ಉತ್ತರ ಕರ್ನಾಟಕ ನೆರೆಹಾವಳಿ : ಪೃಕೃತಿ ಪ್ರಕೋಪವೇ ? ಮಾನವ ನಿರ್ಮಿತವೇ ?

ಇತ್ತಿಚಿನ ನೆರೆಹಾವಳಿ ರಾಜ್ಯದ ಉತ್ತರಭಾಗವನ್ನೇ ತಲ್ಲಣ ಗೊಳಿಸಿದ್ದು ಅದರಲ್ಲೂ ಬೆಳಗಾವಿ ಕಂದಾಯ ವಿಭಾಗದ ನಾಲ್ಕು ಜಿಲ್ಲೆಗಳಾದ ಬೆಳಗಾವಿ,ವಿಜಯಪುರ ಬಾಗಲಕೋಟ,ಗದಗ ಇವುಗಳಲ್ಲಿ ಭೀಕರ ಪರಿಣಾಮವನ್ನುಂಟುಮಾಡಿತು.
ಕೃಷ್ಣಾ,ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ಸೃಷ್ಟಿಸಿದ ನೆರೆ ಅವಾಂತರಕ್ಕೆ ಬೆಳಗಾವಿ, ವಿಜಯಪುರ, ಬಾಗಲಕೋಟ ಜಿಲ್ಲೆಗಳು ಶೇಕಡ 80ರಷ್ಟು ನಲುಗಿ ಹೋಗಿದ್ದರೆ ಗದಗ ಜಿಲ್ಲೆಯ ನರಗುಂದ,ನವಲಗುಂದ ಭಾಗಗಳು ಮಲಪ್ರಭಾ ಬಲದಂಡೆ ಕಾಲುವೆಯಿಂದಾಗಿ ಹಾನಿಗೀಡಾದವು.ಇಲ್ಲಿ ನಾನು ಪ್ರಸ್ತಾಪಿಸಹೊರಟಿದ್ದು ಈ ಜಿಲ್ಲೆಗಳ ಮಹಾಪ್ರವಾಹಕ್ಕಷ್ಟೇ ಸೀಮಿತ.ಈ ನೆರೆಹಾವಳಿ ನಿಜವಾಗಿಯೂ ಪೃಕೃತಿ ಪ್ರಕೋಪವೇ ಅಥವಾ ಮಾನವ ನಿÀರ್ಮಿತ ಸ್ವಯಂಕೃತಾಪರಾಧವೇ ಎಂಬುದು ಈಗ ಈ ಭಾಗದಲ್ಲಿ ಸಾರ್ವಜನಿಕ ಚರ್ಚೆಯ ವಿಷಯವಾಗಿರುವದರ ಹಿನ್ನೆಲೆಯಲ್ಲಿ ಈ ಲೇಖನ.

1983,2005 ಈ ಎರಡು ನೆರೆಹಾವಳಿಗಳನ್ನು ಕಂಡ ಈ ಜಿಲ್ಲೆಗಳ ಜನರಿಗೆ ಪ್ರವಾಹವೇನೂ ಹೊಸದಲ್ಲ.ಆದರೆ ಇವೆರಡೂ ಒಂದಕ್ಕಿಂತ ಒಂದು ಭೀಕರವಾಗಿದ್ದರೆ ಈಗಿನದು ಇವರೆಡಕ್ಕಿಂತಲೂ ಮಹಾ ಭಯಂಕರ.ಮೊದಲಿನವೇ ಒಳ್ಳೆಯದಿತ್ತೆನ್ನುವ ಮಾತು ಈಗ ಜನರಲ್ಲಿದೆ.ಆಗಲೂ ಅವೆರಡೂ ಸರ್ಕಾರಕ್ಕೆ ಸೂಕ್ತ ಪಾಠ ಹೇಳಿಯೇ ಹೋಗಿದ್ದವು.ಅವೆರಡರಿಂದ ಪಾಠ ಕಲಿಯದ ಸರಕಾರ ಪುನ: ಅದೇ ತಪ್ಪನ್ನು ಮಾಡಿದ್ದುಈಗ ಅಟ್ಟಾಡಿಸಿ ಹೊಡೆದು,ಬಡೆದು,ಒದ್ದು ಪಾಠ ಕಲಿಸಿದ್ದು ಕರ್ನಾಟಕ ಸರ್ಕಾರಕ್ಕಷ್ಟೇ ಅಲ್ಲ ನೆರೆಯ ಮಹಾರಾಷ್ಟ್ರ ಸರ್ಕಾರಕ್ಕೂ ಕಲಿಸಿದೆ.ನೆರೆಹಾವಳಿಗೆ ಮುನ್ನ ಈ ಮೂರು ನದಿಗಳ ಹಿನ್ನೆಲೆಯನ್ನೂ ಮೊದಲು ಗಮನಿಸಬೇಕಿದೆ.


ಹಿರಿಹೊಳೆ ಎಂದು ಕರೆಸಿಕೊಳ್ಳುವ ಕೃಷ್ಣಾ ನದಿ ಹಾಗೂ ಘಟಪ್ರಭಾ ನದಿ ಉಗಮಿಸಿದ್ದು ಮಹಾರಾಷ್ಟ್ರದ ಸಹ್ಯಾದ್ರಿ ಪರ್ವತ ಶ್ರೇಣಿಯ ಮಹಾಬಲೇಶ್ವರ ಮತ್ತು ಸಾವಂತವಾಡಿ ತಾಲೂಕಿನ ಅಂಬೋಲಿಯಲ್ಲಾದರೆ ಮಲಪ್ರಭಾ ನದಿ ಉಗಮಿಸಿದ್ದು ನಮ್ಮಲ್ಲೇ,ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ.ಅಂತೆಯೇ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಸುರಿದರೆ ಅದರ ಮೊದಲ ಪರಿಣಾಮವಾಗುವದು ನಮ್ಮಲ್ಲೇ. ಬೆಳಗಾವಿ, ವಿಜಯಪುರ, ಹಾಗೂಬಾಗಲಕೋಟ ಜಿಲ್ಲೆಗಳಲ್ಲೇ. ನಮ್ಮಲ್ಲಿ ಮಳೆಯಾಗದೆ ಒಣ ಹವೆ ಇದ್ದು ಅಲ್ಲಿ ಮಳೆ ಸುರಿದರೂ ಪ್ರವಾಹ ಉಂಟಾಗುವದು ನಮ್ಮ ಪ್ರದೇಶದಲ್ಲೇ.ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಹುಟ್ಟಿ ಹರಿವ ಮಲಪ್ರಭಾ ನದಿ ಅಂತಹ ಪ್ರಳಯಾಂತಕಾರಿ ಏನಲ್ಲ.ಆದರೆ ಹೂಳು, ಉಸುಕು ತುಂಬಿದ ಪರಿಣಾಮ ರಾಮದುರ್ಗದಲ್ಲಿ ಇದು ಮಹಾಪೂರವಾಗಿ ಜನಜೀವನ ಮೂರಾಬಟ್ಟೆ ಮಾಡಿದರೆ ನದಿ ಬಲದಂಡೆ ಕಾಲುವೆ ಕೆಲವೆಡೆ ರೈತರ ಬದುಕು ಕಸಿಯಿತು.ಮಲಪ್ರಭಾ ಅಣೆಯ ಅಧಿಕಾರಿಗಳು ಒಮ್ಮೆಲೆ 1ಲಕ್ಷ.ಕ್ಯೂಸೆಕ್ಸ ವರೆಗೆ ನೀರು ಬಿಟ್ಟಿದ್ದೇ ಈ ಸಲ ಭಾರೀ ಹಾವಳಿ ಸೃಷ್ಟಿಸಿಬಿಟ್ಟಿತು.

