ಪ್ರಾರಂಭವಾಯಿತು. ಚುನಾವಣೆಗಳು ಬರುಬರುತ್ತ ಯುವ ಕುಡುಕರನ್ನು ತಯಾರಿಸುವ ಕಾರಖಾನೆಗಳಾಗಿ ಮಾರ್ಪಡ ಹತ್ತಿದವು. ಈ ಪ್ರಕಾರ ಕುಡುಕರ ಸಂಖ್ಯೆ ದಿನೇ ದಿನೇ ಬೆಳೆಯುತ್ತಲೇ ನಡೆದಿದೆ. ಸರಕಾರಿ ಖಜಾನೆ ತುಂಬುತ್ತಲೆ ನಡೆದಿದೆ. ಬಡತನ ರೇಖೆಯ ಕೆಳಗಿನವರ ಸಂಖ್ಯೆ ಬೆಳೆಯುತ್ತಲೇ ನಡೆದಂತೆ ಅವರ ಉದ್ದಾರಕರ ಸಂಖ್ಯೆಯೂ ಬೆಳೆಯುತ್ತಲೇ ನಡೆದಿದೆ. ಈ ಪ್ರಕಾರದ ವಾತಾವರಣದಲ್ಲಿ ಕುಡಿತದ ಪ್ರತಿಬಂದದ ಪ್ರಶ್ನೆ ಮಾಯವಾಗಿದೆ ಅಥವಾ ಸೋತಿದೆ. ಇದರಿಂದ ಕುಟುಂಬಗಳು ಮಾತ್ರ ನಿತ್ಯ ಹಾಳಾಗುತ್ತ ಯಾತನಾಮಯಿ ಆಗುತ್ತಿವೆ.

ಇಂದಿನ ಸಮಾಜದ ವಾಸ್ತವಿಕತೆಯತ್ತ ದೃಷ್ಟಿ ಹರಿಯಿಸಿದರೆ ಬಡವರು ಎನ್ನುವವರ, ಕೃಷಿ ಕಾರ್ಮಿಕರ, ಇನ್ನುಳಿದ ಯಾವುದೇ ಕಾರ್ಮಿಕರ ಯಾರನ್ನು ನಾವು ದಲಿತರು, ಪರಿಶಿಷ್ಟ ಗುಂಪಿಗೆ ಸೇರಿದವರು, ಹಿಂದುಳಿದವರು, ನಿರ್ಗತಿಕರು ಎಂದು ಸಂಬೋಧಿಸಿ ದೊಡ್ಡಸ್ತಿಕೆ ಮೆರೆಯಲಾಗುತ್ತದೆ ಅವರ ದಿನನಿತ್ಯದ ಆದಾಯ ಪರಿಗಣಿಸಿದರೆ ಅದು ಇನ್ನುಳಿದ ಬಿಳಿ ಕಾಲರಿನ ಜನರ ಆದಾಯಕ್ಕಿಂತ ಹೆಚ್ಚಿಗೆ ಇದ್ದುದು ಕಂಡು ಬರುವುದು. ಆದರೆ ! ಆದಾಯದ ಬಹುಪಾಲು ಕುಡಿತಕ್ಕೆ ಖರ್ಚಾಗಿ ಅವರ ಹೆಂಡತಿ ಮಕ್ಕಳು ಪರಿತಪಿಸುವರು. ಕೆಲವರ ಸ್ಥಿತಿ ಹೀಗೂ ಇರುವುದು ಕಂಡು ಬರುತ್ತದೆ. ಎಂದರೆ ಪುರುಷ ತನ್ನ ಆದಾಯವನ್ನೆಲ್ಲ ಕುಡಿತಕ್ಕೆ ಖರ್ಚು ಮಾಡಿ ಹೆಂಡತಿಯ ಆದಾಯದ ಮೇಲೆ ಮಾತ್ರ ಮನೆಯ ನಿರ್ವಹಣೆ ಆಗುವಂತಿದೆ. ಕೆಲ ಸಂದರ್ಭದಲ್ಲಿ ಕುಡಿತದ ಕೊರತೆಗೆ ಹೆಂಡತಿಗೆ ಹೊಡೆ, ಬಡಿ ಮುಂದುವರಿದು ಕೊಲೆಯೂ ಆಗುವುದು. ಅದಕ್ಕಾಗಿ ನಮ್ಮ ಆಶಯ ಮಧ್ಯಮುಕ್ತ ಸಮಾಜ ನಿರ್ಮಾಣ ಆಗಲೇ ಬೇಕು. ಯಾವುದೇ ಬೆಲೆ ತೆತ್ತಾದರೂ ಅದು ಜಾರಿಯಾಗಲೇಬೇಕು. ಎಲ್ಲರೂ ಸೋತಾಗ ಉಳಿದಿರುವುದು ನಮ್ಮ ತಾಯಂದಿರು ಮಾತ್ರ. ಅವರು ಬೀದಿಗಿಳಿದು ಇದನ್ನು ಕೊನೆಗಾಣಿಸಲೇ ಬೇಕೆಂದು ಆಶೆ ತಳೆಯುವುದು ಇಂದು ವಿವೇಕದ್ದೆನ್ನಿಸುವುದು.

ಸ್ತ್ರೀ ಇಂದು ಹಿಂದಿನಂತಿಲ್ಲ. ಎಲ್ಲ ಕ್ಷೇತ್ರದಲ್ಲಿಯೂ ಪುರುಷನಿಗೆ ಸಮಾನವಾಗಿ ಪ್ರವೇಶ ಪಡೆದಿರುವಳು. ಯಶಸ್ವಿಯೂ ಆಗಿರುವಳು. ಇಂದು ಸ್ತ್ರೀ ಶಿಕ್ಷಣವೇತ್ತಳಾಗಿ ತಾರತಮ್ಯ ಅರಿಯುವ ಸ್ಥಿತಿಯಲ್ಲಿ ಇರುವಳು, ಆರ್ಥಿಕ ಸಬಲತೆಯೂ ಪ್ರಾಪ್ತವಾಗಿದೆ.
ಇಂದು ಸ್ತ್ರೀಯು ತನ್ನ ಮನೆಯನ್ನು ಮೊದಲು ಮಧ್ಯಮುಕ್ತ ಮಾಡಿ ಮಕ್ಕಳನ್ನು ರಕ್ಷಿಸಬೇಕು. ಇನ್ನು ತನ್ನ ಪರಿಸರದಲ್ಲಿಯ ಮಧ್ಯದ ವ್ಯವಹಾರ ಬಂದು ಮಾಡಲು ಬೀದಿಗಿಳಿದು ಅದು ನಿರ್ಮೂಲನೆ ಆಗುವಂತೆ ಮಾಡುವ ಹೋರಾಟ ಮಾಡಿ ಯಶಸ್ವಿಯಾಗಬೇಕು. ಎಲ್ಲರೂ ಸೋತಾಗ ಸ್ತ್ರೀ ಶಕ್ತಿ ಜಯಿಸಿದೆ. ಆ ಶಕ್ತಿಯಿಂದು ಕಾರ್ಯ ಮಾಡಬೇಕು, ಯಶಸ್ಸು ಕಾಣಬೇಕು. ಆಗಲೇ ಕುಟುಂಬದ ಉದ್ದಾರ ಇಂತು ದೇಶದ ಉದ್ದಾರ ಸಾಧ್ಯ.

ಜಲತ್ಕುಮಾರ ಪುಣಜಗೌಡಾ,
ರಾಮತೀರ್ಥನಗರ
ತಾ: ಜಿ:ಬೆಳಗಾವಿ