ಇಂಧನ ಸಂರಕ್ಷಣೆ ಜಾಗೃತಿಯತ್ತ

ನಮ್ಮ ಹಸಿರು ಕ್ರಾಂತಿ ಪತ್ರಿಕೆಯ ಸಂಪಾದಕಿಯದಲ್ಲಿ ಸಂಪಾದಕರು - ಫಾರ್ಮಸಿ, ಇಂಧನ ಸಂರಕ್ಷಣೆ ಜಾಗೃತಿ ಮತ್ತು ರಾಜ್ಯ ಬಿಜೆಪಿ ಅಂದಿನ ಇಕ್ಕಟ್ಟಿನ ಸ್ಥಿತಿಯ ಬಗ್ಗೆ ತಮ್ಮ ಬರಹಗಳನ್ನು ಪತ್ರಿಕೆಯ ಓದುಗರಿಗೆ ನೀಡಿರುವುದು. - ಫಾರ್ಮಸಿ ಹೇಗೆ ಕೆಲವರಿಗೆ ಸಿಹಿಯಾದರೆ ಇನ್ನೂ ಕೆಲವರಿಗೆ ಕಹಿಯಾಗಲಿದೆ ಎಂಬುದನ್ನು ವಿಶ್ಲೇಷಿಸಲಾಗಿದೆ. ಇಂಧನದ ಮೂಲಗಳು, ಅವುಗಳ ಬಳಕೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿರುವ ದರದಲ್ಲಿನ ಏರಿಳಿತ, ನವೀರಕರಿಸಬಹುದಾದ ಇಂಧನಗಳ ಬಗ್ಗೆ ಜಾಗೃತಿಯನ್ನು ಇಂಧನ ಸಂರಕ್ಷಣೆ ಜಾಗೃತಿ ಎಂಬ ಲೇಖನ ಮೂಡಿಸುತ್ತದೆ. ಇನ್ನೂ ರಾಜ್ಯ ಬಿಜೆಪಿಗೆ ಬಿಸಿ ತುಪ್ಪದ ಅನುಭವ ಲೇಖನವು ರಾಜ್ಯ ಬಿಜೆಪಿಯಲ್ಲಿನ ಬಿರುಕು, ವಿಧಾನ ಸಭೆ ಚುನಾವಣೆಯಲ್ಲಿ ಎಡವಿದ್ದು ಮತ್ತು ಲೋಕಸಭಾ ಚುನಾವಣೆಯ ಸವಾಲುಗಳ ಬಗ್ಗೆ ವಿಶ್ಲೇಷಣೆ ಇದೆ. ಇದು ಅಕ್ಟೋಬರ್ 2018 ರಾಜ್ಯದ ದೇಶದ ಅವಶ್ಯಕತೆ, ಸ್ಥಿತಿಗತಿಗಳ ಬಗ್ಗೆ ಚಿಂತನೆಗೆ ಹಚ್ಚುವ ಲೇಖನಗಳಾಗಿವೆ.

ಇಂಧನ ಸಂರಕ್ಷಣೆ ಜಾಗೃತಿಯತ್ತ

ಎರಡು ದಿನಗಳ ಹಿಂದೆಯಷ್ಟೆ ಪ್ರತಿ ಲೀಟರ್ ಡಿಸೇಲ್ ಮತ್ತು ಪೆಟ್ರೋಲ್ ದರವನ್ನು ತಲಾ 2.50 ರೂಪಾಯಿ ಕಡಿತಗೊಳಿಸಿದ ಕೇಂದ್ರ ಸರ್ಕಾರ ಶನಿವಾ ಮತ್ತೆ ಬೆಲೆ ಏರಿಸಿರುವುದು ವಾಹನ ಸವಾರರಿಗೆ ಆತಂಕ ತಂದೊಡ್ಡಿದ್ದರೆ ಪ್ರತಿಪಕ್ಷಗಳ ಟೀಕಾಸ್ತ್ರಗಳಿಗೆ ಗ್ರಾಸ ಒದಗಿಸಿದಂತಾಗಿದೆ.
ಶನಿವಾರದಿಂದ ಡಿಸೇಲ್ ಹಾಗೂ ಪೆಟ್ರೋಲ್ ದರ ಕ್ರಮವಾಗಿ 20 ಪೈಸೆ ಹಾಗೂ 7 ಪೈಸೆ ಹೆಚ್ಚಳವಾಗಲಿದೆ. ಎರಡು ದಿನಗಳ ಹಿಂದೆ ಕೇಂದ್ರವು ಇಂಧನ ಮೇಲಿನ ಸೆಸ್ ಕಡಿತಗೊಳ್ಳಿಸುತ್ತಿದ್ದಂತೆ ಹಲವು ರಾಜ್ಯಗಳು ಸಹ ಬೆಲೆ ಇಳಿಕೆ ಮಾಡಿದ್ದವು. ಬಿಜೆಪಿ ಆಡಳಿತ ಇರುವ ರಾಜ್ಯಗಳು ಉಳಿದ ರಾಜ್ಯಗಳಿಗಿಂತ ಒಂದು ಹೆಜ್ಜೆ ಮುಂದಿಟ್ಟು ಲೀಟರ್ಗೆ 2.50 ರೂಪಾಯಿ ಬೆಲೆ ತಗ್ಗಿಸಿ ದಸರಾ ಉಡುಗರೆಯಾಗಿ ನೀಡಿದ್ದವು.