1983ಹಾಗೂ2005ರಲ್ಲಿ ಕೃಷ್ಣಾ,ಘಟಪ್ರಭಾಗಳು ಗಂಡಾಂತರಕಾರಿ ಯಾಗಿದ್ದರೆ ಪಾಪ ಮಲಪ್ರಭಾ ಸುಮ್ಮನೆ ಪ್ರವಹಿಸಿತ್ತು.
ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಕೊಯ್ನಾದಲ್ಲಿ ಕೃಷ್ಣಾ ಹೊಳೆಗೆ ನಿರ್ಮಿಸಿದ ಬೃಹತ್ ಅಣೆಕಟ್ಟಿನಲ್ಲಿ ಮೊದಲಬಾರಿ ನೀರು ನಿಲ್ಲಿಸಿದ್ದು 1964ರಲ್ಲಿ.1967ರಲ್ಲಿ ಇಲ್ಲಿ ಸಂಭವಿಸಿದ್ದ ಭಾರಿ ಭೂಕಂಪ ಕರ್ನಾಟಕ ಮಹಾರಾಷ್ಟ್ರದ ಜನತೆಗೆ ಭೂಕಂಪ ಎಂದರೇನೆಂಬುದರ ಪರಿಚಯ ಮಾಡಿಕೊಟ್ಟಿತ್ತು.ಆ ನಂತರ ಅಂದಿನಿಂದ ಈ ವರೆಗೂ ಆ ಪ್ರದೇಶದಲ್ಲಿ ಪದೇಪದೇ ಭೂಕಂಪನಗಳು ಆಗುತ್ತಲೇ ಇರುತ್ತವೆ.ಅಲ್ಲಿಯ ಜನರಿಗೆ ಅದು ರೂಢಿಯೂ ಆಗಿಹೋಗಿದೆ.ಎಷ್ಟೆಂದರೆ ಇಂದೇಕೋ ಭೂಕಂಪ ಆಗಿಲ್ಲ ಎಂದು ಕೇಳುವಷ್ಟು.ಕೃಷ್ಣಾ ಹೊಳೆಗಿರುವ ಮೊದಲ ಬೃಹತ್ ಅಣೆಕಟ್ಟೇ ಕೊಯ್ನಾ.ಇದರ ನೀರು ಸಂಗ್ರಹ ಸಾಮಥ್ರ್ಯ 105.ಟಿ.ಎಮ್.ಸಿ.ಯಷ್ಟು.ನಂತರ ರಾಜಾಪುರ ಅಣೆ.ಕೊಯ್ನಾ ಅಣೆಯಿಂದ ಬಿಟ್ಟ ನೀರು ರಾಜಾಪುರ ಅಣೆಗೆ ತಲುಪಿ ಅಲ್ಲಿಂದ ನೇರವಾಗಿ ಕರ್ನಾಟಕಕ್ಕೆ ಪ್ರವಹಿಸುತ್ತದೆ.ಇಲ್ಲಿಂದ ಹರಿದು ಮತ್ತೆ ಮಹಾರಾಷ್ಟ್ರ ಪ್ರವೇಶಿಸಿ ನಂತರ ರಾಜ್ಯಕ್ಕೆ ಬಂದುಆಲಮಟ್ಟಿ ಜಲಾಶಯಕ್ಕೆ ಸೇರುತ್ತದೆ.ಹೀಗಾಗಿ ಕೊಯ್ನಾ ಮತ್ತು ರಾಜಾಪುರದಿಂದ ಬಿಟ್ಟ ನೀರು ಪ್ರವಾಹೋಪಾದಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ,ರಾಯಬಾಗ,ಅಥಣಿ ತಾಲೂಕು ಗಳಲ್ಲಿ ನೆರೆಯುಂಟು ಮಾಡುತ್ತದೆ.ಇದರ ಉಪನದಿಗಳಾಗಿರುವ ವೇದಗಂಗಾ,ದೂಧಗಂಗಾ ಇವು ನಿಪ್ಪಾಣಿ ತಾಲೂಕಿನ ಭೋಜ - ಬಾರವಾಡ ಬಳಿ ಒಂದಾಗಿ ನಂತರ ಚಿಕ್ಕೋಡಿ ತಾಲೂಕಿನ ಕಲ್ಲೋಳ ಸಮೀಪ ಕೃಷ್ಣಾದಲ್ಲಿ ಲೀನವಾಗುವದರಿಂದ ಪ್ರವಾಹ ರೋಷಾವೇಷದಿಂದ ಮುನ್ನುಗುತ್ತದೆ.(ಕಲ್ಲೋಳದಲ್ಲಿ ಒಂದು ಬ್ಯಾರೇಜಿದೆ)ಮುಂದೆ ಖ್ಯಾತ ನರಸಿಂಹದೇವರ ದೇವಸ್ಥಾನದ ನರಸಿಂಹವಾಡಿ ಮೂಲಕ ಬಾಗಲಕೋಟ ಜಿಲ್ಲೆ ಪ್ರವೇಶಿಸುತ್ತದೆ.(ಆಲಮಟ್ಟಿಯ ಮೇಲ್ಭಾಗದಲ್ಲಿರುವ ಚಿಕ್ಕಸಂಗಮದ ಬಳಿ ಘಟಪ್ರಭೆಯನ್ನು ತನ್ನೊಡಲಿಗೆ ಸೇರಿಸಿಕೊಂಡು ಆಲಮಟ್ಟಿ ಜಲಾಶಯದಲ್ಲಿ ವಿಶ್ರಮಿಸಿ ಕೂಡಲಸಂಗಮದ ಮೂಲಕ ಹರಿದು ಇಲ್ಲಿಂದ ಕೃಷ್ಣೆ ಏಕಪ್ರಕಾರವಾಗಿ ಹರಿದು ಬಸವಸಾಗರ ತಲುಪಿ ಮುಂದೆ ಆಂಧ್ರಕ್ಕೆ ನುಸುಳುತ್ತಾಳೆ.(ಕೂಡಲಸಂಗಮದಲ್ಲೇ ಮಲಪ್ರಭಾ ನದಿ ಕೃಷ್ಣಾಕ್ಕೆ ಸೇರುತ್ತದೆ.)ಮಹಾರಾಷ್ಟ್ರದ ಅಂಬೋಲಿಯ ಘಟ್ಟಪ್ರದೇಶÀದಲ್ಲಿ ಹುಟ್ಟಿರುವ ಘಟಪ್ರಭೆ ಹಾಗೂ ಹಿರಣ್ಯಕೇಶಿ ಇವೆರಡೂ ಕೃಷ್ಣೆಯ ಉಪನದಿಗಳೇ.ಆಜರಾ,ರಾಮತೀರ್ಥ ಮೂಲಕ ಬೆಳಗಾವಿ ಜಿಲ್ಲೆಗೆ,ಹುಕ್ಕೇರಿ ತಾಲೂಕನ್ನು ಪ್ರವೇಶಿಸಿವೆ.