ಅಮ್ಮನನ್ನು ಹಂಚಿಕೊಳ್ಳಲಾದೀತೆ?

ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬೇಡಿಕೆ ಕುರಿತು ಹೋರಾಟಗಾರರ ಅಭಿಪ್ರಾಯ ಜನಾಕ್ರೋಶವಾಗದಂತೆ ತಡೆಯಲು ಮೈತ್ರಿ ಸರ್ಕಾರ ಮುಂದಾಗಿದೆ. ಅಂತೆಯೇ ಸಮ್ಮಿಶ್ರ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ ಎಂದು ಹೇಳಲಾಗುತ್ತಿದೆ. ಉತ್ತರ ಕರ್ನಾಟಕ ಪ್ರತ್ಯೇಕ ಬೇಡಿಕೆ ಮಂಡಿಸಿ ಒಂದೆರಡು ಸಂಘಟನೆಗಳು ನೀಡಿದ್ದ ಉತ್ತರ ಕರ್ನಾಟಕ ಬಂದ್ ಕರೆ ಹಿಂದೆ ಪಡೆದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಂದಿನಂತೆ ಸಾಮಾನ್ಯ ಸ್ಥಿತಿ ಇತ್ತು ಎಂಬುದು ಜನರ ಅಭಿಪ್ರಾಯ ಸೂಚಿಸುತ್ತದೆ. ಜನ ಬೆಂಬಲ ವಿಲ್ಲದಿದ್ದರೆ ಯಾವ ಹೋರಾಟಗಳೂ ಯಶಸ್ವಿ ಯಾಗುವುದಿಲ್ಲ ಎನ್ನುವುದಕ್ಕೆ ಇದೇ ದೊಡ್ಡ ಸಾಕ್ಷಿ.


ಹೋರಾಟಗಾರರ ಪರ ಬಿಜೆಪಿ ನಿಂತಿರುವ ಬೆನ್ನಲ್ಲೇ ಸರ್ಕಾರ ಕೂಡ ಜನರ ಜೊತೆ ಇದೆ ಎನ್ನುವ ಸಂದೇಶ ನೀಡಲು ಹೊರಟಿದೆ. ಅದಕ್ಕಾಗಿ ಉತ್ತರ ಕರ್ನಾಟಕ ಸಮಸ್ಯೆ ಅರಿಯಲು ತಜ್ಞರ ಸಮಿತಿ ರಚಿಸುವ ಸಾಧ್ಯತೆ ಇದೆ. ಗುರುವಾರ ನಡೆಯುತ್ತಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಗಂಭೀರ ಚರ್ಚೆ ನಡೆಯುತ್ತಿದೆ ಎಂದು ಸರ್ಕಾರದ ಆಪ್ತ ಮೂಲಗಳಿಂದ ತಿಳಿದು ಬಂದಿರುವುದರಿಂದ ಇನ್ನಾದರೂ ಉತ್ತರ ಕರ್ನಾಟಕ ಜನರ ತುಮುಲಗಳಿಗೆ ಪರಿಹಾರ ಕಂಡು ಹಿಡಿಯುವ ನಡೆಯಲಿದೆ ಎಂಬುದೇ ಸಮಾಧಾನಕರ ಸಂಗತಿ.


ತಜ್ಞರ ಸಮಿತಿಯ ಮೂಲಕ ಅಭಿವೃದ್ಧಿ ಕುರಿತು ಸಮಗ್ರ ಅಧ್ಯಯನಕ್ಕೆ ತೀರ್ಮಾನಿಸುವ ಸಾಧ್ಯತೆ ಇದ್ದು, ಹೋರಾಟವನ್ನು ಕಡಿಮೆ ಮಾಡುವ ತಂತ್ರ ಅನುಸರಿಸಲು ಸರ್ಕಾರ ಹೊರಟಿರುವುದು ಉತ್ತಮ ಪ್ರಯತ್ನ ಎನ್ನಬಹುದು.