ಸಾರ್ವಜನಿಕರು ತೈಲ ಬೆಲೆ ಇಳಿಕೆಯ ಸಂತಸ ಕಳೆಯುವ ಮುನ್ನವೇ ಮತ್ತೆ ಬೆಲೆ ಏರಿಕೆ ಕಂಡಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಪ್ರಯೋಗ ಮಾಡಿದಂತ್ತಾಗಿದೆ.


ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ, ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿತ ಹಾಗೂ ಮತ್ತಿತ್ತರ ಸಂಕಿರ್ಣ ಸಂದಿಗ್ಧ ಸ್ಥಿತಿಯಲ್ಲಿಯು ಆರ್ಬಿಐ ದಿನದ ಹಿಂದೆಯಷ್ಟೆ ಬಡ್ಡಿದರವನ್ನು ಯಥಾಸ್ಥಿತಿ ಕಾಪಾಡಿಕೊಂಡು ಆರ್ಥಿಕತೆಯನ್ನು ಸರಿದುಗಿಸುವ ಪ್ರಯತ್ನ ಮಾಡಿತ್ತು. ಹಣಕಾಸು ವಲಯದಲ್ಲಿ ಆರ್ಬಿಐ ಶೇ 0.25ರ ಪ್ರಮಾಣದಲ್ಲಿ ಬಡ್ಡಿದರ ಕಡಿತ ಮಾಡುವುದೆಂಬ ಹೂಡಿಕೆದಾರರ ನಿರೀಕ್ಷೆ ಹುಸಿಯಾದ ಪರಿಣಾಮ ಷೇರುಪೇಟೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ಇದರ ಜೊತೆಗೆ ಇಂಧನ ದರ ಸಹ ಏರಿಕೆ ಕಂಡಿದ್ದು, ಕೇಂದ್ರದ ಆರ್ಥಿಕ ನೀತಿ ಬಗ್ಗೆ ಹೂಡಿಕೆ ವಲಯದಲ್ಲಿ ಪ್ರಶ್ನೆಗಳು ಮೂಡುತ್ತಿವೆ.


ಇಂಧನ ದಿನೇ ದಿನೇ ತುಟ್ಟಿಯಾಗುತ್ತಲೇ ಹೋಗುತ್ತದೆ. ಅದನ್ನೊಂದೆ ನೆಚ್ಚಿಕೊಂಡರೆ ಆಗದು. ಅದೂ ಒಂದಿನ ಬರಿದಾಗುತ್ತದೆ.ಇಂಧನ ಉಳಿತಾಯದ ಬಗ್ಗೆಯೂ ಯೋಚನೆ ಮಾಡಬೇಕಾಗುತ್ತದೆ. ನವೀಕರಿಸಬಹು ದಾದ ಇಂಧನ, ಇಂಧನ ಸಂರಕ್ಷಣೆ, ಅಂತರ್ಜಲ ಸಂರಕ್ಷಣೆ ಹಾಗೂ ಪರಿಸರ ಕಾಪಾಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಒತ್ತು ನೀಡಬೇಕಿದೆ .ಅದು ಇಂದಿನ ತುರ್ತು ಅವಶ್ಯಕತೆಯೂ ಆಗಿದೆ.


ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಲ್ಲಿದ್ದಲಿನ ಮೂಲಕ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಮುಂದೊಂದು ದಿನ ಈ ಸಂಪನ್ಮೂಲ ಬರಿದಾಗುತ್ತದೆ. ಆಗ ಮುಂದೇನು ಮಾಡಬೇಕು? ಎಂಬ ಪ್ರಶ್ನೆ ಉದ್ಭವಿಸು ತ್ತದೆ. ಇದಕ್ಕೆ ಪರ್ಯಾಯವಾಗಿ ಸೌರಶಕ್ತಿ ಯಿಂದ ವಿದ್ಯುತ್ ಉತ್ಪಾದನೆ ಮಾಡುವುದರಿಂದ ಸಮಸ್ಯೆ ನಿವಾರಣೆ ಯಾಗುತ್ತದೆ. ಜೊತೆಗೆ ಇದು ಪರಿಸರ ಸ್ನೇಹಿಯಾಗಿದೆ.


ನವೀಕರಿಸಬಹುದಾದ ಇಂಧನ, ಸೌರಶಕ್ತಿ, ಪವನಶಕ್ತಿ ಮೂಲಕ ವಿದ್ಯುತ್ ಉತ್ಪಾದನೆಗೆ ಜಗತ್ತಿನ ಬಹುತೇಕ ರಾಷ್ಟ್ರ ಗಳು ಮಹತ್ವ ನೀಡುತ್ತಿವೆ. ಸೌರಶಕ್ತಿ ಯಿಂದ ಮನೆ ಬಳಕೆ, ಕೃಷಿ ಚಟುವಟಿಕೆಗೆ ವಿದ್ಯುತ್ ಬಳಸಬಹುದು. ಹೊಂಗೆ, ಬೇವಿನ ಬೀಜದಿಂದ ಇಂಧನ ತಯಾರಿಸಬಹುದು. ನವೀಕರಿಸಬಹು ದಾದ ಇಂಧನ ಮೂಲಗಳ ಬಗ್ಗೆ ಗ್ರಾಮೀಣ ಮಟ್ಟದಿಂದ ಮಹಾನಗರಗಳವರೆಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ.

 

ರಾಜ್ಯ ಬಿಜೆಪಿಗೆ ಬಿಸಿ ತುಪ್ಪದ ಅನುಭವ

ವಿಧಾನಸಭಾ ಚುನಾವಣೆಯಲ್ಲಿ ಅವಕಾಶ ಕೈಚಲ್ಲಿ ಲೊಕಸಭಾ ಚುನಾವಣೆ ಎದುರು ನೋಡುತ್ತಿರುವ ಬಿಜೆಪಿಗೆ ಇದೀಗ ಬೆಂಗಳೂರು ನಾಯಕತ್ವದಲ್ಲಿ ಕಾಣಿಸಿಕೊಂಡಿರುವ ಬಿರುಕು ಲೋಕಸಭೆ ಚುನಾವಣೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸುಳಿವು ನೀಡಿರುವುದು ಬೊಜೆಪಿಯಲ್ಲಿ ಮತ್ತೆ ತಲ್ಲಣಕ್ಕೆಕಾರಣವಾಗಿದೆ ಎನ್ನಬಹುದು.


ಬೆಂಗಳೂರು ನಾಯಕತ್ವ ವಿಚಾರದಲ್ಲಿ ಇದೀಗ ಮಾಜಿ ಮುಖ್ಯಮಂತ್ರಿ ಆರ್.ಅಶೋಕ್ ವಿರುದ್ಧ ಅಪಸ್ವರ ಕೇಳಿ ಬಂದಿದ್ದು, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕೂಡ ಇದಕ್ಕೆ ದನಿಗೂಡಿಸಿದ್ದಾರೆ. ಇದರಿಂದಾಗಿ ಬಿಬಿಎಂಪಿ ಚುಕ್ಕಾಣಿ ಹಿಡಿಯುವ ಅವಕಾಶವಿದ್ದರೂ ಬಿಜೆಪಿ ಕೈಚಲ್ಲಿ ಇದೀಗ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.


ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನ ಪಡೆದ ದಿನದಿಂದಲೂ ಬಿಬಿಎಂಪಿ ಮೇಲೆ ಹಿಡಿತ ಸಾಧಿಸಿದ್ದ ಅಶೋಕ್, 2010 ರಲ್ಲಿ ಪಕ್ಷ ಚುಕ್ಕಾಣಿ ಹಿಡಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ, 2015 ರಲ್ಲಿ ಅತಿದೊಡ್ಡ ಪಕ್ಷವಾದರೂ ಅಧಿಕಾರ ಹಿಡಿಯುವಲ್ಲಿ ವಿಫಲರಾಗಿದ್ದರು. ಎಲ್ಲ ಸಾಧ್ಯತೆ ಇದ್ದರೂ ನಿರ್ಲಕ್ಷ್ಯದಿಂದ ಅಂದು ಅಧಿಕಾರದಿಂದ ದೂರ ಉಳಿಯಬೇಕಾಯಿತು. ಅಂದಿನಿಂದ ನಿಧಾನಕ್ಕೆ ಬಿಬಿಎಂಪಿಯಲ್ಲಿ ಅಶೋಕ್ ಪ್ರಭಾವ ಕಡಿಮೆಯಾಗುತ್ತಲೇ ಬಂದಿದ್ದು, ವಿಧಾನಸಭಾ ಚುನಾವಣೆಯಲ್ಲಿಯೂ ಅದು ಸ್ಪಷ್ಟವಾಗುತ್ತಿದ್ದಂತೆ ಅಶೋಕ್ ವಿರುದ್ಧ ಅಸಮಾಧಾನ ಮೂಡಿದೆ ಎಂಬುದು ಈಗಿನ ರಾಜಕೀಯ ಬೆಳವಣಿಗೆ ಎನ್ನಬಹುದು.


ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಕ್ಷೇತ್ರದಲ್ಲೂ ಬಿಜೆಪಿ ಸೋತಿದೆ. ಚುನಾವಣಾ ನಾಯಕತ್ವ ವಹಿಸಿದ್ದ ಅಶೋಕ್ ಅವರ ಹೊಂದಾಣಿಕೆ ರಾಜಕಾರಣವೇ ಇದಕ್ಕೆ ಕಾರಣ ಎಂದು ಸದಾನಂದಗೌಡ ಪಕ್ಷದ ವೇದಿಕೆಯಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದು, ಅಶೋಕ್ ವಿರುದ್ಧ ತಿರುಗಿಬಿದ್ದಿದ್ದಾರೆ. ಇದರಿಂದಾಗಿಯೇ ಬಿಬಿಎಂಪಿ ಮೇಯರ್ ಆಯ್ಕೆಯ ಮತದಾನದ ವೇಳೆ ಮತದಾನ ಬಹಿಷ್ಕರಿಸಿ ಹೊರ ನಡೆಯುವ ಮೂಲಕ ಅಧಿಕಾರ ಪಡೆಯುವ ಅವಕಾಶವಿದ್ದರೂ ಕೈಚಲ್ಲಿ ಕುಳಿತುಕೊಳ್ಳುವಂತಾಗಿದೆ. ಅಶೋಕ್ ಮೇಲಿನ ಮುನಿಸಿನಿಂದಾಗಿಯೇ ಸದಾನಂದಗೌಡ ಈ ನಡೆ ಇರಿಸಿ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಅಶೋಕ್ರನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿರುವುದು ಬಿಜೆಪಿಯಲ್ಲಿ ತುಸು ಅಸಮಾಧಾನದ ಹೊಗೆ ಏಳಲು ಕಾರಣವಾಗಿದೆ ಎನ್ನಬಹುದು.


ಇದಕ್ಕೆ ವ್ಯತಿರಿಕ್ತವಾಗಿ ಸದಾನಂದಗೌಡ ವಿರುದ್ಧವೇ ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರ ಪಡೆಯುವ ಸನಿಹದಲ್ಲಿ ವಾಕ್ ಔಟ್ ಮಾಡುವ ಮೂಲಕ ಪಕ್ಷವನ್ನು ಅಧಿಕಾರದಿಂದ ದೂರ ಉಳಿಯುವಂತೆ ಮಾಡಿದರು. ಆದರೆ, ಇದಕ್ಕೆಲ್ಲಾ ನಾನೇ ಕಾರಣ ಎಂದು ನನ್ನನ್ನೇ ಖಳನಂತೆ ಬಿಂಬಿಸುತ್ತಿದ್ದಾರೆ ಎಂದು ಆಪ್ತರ ಬಳಿ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಇದು ಪಕ್ಷದ ನಾಯಕತ್ವಕ್ಕೆ ಬಿಸಿ ತುಪ್ಪದ ಅನುಭವವಾಗುತ್ತಿರುವುದು ನಿಜ.