ಮುಂದೆ ಘೋಡಗೇರಿ ಬಳಿ ಇವೆರಡೂ ಸಂಗಮಗೊಂಡು ಘಟಪ್ರಭಾ ಒಂದೇ ಹೆಸರಿನಲ್ಲಿ ಹರಿಯುತ್ತದೆ.ಹುಕ್ಕೇರಿ ತಾಲೂಕಿನ ಹಿಡಕಲ್ ಬಳಿ ಘಟಪ್ರಭಾ ನದಿಗೆ ದೊಡ್ಡ ಅಣೆಕಟ್ಟು ಇದೆ.ಈ ಅಣೆಯಿಂದ ಬಿಟ್ಟ ನೀರು ಧೂಪದಾಳ ಜಲಾಶಯ,ಜಲಪಾತದಿಂದ ಧುಮ್ಮಿಕ್ಕಿ ಗೋಕಾಕ ನಗರದ ಬಹುತೇಕ ಭಾಗ ಹಾಗೂ ದಂಡೆಯ ಹಲವಾರು ಹಳ್ಳಿಗಳನ್ನು ಆಪೋಶನ ತೆಗೆದುಕೊಂಡಿತು.ಧೂಪದಾಳ ಜಲಾಶಯ ಈಗ ಹೂಳಿನಿಂದ ಸಂಪೂರ್ಣ ಭರ್ತಿಯಾಗಿದ್ದು ಇಲ್ಲಿ ನೀರು ಶೇಖರಣೆ ಕ್ಷಮತೆ ಕುಸಿದಿದೆ.


ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಉಗಮಗೊಂಡಿರುವ ಮಲಪ್ರಭಾ ನದಿ ಕೂಡ ಕೃಷ್ಣಾದ ಉಪನದಿಯೇ.ಸದಾ ಶಾಂತವಾಗಿರುವ ಈ ನದಿ ಸವದತ್ತಿ ಬಳಿಯ ನವಿಲುತೀರ್ಥ ಅಣೆಕಟ್ಟಿನಲ್ಲಿ ಸಂಗ್ರಹಗೊಂಡು ಒಮ್ಮೆಲೆ ಅಣೆಯಿಂದ ಹೊರನುಗ್ಗಿದ್ದೇ ರಾಮದುರ್ಗ, ಐಹೊಳೆ, ಪಟ್ಟದಕಲ್ಲು, ನರಗುಂದ ತಾಲೂಕಿನ ಕೆಲಭಾಗದಲ್ಲಿ ಅವಾಂತರ ಸೃಷ್ಟಿಸಿತು.

ಅಗಸ್ಟ ಮೊದಲನೇ ವಾರದಲ್ಲಿಯೇ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಹನಿಯಲಾರಂಭಿಸಿತ್ತು.ಹವಾಮಾನ ತಜ್ಞರು ಅತಿವೃಷ್ಟಿಯ ಮುನ್ಸೂಚನೆ ನೀಡಿದ್ದರೂ ಸರ್ಕಾರ ಕೊಯ್ನಾ ಅಣೆಕಟ್ಟಿನಲ್ಲಿ ಸಂಗ್ರಹಗೊಂಡಿದ್ದ ನೀರನ್ನು ಮುಂಜಾಗರೂಕತಾ ಕ್ರಮವಾಗಿ ಅಷ್ಟಷ್ಟೇ ಬಿಡುವ ಬಗ್ಗೆ ಯಾವ ನಿರ್ಣಯವನ್ನೂ ಕೈಕೊಂಡಿರಲಿಲ್ಲ.ಈ ಮಧ್ಯೆ ಅಗಸ್ಟ ದಿ.3ರಂದು ಈ ಪ್ರದೇಶದಲ್ಲಿ ಅಣೆಕಟ್ಟಿನ ಸನಿಹದಲ್ಲೇ ಭೂಕಂಪವೂ ಆಗಿತ್ತು.ಇದರೊಂದಿಗೆ ಮಳೆಯ ಪ್ರಮಾಣವೂ ಹೆಚ್ಚಾಗಿತ್ತು.ನೀರಿನ ಒಳಹÀರಿವಿನ ಪ್ರಮಾಣವೂ ಅಧಿಕಗೊಂಡಿತ್ತು.ಅಗಸ್ಟ ದಿ.1ರಂದು ಅಣೆಕಟ್ಟೆಯಲ್ಲಿ 80.ಟಿ.ಎಮ್.ಸಿ.ಗಳಷ್ಟು ನೀರು ಸಂಗ್ರಹಗೊಂಡಿತ್ತು.ಅಂದೇ ಕೇಂದ್ರ ನೀರು ಮಂಡಳಿಯು 1.ಲಕ್ಷ. ಕ್ಯೂಸೆಕ್ಸಗಳಷ್ಟು ನೀರನ್ನು ಅಣೆಯಿಂದ ಹೊರಬಿಡಲು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿತ್ತು.ಆದರೆ ಸರ್ಕಾರ ಅದನ್ನು ಅಲಕ್ಷಿಸಿತು.ಮಳೆ ಹೆಚ್ಚುತ್ತಲೇ ಹೋಯಿತು,ನೀರೂ ಕೂಡ ಏರತೊಡಗಿತ್ತು.ದಿ.3ರಂದು ಅಣೆಯಲ್ಲಿ 89.ಟಿ.ಎಮ್.ಸಿ.ಗಳಷ್ಟು ನೀರು ಸಂಗ್ರಹಗೊಂಡಾUಲೂ ಸರ್ಕಾರ ಹೆಚ್ಚಿನ ನೀರು ಬಿಡಲು ಮೀನಮೇಶ ಎಣಿಸುತ್ತಿತ್ತು. 105ಟಿ.ಎಮ್.ಸಿ.ನೀರು ಸಂಗ್ರಹ ಸಾಮಥ್ರ್ಯದ ಅಣೆಯಲ್ಲಿ ಬೇಸಿಗೆಯ ದಿನಗಳಲ್ಲಿ ಬೇಕಾಗಬಹುದಾದ ನೀರನ್ನು ಈಗಲೇ ಸಂಗ್ರಹಿಸಿಟ್ಟುಕೊಳ್ಳಲು ಉದ್ದೇಶಿಸಿದ್ದ ಸರ್ಕಾರ ಕನಿಷ್ಠ 100.ಟಿ.ಎಮ್.ಸಿ.ಗಳಷ್ಟು ನೀರನ್ನು ಹಿಡಿದಿಟ್ಟುಕೊಳ್ಳಲು ಬಯಸಿತ್ತು. ದಿ.4ರಂದು ಯಾವಾಗ ಅಣೆಕಟ್ಟಿನಲ್ಲಿ 95 ಟಿ.ಎಮ್.