ಬೆಳಗಾವಿಯನ್ನು ಎರಡನೇಯ ರಾಜಧಾನಿಯನ್ನಾಗಿ ಮಾಡುವ ಬಗ್ಗೆಯೂ ಅಧ್ಯಯನ ನಡೆಸಲಿದ್ದು, ಪ್ರಮುಖ ನಿಗಮ ಮಂಡಳಿಗಳನ್ನು ಬೆಳಗಾವಿಯ ಸುವರ್ಣಸೌಧಕ್ಕೆ ವರ್ಗಾಯಿಸುವ ಲೆಕ್ಕಾಚಾರದಲ್ಲಿ ಸರ್ಕಾರ ಇದೆ. ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನವನ್ನು ನೀಡುವ ಬಗ್ಗೆಯೂ ತಜ್ಞರ ಸಮಿತಿಯಿಂದ ಅಧ್ಯಯನ ನಡೆಸಲಿದೆ ಎಂದು ತಿಳಿದುಬಂದಿದೆ. ಆದರೆ ಈವರೆಗೆ ಉತ್ತರ ಕರ್ನಾಟಕದ ಕೇಂದ್ರ ಬಿಂದು ಹುಬ್ಬಳ್ಳಿ ಯಲ್ಲಿ ನಿಗಮ ಮಂಡಳಿಗಳ ಕಚೇರಿ ಇದ್ದರೂ ಸಾಧಿಸಿದ್ದೇನು? ಕೈಮಗ್ಗ ನಿಗಮದ ಕಚೇರಿ ಹುಬ್ಬಳ್ಳಿಯಲ್ಲೇ ಇದ್ದರೂ ಜನಕ್ಕೆ ಅದರ ಅಧ್ಯಕ್ಷರು ಯಾರು, ಎಂಡಿ ಯಾರು ಎಂಬುದೇ ಗೊತ್ತಿಲ್ಲದಂತೆ ಅವರಿದ್ದರು. ಆರಂಭದಲ್ಲೊಂದು ಪತ್ರಿಕಾ ಗೋಷ್ಠಿ ಮತ್ತು ಒಂದು ಕಾರ್ಯಕ್ರಮ ಬಿಟ್ಟರೆ ಕೈಮಗ್ಗ ನೇಕಾರರಿಗೆ ಹತ್ತು ಪೈಸೆ ಉಪಯೋಗ ಆಗಿಲ್ಲ.


ಪ್ರತ್ಯೇಕ ರಾಜ್ಯ ರಚನೆ ಬೇಡಿಕೆಗೆ ಸಂಬಂಧಪಟ್ಟಂತೆ ಉತ್ತರ ಕರ್ನಾಟಕದ ಜನರಲ್ಲಿಯೇ ಭಿನ್ನಾಭಿಪ್ರಾಯ ಉಂಟಾಗಿದೆ. ಹುಬ್ಬಳ್ಳಿ ಅಥವಾ ಬೆಳಗಾವಿಯನ್ನು ರಾಜಧಾನಿ ಮಾಡಿ ಪ್ರತ್ಯೇಕ ರಾಜ್ಯ ರಚನೆ ಮಾಡಿದರೆ ಮಾತ್ರ ಉತ್ತರ ಕರ್ನಾಟಕ ಜಿಲ್ಲೆಗಳ ಅಭಿವೃದ್ಧಿ ಯಾಗಬಹುದೆಂದು ಯುವ ಜನತೆಯ ವಾದವಾದರೆ ಹಲವರು ಅದನ್ನು ಒಪ್ಪುವುದಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿಯವರ ಇತ್ತೀಚಿನ ಹೇಳಿಕೆ ಪ್ರತ್ಯೇಕ ರಾಜ್ಯ ರಚನೆಯ ಬೇಡಿಕೆಗೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.