ಈ ನಡುವೆ ಬಿಬಿಎಂಪಿ ಅಧಿಕಾರ ಪಡೆಯುವ ಅವಕಾಶ ಕೈಚಲ್ಲಿದ ಕುರಿತಾಗಿ ಹೈಕಮಾಂಡ್ ವರದಿ ಕೇಳಿದೆ. ಸವಿಸ್ತಾರವಾದ ವರದಿಯನ್ನು ಸಿದ್ಧಪಡಿಸಿ ಯಡಿಯೂರಪ್ಪ ಅವರ ಕೈಗೆ ಅಶೋಕ್ ಸಲ್ಲಿಕೆ ಮಾಡಬೇಕಿದ್ದು, ಪಕ್ಷದ ಉಸ್ತುವಾರಿ ಮೂಲಕ ದೆಹಲಿಗೆ ವರದಿ ರವಾನಿಸಲಾಗುತ್ತದೆ. ವರದಿಯಲ್ಲಿ ಸದಾನಂದಗೌಡರ ಬಗ್ಗೆ ವಿಶೇಷ ಉಲ್ಲೇಖ ಇರಲಿದ್ದು, ಬೆಂಗಳೂರಿನಲ್ಲಿ ಹಿಡಿತ ಕಳೆದುಕೊಂಡಿಲ್ಲ ಎನ್ನುವುದನ್ನು ಪುಷ್ಠೀಕರಿಸುವ ರೀತಿ ಮಾಹಿತಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.


ಬೆಂಗಳೂರಿನಲ್ಲಿ ಬಿಜೆಪಿ ಮಟ್ಟಿಗೆ ಅಶೋಕ್ ನಾಯಕರಾಗಿದ್ದಾರೆ. ನಾಯಕತ್ವ ವಹಿಸಿಕೊಳ್ಳುವ ಮತ್ತೊಬ್ಬರು ಸದ್ಯ ಇಲ್ಲ. ಎಸ್.ಆರ್ವಿಶ್ವನಾಥ್, ಪಿ.ಸಿ.ಮೋಹನ್ ಹೆಸರು ಕೇಳಿ ಬಂದರೂ ಅವರೆಲ್ಲಾ ಅಶೋಕ್‍ಗೆ ಪರ್ಯಾಯ ಆಗಲು ಸಾಧ್ಯವಿಲ್ಲ. ಅವರೆಲ್ಲಾ ಅವರ ಕ್ಷೇತ್ರಕ್ಕೆ ಸೀಮಿತ. ಅಲ್ಲದೇ ಒಕ್ಕಲಿಗರ ಪ್ರಾಬಲ್ಯ ಇರುವ ಬೆಂಗಳೂರಿನಲ್ಲಿ ಒಕ್ಕಲಿಗರ ಸಮುದಾಯದ ವ್ಯಕ್ತಿಯೇ ನಾಯಕ. ಆದರೆ, ಉತ್ತಮ ಎನ್ನುವ ಕಾರಣಕ್ಕಾಗಿ ಅಶೋಕ್ಗೆ ಪರ್ಯಾಯ ಹುಡುಕಾಟ ಬಿಜೆಪಿಗೆ ಕಷ್ಟವಾಗಿದೆ.


ಸದಾನಂದಗೌಡ ನೇರವಾಗಿಯೇ ಅಶೋಕ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರೆ, ಸುರೇಶ್ ಕುಮಾರ್, ಅರವಿಂದ ಲಿಂಬಾವಳಿ ಕೂಡ ತಮ್ಮನ್ನು ಯಾವುದಕ್ಕೂ ಪರಿಗಣಿಸದೇ ಅಶೋಕ್ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಎನ್ನುವ ಅಸಮಾಧಾನ ಹೊರಹಾಕಿದ್ದಾರೆ. ಅಶೋಕ್ ವಿರುದ್ಧ ಅಸಮಾಧಾನ, ಪರ್ಯಾಯ ನಾಯಕತ್ವದ ಕೊರತೆ ಲೋಕಸಭಾ ಚುನಾವಣಾ ವೇಳೆ ಬಿಜೆಪಿಗೆ ಹೊಸ ಸಂಕಷ್ಟ ತಂದಿದೆ.

ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಸಂಸದರಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ ಅನಂತ್ ಕುಮಾರ್, ಉತ್ತರದಲ್ಲಿ ಸದಾನಂದಗೌಡ, ಕೇಂದ್ರದಲ್ಲಿ ಪಿ.ಸಿ.ಮೋಹನ್ ಇದ್ದಾರೆ. ಆದರೆ, ಈಗಾಗಲೇ ಉತ್ತರದಲ್ಲಿ ಬಿಜೆಪಿ ಬಲ ಕಳೆದುಕೊಂಡಿರುವುದು ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟವಾಗಿದೆ. ಅನಂತ್ ಕುಮಾರ್ ಅನಾರೋಗ್ಯ ದಕ್ಷಿಣದಲ್ಲಿ ಪಕ್ಷದ ಮೇಲೆ ಪ್ರಭಾವ ಬೀರಲಿದೆ. ಕೇಂದ್ರದಲ್ಲೂ ವರ್ಚಸ್ಸು ಇಳಿಮುಖವಾಗಿದೆ. ಇವುಗಳ ನಡುವೆ ಪಕ್ಷದ ನಾಯಕತ್ವದಲ್ಲೇ ಅಪಸ್ವರ ಎದ್ದಿರುವುದರಿಂದಾಗಿ ಮೂರು ಸ್ಥಾನಗಳನ್ನು ಉಳಿಸಿಕೊಳ್ಳುವುದು ಕಷ್ಟಸಾಧ್ಯ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

 

 

ಫಾರ್ಮಸಿ: ಒಂದು ಚಿಂತನೆ

ಆಧುನಿಕತೆ ಮೈತೆರೆದುಕೊಳ್ಳುತ್ತಿರುವಂತೆ ಹೊಸ ಹೊಸ ಸೌಲಭ್ಯಗಳೂ ಬರುತ್ತವೆ. ತಾಂತ್ರಿಕತೆಗಳು ನಮಗೆ ಅನುಕೂಲಕರವಾಗಿದ್ದಾಗ ಸಹಜವಾಗೇ ಅವನ್ನು ನಾವು ಒಪ್ಪಿಕೊಳ್ಳುತ್ತೇವೆ. ಬಯಸುತ್ತೇವೆ. ಆಧುನಿಕತೆಯಿಂದ ಆವಿಷ್ಕಾರಗಳಿಂದ ಬದುಕು ಸರಳವಾಗುತ್ತ ಹೋಗುತ್ತದೆ. ಅದು ಸಹಜವಾಗೇ ಎಲ್ಲರಿಗೂ ಇಷ್ಟವಾಗುತ್ತದೆ. ಅದು ಕೆಲವರ ಪಾಲಿಗೆ ಕಹಿಯಾಗುತ್ತದೆ.


ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುವ ಆಟೋಗಳ ಜಾಗದಲ್ಲಿ ಓಲಾ, ಊಬರ್ ಸಂಸ್ಥೆಗಳು ತಮ್ಮ ಸೇವೆ ಆರಂಭಿಸಿದಾಗ ಆಟೋ ಚಾಲಕರಿಂದ ಅನೇಕ ಕಡೆ ಪ್ರತಿಭಟನೆ ನಡೆಯಿತು.ಕೆಲವು ಕಡೆ ಓಲಾ ಊಬರ್ ಚಾಲಕರಿಗೆ ಬೆದರಿಕೆಗಳು ಬಂದುದೂ ಇದೆ. ಆದರೆ ಆಟೋಗಳವರೂ ತಮ್ಮ ಸೇವೆಯನ್ನೂ ಓಲಾ ಊಬರಗಳಿಗಿಂತ ಚೆನ್ನಾಗಿ ಕೊಡುವುದರ ಕಡೆ ಗಮನ ಹರಿಸಿದರೆ ಗ್ರಾಹಕರು ಆಟೋಗಳನ್ನೇ ಬಯಸುತ್ತಾರೆ ಎಂಬುದನ್ನು ನೆನಪಿಡಬೇಕು.
ಇದೇ ಮಾದರಿಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲೂ ಹಲವಾರು ಸೇವೆಗಳು ಮನೆ ಬಾಗಿಲಿಗೆ ಸಿಗುತ್ತಿವೆ. ಔಷಧಗಳನ್ನೂ ಮನೆ ಬಾಗಿಲಿಗೆ ತಲುಪಿಸುವ ಸೇವೆ ಶುರುವಾಗಿದೆ. ಅನ್ಲೈನ ಮೂಲಕವೂ ವೈದ್ಯಕೀಯ ಸೇವೆ ಲಭ್ಯವಾಗುತ್ತಿದೆ. ಆದರೆ ಇದಕ್ಕೆ ಮೆಡಿಕಲ್ ಸ್ಟೋರ್ ಗಳಿಂದ ವಿರೋಧ ವ್ಯಕ್ತವಾಗುತ್ತಿರುವುದು ಮಾತ್ರ ವಿಚಿತ್ರ.