ಸಿಗಳಷ್ಟು ನೀರು ಸಂಗ್ರಹಗೊಂಡಿತೋ ಆಗ ಮತ್ತೆ ಕೇಂದ್ರ ಜಲಮಂಡಳಿ ತಕ್ಷಣವೇ ನೀರು ಬಿಡುವಂತೆ ಸರ್ಕಾರಕ್ಕೆ ಆದೇಶಿಸಿತು.ಇಲ್ಲದಿದ್ದರೆ ತಾನೇ ಇಂಜಿನಿಯರರನ್ನು ಕಳಿಸಿ ನೀರು ಬಿಡುವದಾಗಿಯು ಜತೆಗೆ ಸಂಬಂಧಿತ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಕೊಳ್ಳುವದಾಗಿಯೂ ಎಚ್ಚರಿಕೆ ನೀಡಿತು. ಇದರಿಂದ ಎಚ್ಚೆತ್ತುಕೊಂಡ ಅಣೆಯ ಎಂಜಿನಿಯರರು ಆ ರಾತ್ರಿಯೇ ಏಕಾಏಕಿ 2.50.ಲಕ್ಷ.ಕ್ಯೂಸೆಕ್ಸದಷ್ಟು ನೀರನ್ನು ಹೊರಗೆ ಬಿಟ್ಟರು. ಈ ವಿಷಯದಲ್ಲಿ ಮಹಾರಾಷ್ಟ್ರ ಸರ್ಕಾರ ಯಾವದೇ ಮುನ್ಸೂಚನೆಯನ್ನು ಕರ್ನಾಟಕ ಸರ್ಕಾರಕ್ಕೆ ನೀಡಿರಲೇ ಇಲ್ಲ.ನಿಯಮಗಳನ್ವಯ ಮಹಾರಾಷ್ಟ್ರ ಸರ್ಕಾರ ನೀರು ಬಿಡುವ ವಿಷಯವನ್ನು 24ತಾಸು ಮುಂಚಿತವಾಗಿ ಕರ್ನಾಟಕ ಸರ್ಕಾರಕ್ಕೆ ತಿಳಿಸಬೇಕಾಗಿತ್ತು.ಇದರಿಂದ ಇಲ್ಲಿಯ ಸರ್ಕಾರ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಅನುಕೂಲವಾÀಗುತ್ತದೆ.ಆದರೆ ಇಂಥ ಯಾವ ನಿಯಮಗಳನ್ನು ಮಹಾರಾಷ್ಟ್ರ ಸರ್ಕಾರ ಪಾಲಿಸಲೆ ಇಲ್ಲ.ದಿ.4ರಂದು ರಾತ್ರಿ ಅತ್ತ ಕೊಯ್ನಾ ಅಣೆಯ ಗೇಟುಗಳನ್ನು ತೆರೆಯುತ್ತಿರುವಂತೆಯೇ ಕರ್ನಾಟಕ ಸರ್ಕಾರಕ್ಕೆ ತಾನು ಈಗ ನೀರು ಬಿಡುತ್ತಿರುವದಾಗಿ ತಿಳಿಸಿತು. ಇದರಿಂದ ಗಲಿಬಿಲಿಗೊಂಡವರೆಂದರೆ ಆಲಮಟ್ಟಿ ಅಣೆಕಟ್ಟೆಯ ಇಂಜಿನಿಯರರು.

ವಾಸ್ತವಿಕವಾಗಿ ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭೀಕರ ಮಳೆಯ ಅರಿವು ಇವರಿಗಿತ್ತು.ಇಲ್ಲಿಯೂ ಸಹ ಅಷ್ಟೇ ಮಳೆ ಕುಂಭದ್ರೋಣವಾಗಿ ಬೀಳುತ್ತಿತ್ತು.ಆಲಮಟ್ಟಿ ಹಾಗೂ ನಾರಾಯಣಪುರ ಅಣೆಕಟ್ಟುಗಳಲ್ಲಿಯೂ ನೀರು ಸಂಗ್ರಹ ಏರುತ್ತಲೇ ನಡೆದು ಅವು ಕೂಡ ಭರ್ತಿಯಾಗುವ ಮಟ್ಟಕ್ಕೆ ತಲುಪಿದ್ದವು.ಇಂಥ ಪರಿಸ್ಥಿತಿಯಲ್ಲಿ ತೀವ್ರ ತಬ್ಬಿಬ್ಬಾದ,ಒತ್ತಡಕ್ಕೆ ಸಿಲುಕಿದ ಅಣೆಯ ಅಧಿಕಾರಿಗಳು ರಾತ್ರೋರಾತ್ರಿಯೇ ಆಲಮಟ್ಟಿ ಅಣೆಯ ಬಾಗಿಲುಗಳನ್ನು ತೆಗೆದು 2.50.ಲಕ್ಷ.ಕ್ಯೂಸೆಕ್ಸ ನೀರನ್ನು ಹರಿಯಬಿಟ್ಟರು.ಒಮ್ಮೆಲೆ ಧುಮ್ಮಿಕ್ಕಿ ನುಗ್ಗಿದ ಪ್ರವಾಹದಿಂದಾಗಿ ಕೃಷ್ಣೆಉಕ್ಕಿಉಕ್ಕಿ ಹರಿದಳು,ಜಲಪ್ರಳಯವನ್ನೇ ನಿರ್ಮಿಸಿದಳು.ಕೃಷ್ಣೆಯ ಕಬಂಧಬಾಹುಗಳಿಗೆ ಜನ ತತ್ತರಿಸಿಹೋದರು.ಹಳ್ಳಿಗಳು ಕೃಷ್ಣೆಯ ಒಡಲು ಸೇರಿದವು.ಈ ಮೂರು ದಿನಗಳಲ್ಲಿ ಅಲ್ಲಿನ ಕೃಷ್ಣಾ ಕಣಿವೆಯ ಎಲ್ಲ ಏಳೂ ಅಣೆಕಟ್ಟುಗಳು ಭರ್ತಿಯಾಗಿ ಹೆಚ್ಚಿನ ನೀರನ್ನು ಹೊರಬಿಡಲಾಗುತ್ತಿತ್ತು.ದಿನವೂ 2.50.ಲಕ್ಷ.ಕ್ಯೂಸೆಕ್ಸಗೂ ಅಧಿಕ ನೀರು ನದಿಗೆ ಮುನ್ನುಗ್ಗಿದ ಪರಿಣಾಮವೇ ಯಮಸ್ವರೂಪಿ ಧಿಡೀರ ಪ್ರವಾಹಕ್ಕೆ ಕಾರಣ.ಕೊಯ್ನಾ ಜಲಾಶಯದಿಂದ ಬಿಟ್ಟಷ್ಟೇ ಸಮಪ್ರಮಾಣದ ನೀರನ್ನು ಆಲಮಟ್ಟಿಯಿಂದಲೂ ಬಿಡಲಾಯಿತು.ಆಲಮಟ್ಟಿ ಜಲಾಶಯದ ನೀರು ಸಂಗ್ರಹ ಸಾಮಥ್ರ್ಯ 123.ಟಿ.ಎಮ್.ಸಿ.ಗಳಷ್ಟು.ಜುಲೈ ಅಂತ್ಯದಲ್ಲಿ ಇಲ್ಲಿಂದ ದಿನವೂ 2ಲಕ್ಷ.ಕ್ಯೂಸೆಕ್ಸ ನೀರನ್ನು ಹೊರಬಿಡಲಾಗುತ್ತಿತ್ತು.ಪ್ರತಿದಿನ 10.ಲಕ್ಷ.ಕ್ಯೂ. ನೀರನ್ನು ಹೊರಹಾಕುವ ಸಾಮಥ್ರ್ಯ ವಿರುವ ಆಲಮಟ್ಟಿಗೆ ಕೊಯ್ನಾದಿಂದ ಬಂದ ನೀರನ್ನು ಹಿಡಿದಿಟ್ಟು ಕೊಳ್ಳುವ ಶಕ್ತಿಯಿದೆ.ಇದು 120.ಟಿ.ಎಮ್.ಸಿ.ಗಳಷ್ಟು ನೀರನ್ನು ತನ್ನ ಒಡಲಲ್ಲಿ ಶೇಖರಿಸಿಟ್ಟು ಕೊಳ್ಳಬಹುದಾಗಿದೆ.ಆದರಿದು ಆಂಧ್ರ, ಮಹಾರಾಷ್ಟ್ರಗಳಿಂದ ತಗಾದೆ ತರುವ ಸಾಧ್ಯತೆಯಿರುವದರಿಂದ ತನ್ನ ನೀರು ಶೇಖರಣೆ ಮಿತಿಗೊಳಪಡಿಸಿದೆ.

ಕೃಷ್ಣೆಯ ಈ ಕಂಟಕವನ್ನು ನಿವಾರಿಸುವಲ್ಲಿ ಕರ್ನಾಟಕ ಸರ್ಕಾರದ ನೀರಾವರಿ ಅಧಿಕಾರಿಗಳೂ ಕೂಡ ಎಡವಿದರು.ಕೊಯ್ನಾ ಅಣೆಕಟ್ಟು ಪ್ರದೇಶದಲ್ಲಿಯ ನೀರು ಸಂಗ್ರಹದ ಬೆಳವಣಿಗೆಯನ್ನು,ಆಗುತ್ತಿರುವ ಮಳೆಯ ಪ್ರಮಾಣವನ್ನು ತುಂಬ ಎಚ್ಚರದಿಂದ ಪರಿಶೀಲಿಸುತ್ತಿರಬೇಕಿತ್ತು.ಕೊಯ್ನಾ ಪ್ರದೇಶಕ್ಕೆ ಓರ್ವ ಹಿರಿಯ ಜಲಸಂಪನ್ಮೂಲ ಅಧಿಕಾರಿಯನ್ನು ಮುಂಚಿತವಾಗಿಯೇ ಎಂದರೆ ಅಗಸ್ಟ ಪ್ರಾರಂಭದಲ್ಲೇ ಕಳುಹಿಸಿ ಅಲ್ಲಿಯ ವಾಸ್ತವತೆಯನ್ನು ಅಧ್ಯಯನಿ ಸಬೇಕಾಗಿತ್ತು. ಆದರೆ ಇದನ್ನು ನಮ್ಮ ಸರ್ಕಾರ ಮಾಡಲೇ ಇಲ್ಲ.ಅಲ್ಲಿಯವರು ಸಕಾಲಕ್ಕೆ ತಿಳಿಸಲಿಲ್ಲ,ಇಲ್ಲಿಯವರೂ ಸಕಾಲಕ್ಕೆ ಅರಿಯುವ ಗೋಜಿಗೆ ಹೋಗಲಿಲ್ಲ.ಹೀಗಾಗಿ ದಿ.3ರಿಂದ5 ರವರೆÀಗಿನ ಮೂರು ದಿನಗಳಲ್ಲಿ ರಾಜ್ಯದ ಉತ್ತರ ಭಾಗ ಕಂಡುಕೇಳರಿಯದ ಜಲಪ್ರಳಯಕ್ಕೆ ತುತ್ತಾಗಬೇಕಾಯಿತು. ಈ ಭಾಗ ಹಾಳಾಗುವದಕ್ಕೆ ಕರ್ನಾಟಕ, ಮಹಾರಾಷ್ಟ್ರ ಎರಡೂ ಸರ್ಕಾರಗಳು ಕಾರಣವಾಗಿದ್ದು ವಿಪರ್ಯಾಸವೇ ಹೌದು.ಇವೆರಡೂ ಸರ್ಕಾರಗಳ ತಪ್ಪಿನಿಂದಾಗಿ ನಿಷ್ಪಾಪ ಜನರು ಶಿಕ್ಷೆ,ದಂಡ ಎರಡನ್ನೂ ಅನುಭವಿಸುವಂತಾಗಿದೆ.ಕೊಯ್ನಾ ದಿಂದ ಬಿಡುಗಡೆ ಯಾದ ಪ್ರವಾಹ ಕೇವಲ ನಮ್ಮ ರಾಜ್ಯದಲ್ಲಷ್ಟೇ ಅಲ್ಲ ಮಹಾರಾಷ್ಟ್ರದ ಕೊಲ್ಹಾಪುರ, ಸಾಂಗಲಿ, ಸಾತಾರಾ ನಗರಗಳ ನ್ನೊಳಗೊಂಡಂತೆ ಈ ಮೂರೂ ಜಿಲ್ಲೆಗಳ ಗ್ರಾಮಾಂತರ ಪ್ರದೇಶಗಳಲ್ಲಿಯೂ ಅಪಾರ ಹಾನಿ,ಸಾವುನೋವು ಸಂಭವಿಸಿದೆ. ಅಂತೆಯೇ ಈ ನೆರೆ ಪೃಕೃತಿ ಪ್ರಕೋಪ ವೆಂದು ಮೇಲ್ನೋ ಟಕ್ಕೆಎನಿಸಿದರೂ ಕೊಯ್ನಾ ಅಣೆಕಟ್ಟೆ ಅಧಿಕಾರಿಗಳ ತಪ್ಪಿನಿಂದ, ಮಹಾರಾಷ್ಟ್ರ ಸರ್ಕಾರದ ನೀರಿನ ಅತಿ ದುರಾಶೆಯಿಂದ ಆಗಿದ್ದು ಇದು ಮಾನವ ನಿರ್ಮಿತ ಎನ್ನುವ ದರಲ್ಲಿ ಅತಿಶಯೋಕ್ತಿಯಲ್ಲ.ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಈ ಮೂರು ದಿನಗಳಲ್ಲಿ 900ರಿಂದ1150.ಮಿ.ಮೀ.ಅಪೂರ್ವ ದಾಖಲೆಯ ಮಳೆ ಸುರಿದಿದೆ.