ಇ ಫಾರ್ಮಸಿಗೆ ಅನುಮತಿ ನೀಡಲು ಹೊರಟಿರುವ ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಇದೇ 28ರ ಶುಕ್ರವಾರದಂದು ಆಲ್ ಇಂಡಿಯಾ ಆರ್ಗನೈಜೇಷನ್ ಆಫ್ ಕೆಮಿಸ್ಟ್ಸ ಆ್ಯಂಡ್ ಡ್ರಗ್ಗಿಸ್ಟ್ಸ ಮೆಡಿಕಲ್ಸ್ ಬಂದ್ಗೆ ಕರೆ ನೀಡಿದೆ. ಬಂದ್ಗೆ ಕರೆ ನೀಡಿದ್ದು ಅಂದು ದೇಶಾದ್ಯಂತ ಮೆಡಿಕಲ್ ಶಾಪ್ಗಳು ಬಂದ್ ಆಗೋದಾಗಿ ಹೇಳಲಾಗಿತ್ತು. ಆದ್ರೆ ಈಗ ಬಂದ್ ಕುರಿತು ಅಸೋಸಿಯೇಷನ್ಗಳಲ್ಲೇ ಭಿನ್ನಾಭಿಪಾಯ್ರವಿದ್ದು ಕೆಲ ಅಸೋಸಿಯೇಷನ್ಗಳು ಬಂದ್ನಿಂದ ಹಿಂದೆ ಸರಿದಿವೆ. ಯಾಕೆಂದರೆ ಅವರು ಆಧುನಿಕತೆಯನ್ನು ಒಪ್ಪಿಕೊಂಡವರು.ತಾವೂ ಆ ದಿಸೆಯಲ್ಲಿ ಬದಲಾಗಲು ಸಿದ್ಧರಾದವರು.


ಇ ಫಾರ್ಮಸಿ ಇಂದಾಗಿ ಅನಾನುಕೂಲತೆಗಳೇ ಹೆಚ್ಚಿದ್ದು ಫಾರ್ಮಸಿ ಆ್ಯಕ್ಟ್ನಲ್ಲಿ ಇಲ್ಲದ ರೂಲ್ಸ್ಗಳನ್ನು ಜಾರಿಗೆ ತರಲು ಯೋಚಿಸಲಾಗಿದೆ. ಆನ್ಲೈನ್ನಲ್ಲಿ ಮೆಡಿಸಿನ್ ಕೊಡುವುದು ಅಪಾಯಕಾರಿಯಾಗಿದ್ದು, ಇದ್ರಿಂದ ಅಪಾಯಗಳಾಗೋ ಸಾಧ್ಯತೆಗಳು ಹೆಚ್ಚಿವೆ. ಜೊತೆಗೆ ಈ ಪದ್ಧತಿ ಅವೈಜ್ಞಾನಿಕ ವಾಗಿದ್ದು, ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಇ ಫಾರ್ಮಸಿಗೆ ಅನುಮತಿ ನೀಡಬಾರದೆಂದು ಒತ್ತಾಯಿಸಲಾಗುತ್ತಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಕೇಂದ್ರದ ಗಮನ ಸೆಳೆಯುವ ಉದ್ದೇಶದಿಂದ ಶುಕ್ರವಾರ ಬೆಳಗ್ಗೆಯಿಂದ ರಾತ್ರಿ 12 ರವರೆಗೆ ಬಂದ್ ಇರಲಿದ್ದು, ನರ್ಸಿಂಗ್ ಹೋಂ ಆಸ್ಪತ್ರೆಗಳಲ್ಲಿರುವ ಶಾಪ್ ಹೊರತುಪಡಿಸಿ ಉಳಿದವು ಬಂದ್ ಆಗಲಿವೆ ಎಂದು ಕೆಸಿಡಿಎ ಅಧ್ಯಕ್ಷ ರಘುನಾಥ್ ತಿಳಿಸಿರುವುದರಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಕುಟುಂಬದವರ ಆತಂಕಕ್ಕೆ ಕಾರಣವಾಗಿರುವುದು ಸಹಜವೇ ಆಗಿದೆ. ಜೊತೆಗೆ ಒಂದು ಸಂಘಟನೆ ಬಂದ್ ಗೆ ಬೆಂಬಲ ನೀಡದಿದ್ದರೂ, ಅದರಿಂದ ದೊಡ್ಡ ಪ್ರಭಾವ ಬೀರುವುದಿಲ್ಲ. ದೇಶಾದ್ಯಂತ ಕರೆಕೊಟ್ಟಿರುವ ಮೆಡಿಕಲ್ಸ್ ಬಂದ್ ಸಂಚಲನೆಗೆ ಕಾರಣವಾಗುತ್ತದೆ. .