ಬೆಳಗಾವಿ ಜಿಲ್ಲೆಯ ಪ್ರಮುಖ ಜಲಾಶಯವಾಗಿರುವ 2175 ಅಡಿ(51.ಟಿ.ಎಮ್.ಸಿ.) ಸಾಮಥ್ರ್ಯ ದ ಘಟಪ್ರಭಾದ ಹಿಡಕಲ್ ಅಣೆಕಟ್ಟಿನಲ್ಲಿ ಜುಲೈ ಅಂತ್ಯz ವರೆಗೂ31.75.ಟಿ.ಎಮ್.ಸಿ.( ದಿ.31ರಂದು) ನೀರಿತ್ತು.ಕಳೆದವರ್ಷದ ಇದೇ ಅವಧಿಯಲ್ಲಿ ಇದಕ್ಕೂ ಸ್ವಲ್ಪು ಹೆಚ್ಚು ನೀರಿತ್ತು.ಈ ಹಿನ್ನೆಲೆಯಲ್ಲಿ ಈ ಸಲ ಅಣೆಕಟ್ಟಿನಲ್ಲಿ ನೀರು ಕಾಯ್ದಿರಿಸಿಕೊಳ್ಳಲು ಉದ್ದೇಶಿಸಲಾಗಿತ್ತು.ಆದರೆ ಅಗಸ್ಟ ಆರಂಭದಲ್ಲಿ ಘಟಪ್ರಭಾ ಜಲಾನಯನ ಪ್ರದೇಶವಾದ ಮಹಾರಾಷ್ಟ್ರದ ಅಂಬೋಲಿ ಘಟ್ಟ ಪ್ರದೇಶದಲ್ಲಿ ನಿರಂತರ ಮಳೆ ಸುರಿಯಲಾರಂಭಿಸಿದ್ದರಿಂದ ಅಣೆಯಲ್ಲಿ ಅಗಸ್ಟ ದಿ.1ರಂದು ಒಂದೇ ದಿನ 28,744 ಕ್ಯೂಸೆಕ್ಸ ನೀರು ಎಂದರೆ 3ಅಡಿ ಬಂದಿತು.ಈ ನೀರು ಪ್ರತಿ ದಿನವೂ 3ರಿಂದ 4ಅಡಿಯಷ್ಟು ಏರುತ್ತಲೇ ಹೋಯಿತು..ದಿ.3ರಂದು 30,600 ಕ್ಯೂಸೆಕ್ಸಕ್ಕೂ ಹೆಚ್ಚು ನೀರು ಅಣೆಗೆ ಪ್ರವಹಿಸಲಾರಂಬಿಸಿತು.(ದಿ.4ರಂದು ಒಳಹರಿವು 36,327 ಕ್ಯೂ,)ಇದರಿಂದ ಜಾಗೃತಗೊಂಡ ಅಧಿಕಾರಿಗಳು ಪೂರ್ತಿ ನಿಗಾ ಇಟ್ಟು ದಿ.5ರಂದು ಜಲಾಶಯಕ್ಕೆ 47,577 ಕ್ಯೂಸೆಕ್ಸ ನೀರು ಬಂದಾಗ ಎಂದರೆ ಐದೂವರೆ ಅಡಿ ಏರಿ 45.1.ಟಿ.ಎಮ್.ಸಿ ನೀರು ಸಂಗ್ರಹಗೊಂಡಾಗ (2171ಅಡಿ) ಪೂರ್ತಿ ತುಂಬುತ್ತಿರುವಂತೆಯೇ ಎಲ್ಲ 8ಗೇಟಗಳನ್ನು ತೆಗೆದು 25,000.ಕ್ಯೂಸೆಕ್ಸ ನೀರನ್ನು ಮಧ್ಯಹ್ನ 1.30ಕ್ಕೆ ಹೊರಬಿಟ್ಟು ನೀರಿನ ಮಟ್ಟ ಕಾಯ್ದುಕೊಂಡರು.ನದಿಗೆ ಹೆಚ್ಚಿನ ನೀರು ಬಿಡುವದಾಗಿ ಮುನ್ಸೂಚನೆ ನೀಡಲಾಗಿತ್ತಾದರೂ ನದಿ ಅಪಾಯದ ಮಟ್ಟ ಮೀರಿಯೇ ಹರಿಯಿತು.ಘೋಡಗೇರಿ ಬಳಿ ಹಿರಣ್ಯಕೇಶಿ ನದಿ ಪ್ರವಾಹವೂ ಘಟಪ್ರಭೆಗೆ ಸೇರಿಕೊಂಡದ್ದರಿಂದ ಧುಪದಾಳ ಜಲಾಶಯದಲ್ಲಿ ಸಂಪೂರ್ಣ ಹೂಳು ತುಂಬಿಕೊಂಡು ಅಲ್ಲಿಯೂ ನೀರು ಸಂಗ್ರಹಿಸಲಾರದೇ ಹೋದುದರಿಂದ ಊಹಿಸಲಾರದ ಸ್ಥಿತಿಯಲ್ಲಿ ಘಟಪ್ರಭೆ ಮೇರೆದಪ್ಪಿ ಓಡಾಡಿ ಗೋಕಾಕ ಪಟ್ಟಣ, ನದಿದಡದ ಹಳ್ಳಿಗಳು ಭಾಗಶ: ಮಹಾಪೂರದಲ್ಲಿ ಮುಳುಗಿದವು. ಮಲಪ್ರಭಾ ನದಿ ಈ ಸಲ ಇತಿಹಾಸವನ್ನೇ ನಿರ್ಮಿಸಿತು.