ಎಐಒಸಿಡಿ ಬಂದ್ಗೆ ಬೆಂಬಲ ಕೊಟ್ರೆ ಇತ್ತ ಸುವರ್ಣ ಕರ್ನಾಟಕ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್ ಬಂದ್ಗೆ ವಿರೋಧ ವ್ಯಕ್ತಪಡಿಸಿದೆ. ಇ ಫಾರ್ಮಸಿ ಬೇಡ ಎಂದು ಈಗಾಗ್ಲೇ ರಾಷ್ಟ್ರಪತಿ, ಪ್ರಧಾನಿ ಅವರಿಗೆ ಮನವಿ ಮಾಡಲಾಗಿದ್ದು ಸರ್ಕಾರ ಇದನ್ನು ಹಿಂಪಡೆಯುವ ವಿಶ್ವಾಸವಿದೆ. ಆದ್ರೆ ಸರ್ಕಾರಕ್ಕೆ ಕಾಲಾವಕಾಶ ಕೊಡದೇ ಬಂದ್ ಮಾಡಿದ್ರೆ ರೋಗಿಗಳಿಗೆ ತೊಂದರೆಯಾಗಲಿದೆ. ಹೀಗಾಗಿ 28 ರಂದು ನಡೆಯುವ ಬಂದ್ಗೆ ಬೆಂಬಲಿವಿಲ್ಲ ಎಂದು ಸ್ಪಷ್ಟಪಡಿಸಿರುವುದು ಸರಿಯಾದ ನಿರ್ಧಾರವಾಗಿದೆ. ಒಂದು ವೇಳೆ ಕೇಂದ್ರ ಸರ್ಕಾರ ಹಿಂದೆ ಸರಿಯದಿದ್ದಲ್ಲಿ ಮುಂದೆ ಕಾನೂನು ಹೋರಾಟ ನಡೆಸುವುದಾಗಿ ಅಸೋಸಿಯೇಷನ್ನ ಜಂಟಿ ಕಾರ್ಯದರ್ಶಿ ಮೇದಪ್ಪ ತಿಳಿಸಿರುವುದು ಸರಕಾರಕ್ಕೂ ಸಮಯಾವಕಾಶ ಕೊಟ್ಟಂತಾಗಿದೆ.ಸರಕಾರ ಈ ಕುರಿತು ಗಂಭೀರ ಚಿಂತನೆ ನಡೆಸಲೇಬೇಕಾಗಿದೆ.

ಹಸಿರು ಕ್ರಾಂತಿ ಪತ್ರಿಕೆಯ ಸಂಪಾದಕಿಯದಲ್ಲಿ ಸಂಪಾದಕರು ಇ- ಫಾರ್ಮಸಿ, ಇಂಧನ ಸಂರಕ್ಷಣೆ ಜಾಗೃತಿ ಮತ್ತು ರಾಜ್ಯ ಬಿಜೆಪಿ ಅಂದಿನ ಇಕ್ಕಟ್ಟಿನ ಸ್ಥಿತಿಯ ಬಗ್ಗೆ ತಮ್ಮ ಬರಹಗಳನ್ನು ಪತ್ರಿಕೆಯ ಓದುಗರಿಗೆ ನೀಡಿರುವುದು. ಇದು ಅಕ್ಟೋಬರ್ 2018 ರ ರಾಜ್ಯದ ದೇಶದ ಅವಶ್ಯಕತೆ, ಸ್ಥಿತಿಗತಿಗಳ ಬಗ್ಗೆ ಚಿಂತನೆಗೆ ಹಚ್ಚುವ ಲೇಖನಗಳಾಗಿವೆ.