37.ಟಿ.ಎಮ್.ಸಿ.ಜಲ ಸಂಗ್ರಹ ಸಾಮಥ್ರ್ಯದ ನವಿಲುತೀರ್ಥ ಅಣೆಕಟ್ಟು ಕಟ್ಟಿದ 47 ವರ್ಷಗಳಲ್ಲಿ ತುಂಬಿದ್ದು ಕೇವಲ ಏಳು ಬಾರಿ ಮಾತ್ರ.ಈಗ 8ನೇ ಸಲ ತುಂಬಿ ತುಳುಕಿ ಭೋರ್ಗರೆಯುತ್ತಿದ್ದಾಳೆ. ಸೌದತ್ತಿ ಬಳಿಯ ನವಿಲುತೀರ್ಥದಲ್ಲಿ 1972ರಲ್ಲಿ ನಿರ್ಮಾಣಗೊಂಡ ಅಣೆಕಟ್ಟಿನಲ್ಲಿ ಮೊದಲ ಸಲ 1973ರಲ್ಲಿ ಪೂರ್ಣಪ್ರಮಾಣದ ನೀರು ಸಂಗ್ರಹಿಸಲಾಗಿತ್ತು.ಸಾಮಾನ್ಯವಾಗಿ ಅಗಸ್ಟ,ಸಪ್ಟೆಂಬರದಲ್ಲಿ ಹೆಚ್ಚು ನೀರು ಸಂಗ್ರಹಗೊಳ್ಳುವ ಇಲ್ಲಿ ಈಗ ಅಗಸ್ಟ ಮೊದಲ ವಾರವೇ ನೀರು ಭರ್ತಿಯಾಗಿದೆ.ನದಿ ಹಾಗೂ ಇದರ ಬಲದಂಡೆ ಕಾಲುವೆಯಿಂದ ಹೆಚ್ಚಿನ ನೀರು ಹೊರ ಬಿಡಲಾಗುತ್ತಿರುವದರಿಂದ ಕಾಲುವೆ ತುಂಬಿದ್ದರಿಂದಾಗಿ ಗದಗ ಜಿಲ್ಲೆಯ ನರಗುಂದ,ನವಲಗುಂದ ಭಾಗದ ರೈತರಿಗೆ ನಷ್ಟವಾಗಿದೆ.ಆದರೆ ಎಲ್ಲಕ್ಕಿಂತ ದೊಡ್ಡ ಹಾನಿ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಆಗಿದೆ.ರಾಮದುರ್ಗ ಕೂಡ ಭಾಗಶ: ಜಲಾವೃತಗೊಂಡಿದೆ.ಇದಕ್ಕೆ ನೆರೆ ಕಾರಣವೆಂದು ಹೇಳಲಾಗುತ್ತಿದ್ದರೂ ನದಿಯಲ್ಲಿ ಬಹಳಷ್ಟು ಉಸುಕು,ಹೂಳು ತುಂಬಿದ್ದು ಹಾಗೂ ನದಿದಂಡೆಯನ್ನು ಅತಿಕ್ರಮಣ ಮಾಡಿದ್ದು ಪ್ರವಾಹಕ್ಕೆ ಕಾರಣ ಎನ್ನಬಹುದಾಗಿದೆ.ರಾಮದುರ್ಗದ ನದಿ ದಡದಲ್ಲಿ 40 ವರ್ಷಗಳ ಹಿಂದಿದ್ದ ಬುರುಜಿನ ಮೇಲೆ ನಿಂತು ನದಿಯಲ್ಲಿ ಜಿಗಿಯುತ್ತಿದ್ದುದನ್ನು ಅಲ್ಲಿಯ ಕೆಲವರು ನೆನಪಿಸಿಕೊಳ್ಳುತ್ತಾರೆ, ಆದರೀಗ ಈ ಬುರುಜೇ ಹೂಳು ಉಸುಕಿನಲ್ಲಿ ಮುಳುಗಿಹೋಗಿದ್ದು ನದಿ ಎಲ್ಲಿದೆಂದು ಹುಡುಕಾÀಡುವ ಸ್ಥಿತಿ ಈಗಿದೆ.ಇಂಥ ನದಿಯಲ್ಲಿ ಪ್ರವಾಹ ಉಕ್ಕೇರುವದು ಸ್ವಾಭಾವಿಕವೇ. ಹೀಗಾಗಿ ಮಲಪ್ರಭೆ ರಾಮದುರ್ಗದಲ್ಲಿ ರೌದ್ರಾವತರ ತಾಳಿದ್ದಕ್ಕೆ ಸ್ವಯಂಕೃತಾಪರಾಧವೇ ಸರಿ.ಮಲಪ್ರಭಾ ಅಣೆಕಟ್ಟೆಯ ಅಧಿಕಾರಿಗಳ ತಪ್ಪಿನಿಂದಾಗಿ ನದಿಯಲ್ಲಿ ಮಹಾಪೂರ ಉಕ್ಕಿತೆಂದು ಹೇಳಲಾಗುತ್ತಿದೆ.ನೆರೆ ಬಂದು 30.ಟಿ.ಎಮ್.ಸಿ.ನೀರು ಸಂಗ್ರಹವಾದಾಗ 25,000ದಿಂದ 30,000.ಕ್ಯೂಸೆಕ್ಸದಷ್ಟು ನೀರು ಬಿಡಬೇಕಾಗಿತ್ತು.ಆದರೆ ಅಧಿಕಾÀರಿಗಳು ಧಿಡೀರೆಂದು 90,000ದಿಂದ 1ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ ನೀರು ಹರಿಸಿದ್ದೇ ಈಗ ಇತಿಹಾಸ.

ಮಲಪ್ರಭಾ ಮಹಾಪೂರದೋಪಾದಿ ರುದ್ರ ನರ್ತನಗೈದಳೆಂದು ಆಪಾದಿಸಲಾಗುತ್ತಿದೆ.ಇದಿಷ್ಟು ಕೃಷ್ಣೆ,ಘಟಪ್ರಭೆ,ಮಲ್ರಪ್ರಭೆಯರ ಮಹಾಪ್ರವಾಹದ ಮಹಾರುದ್ರಕಾವ್ಯ,ದುರಂತ ಕಾವ್ಯವು ಹೌದು.ಮಾರ್ಕಂಡೇಯ ನದಿ ಮತ್ತು ಬಳ್ಳಾರಿ ನಾಲಾ ಇವೂ ಕೂಡ ಬೆಳಗಾವಿ ನಗರಹಾಗೂ ಸುತ್ತಲೂ ಪ್ರವಾಹ ಅವಾಂತರ ಮಾಡಿದವು.ಮಾರ್ಕಂಡೇಯ ನದಿಗೆ ಬಳ್ಳಾರಿನಾಲಾ ಗೋಕಾಕ ತಾಲೂಕಿನ ದಾಸನಟ್ಟಿ ಬಳಿ ಕೂಡುತ್ತದೆ.ಇದರಿಂದಾಗಿ ಪ್ರವಾಹ ಹೆಚ್ಚಿಸಿಕೊಂಡ ಮಾರ್ಕಂಡೇಯ ನದಿ ಗೋಕಾಕ ಬಳಿಯೇ ಘಟಪ್ರಭಾಕ್ಕೆ ಸೇರುತ್ತದೆ.ಇದು ಘಟಪ್ರಭಾ ನೆರೆಯನ್ನು ರೌದ್ರವಾಗಿಸುತ್ತದೆ.ನಮ್ಮಲ್ಲಿ ಅವಿರತವೂ ಧಾರಾಕಾರವಾಗಿ ಮೂರು ದಿನ ಸುರಿದ ಮಳೆ ಮಾರ್ಕಂಡೇಯ ಹಾಗೂ ಬಳ್ಳಾರಿನಾಲಾಗಳಲ್ಲಿ ಪ್ರವಾಹ ಬರಿಸಿತು.ಇನ್ನು ಈ ನದಿಗಳ ಎಡಬಲಗಳು ಅತಿಕ್ರಮಣಗೊಂಡಿದ್ದು ಬಹಿರಂಗ ರಹಸ್ಯ.
ನದಿ ದಂಡೆಯ ರೈತರು ದಡಭಾಗವನ್ನು ಅತಿಕ್ರಮಿಸಿಕೊಂಡು ತಮ್ಮ ಜಮೀನು ಗಳನ್ನು ವಿಸ್ತರಿಸಿಕೊಂಡಿರುವದು ಕಣ್ಣಿಗೆ ರಾಚುತ್ತದೆ.ನದಿಯ ದಡದ ಸ್ವಲ್ಪದೂರದಲ್ಲೇ ಮನೆಗಳನ್ನು ನಿರ್ಮಿಸಿಕೊಂಡದ್ದೂ ಇದೆ.ಸಣ್ಣಪುಟ್ಟ ಕೈಗಾರಿಕೆಗಳನ್ನು ಮಾಡಿದ್ದಿದೆ. ಸಾಧ್ಯವಾದಷ್ಟು ಅತಿಕ್ರಮಿಸಿ ಕೊಂಡಿರುವದರಿಂದಲೇ ನದಿಗಳೂ ಕೂಡ ಮಹಾಪೂರವಾಗಿ ಬಂದು ತಮ್ಮ ಹದ್ದನ್ನು ತೋರಿಸಿಹೋಗಿವೆಂದು ಅಭಿಪ್ರಾಯಿಸಲಾಗುತ್ತಿದೆ.

ನದಿಗಳಲ್ಲಿಯ ಉಸುಕು ತೆಗೆಯುವದನ್ನು ಸರ್ಕಾರ ನಿಷೇಧಿಸಿದ್ದೂ ಕೂಡ ಇಂಥ ನೆರೆಹಾವಳಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ನದಿಗಳಲ್ಲಿಯ ಉಸುಕು ತೆಗೆಯುವದರಿಂದ ಅವು ಆಳವಾಗುತ್ತವೆ.ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ತುಂಬಿಕೊಂಡು ನಿಲ್ಲಲು ಸಹಾಯಕವಾಗುತ್ತದೆಂದು ಒಂದು ಅಧ್ಯಯನದ ವರದಿ.ಈ ವರದಿಯಲ್ಲಿ ಸತ್ಯಾಂಶವಿರುವದು ಸರಿಯೇ. ಸರ್ಕಾರ ನದಿಗಳಲ್ಲಿಯ ಮರಳುಗಾರಿಕೆ ನಿರ್ಬಂಧಿಸಿರುವದರಿಂದ ಬಹಳಷ್ಟು ಹೊಳೆಗಳಲ್ಲಿ ಉಸುಕು, ಹೂಳು ತುಂಬಿಕೊಂಡಿದ್ದುಇವು ನೆರೆನೀರನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯ ಕಳೆದುಕೊಂಡಿವೆ.ಇದೂ ಕೂಡ ನದಿಗಳಲ್ಲಿ ಪ್ರವಾಹ ಉಂಟಾಗಲು ಕಾರಣ ಎನ್ನಲಾಗುತ್ತದೆ. ಕೊನೆಯದಾಗಿ ಮತ್ತೆ ಮೂಲಕ್ಕೆ ಬರುವದಾದರೆ ಕೊಯ್ನಾ ಅಣೆಕಟ್ಟಿನಕೃಷ್ಣಾ ಜಲಾನಯನ ಪ್ರದೇಶದಲ್ಲಿ ಜುಲೈ ಆರಂಭದಿಂದಲೂ ಮಳೆ ಆಗುತ್ತಿತ್ತು.ಇದರಿಂದಾಗಿ ಜುಲೈ ಮಧ್ಯಭಾಗದಲ್ಲೇ ಅಣೆಕಟ್ಟು ಅರ್ಧ ಭರ್ತಿಯಾಗಿತ್ತು.ಅಗಸ್ಟ ಆರಂಭದಲ್ಲಿ ಕೊಯ್ನಾ ಸೇರಿದಂತೆ ಕೃಷ್ಣಾ ಕಣಿವೆಯ ಏಳೂ ಅಣೆಗಳು ಪೂರ್ತಿ ಭರ್ತಿಯಾಗಿದ್ದವು ಅಗಸ್ಟ ದಿ.5ರಂದಂತೂ ಇವು ಸಂಪೂರ್ಣ ತುಂಬಿಹೋಗಿದ್ದವು.ಇವುಗಳಿಂದ ನೀರು
ಬಿಡುಗಡೆ ಮಾಡಲು 5ನೇ ದಿನಾಂಕವರೆಗೂ ಕಾಯಬೇಕಿರಲಿಲ್ಲ.ಜುಲೈ ದಿ.25ರಿಂದಲೇ ಕಡಿಮೆ ಪ್ರಮಾಣದಲ್ಲಿ ನೀರು ಬಿಡುತ್ತ ಹೋಗಿದ್ದರೆ ಇಂದಿನ ಕೆಟ್ಟ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ.ಆದರೆ ಮಹಾರಾಷ್ಟ್ರದ ನೀರಿನ ದುರಾಶೆಯಿಂದ ತಾನೂ ಹಾಳಾಗಿ ನಮ್ಮನ್ನೂ ಹಾಳು ಮಾಡಿತು.ಒಂದರ್ಥದಲ್ಲಿ ಸವತಿಯ ಗಂಡ ಸಾಯಲೆಂದಂತೆ.

  • ಪ್ರಕಾಶ ದೇಶಪಾಂಡೆ, ಹುಕ್ಕೇರಿ
    ಹಿರಿಯ ಪತ್ರಕರ್ತರು,
    ಲೇಖಕರು