ಗುರುವಾರ ನಡೆಯ ಬೇಕಿದ್ದ ಬಂದ್ ಗೆ ಕೆಲವರು ಬೆಂಬಲ ನೀಡುವುದರಿಂದ ಹಿಂದೆ ಸರಿದಿದ್ದಾರೆ. ಇದುವರೆಗೆ ಬಂದಿರುವ ಎಲ್ಲಾ ಸರ್ಕಾರಗಳು ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿವೆ. ಪ್ರತ್ಯೇಕ ರಾಜ್ಯ ರಚನೆ ಮಾಡಿದರೆ ಪ್ರದೇಶಗಳ ಅಭಿವೃದ್ಧಿ ದೃಷ್ಟಿಯಿಂದ ಮುಖ್ಯವಾಗಿದ್ದು ರಾಜಧಾನಿ ಹತ್ತಿರವಾಗುತ್ತದೆ. ಪ್ರತ್ಯೇಕ ರಾಜ್ಯ ರಚನೆಯಾದರೆ ಅದಕ್ಕೆ ಪ್ರತ್ಯೇಕ ಬಜೆಟ್ ಮತ್ತು ಸ್ಥಳೀಯ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬುದು ಕೆಲವರ ವಾದ. ಆದರೆ ಅಷ್ಟೇ ಪ್ರಮಾಣದಲ್ಲಿ ಸಂಪನ್ಮೂಲಗಳ ಕೊರತೆಯೂ ಆಗುತ್ತದೆ ಎಂಬುದೂ ಗಮನಾರ್ಹ.


ಉತ್ತರ ಕರ್ನಾಟಕದಲ್ಲಿ ನೈಸರ್ಗಿಕ ಸಂಪನ್ಮೂಲಗಳು ಹೇರಳವಾಗಿವೆ. ಇಲ್ಲಿನ ನದಿಗಳು, ಗಣಿ, ಥರ್ಮಲ್ ವಿದ್ಯುತ್, ಗಾಳಿಮಿಲ್ ಗಳು ಪ್ರಮುಖವಾಗಿವೆ. ಹಿಂದಿನ ಮತ್ತು ಇಂದಿನ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಪ್ರದೇಶಗಳ ಅಭಿವೃದ್ಧಿಯಾಗಿಲ್ಲ. ಇದೀಗ ಪ್ರತ್ಯೇಕ ರಾಜ್ಯ ರಚನೆ ಮಾಡುವ ಸಮಯ ಬಂದಿದೆ ಎನ್ನುತ್ತಾರೆ ಯುವಜನರು.


ಇಲ್ಲಿನ ಉದ್ಯಮಗಳು ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ನ ಮಾಜಿ ಅಧ್ಯಕ್ಷ ರಮೇಶ್ ಪಾಟೀಲ್ ಹೇಳಿಕೆಯಲ್ಲಿ ನೋವಿದೆ. ಪ್ರತಿ ಕೆಲಸಕ್ಕೆ ನಾವು ಬೆಂಗಳೂರಿಗೆ ಹೋಗಬೇಕು. ಇಲ್ಲಿನ ಸ್ಥಳೀಯ ಪ್ರತಿಭೆಗಳು ಬೆಂಗಳೂರಿಗೆ ಉದ್ಯೋಗಕ್ಕೆ ಪಲಾಯನ ಮಾಡುತ್ತಾರೆ. ಪ್ರತ್ಯೇಕ ರಾಜ್ಯ ರಚನೆಯಾದರೆ ಇಡೀ ಪರಿಸ್ಥಿತಿ ಬದಲಾಗುತ್ತದೆ. ರಾಜ್ಯದಲ್ಲಿಯೇ ಹುಬ್ಬಳ್ಳಿಯಲ್ಲಿ ಆದಾಯ ಬರುವ ಜಿಲ್ಲೆಗಳಲ್ಲಿ ಎರಡನೇ ಸ್ಥಾನದಲ್ಲಿದೆ ಎಂಬ ಮಾತನ್ನು ತಳ್ಳಿಗಾಕಲಾಗದು.


ಆದರೆ ಸಿಪಿಐ ಮತ್ತು ಇತರ ಕಾರ್ಮಿಕ ಸಂಘಟನೆಗಳು ಪ್ರತ್ಯೇಕ ರಾಜ್ಯ ರಚನೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ರಾಜಕೀಯ ನಾಯಕರು ಈ ಜಿಲ್ಲೆಗಳ ಅಭಿವೃದ್ಧಿಗೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅವರ ವೈಫಲ್ಯವನ್ನು ಮುಚ್ಚಿಹಾಕಲು ಇಂತಹ ಭಾವನಾತ್ಮಕ ವಿಷಯಗಳ ಬಗ್ಗೆ ಮಾತನಾಡುತ್ತಾರೆ ಮತ್ತು ಪ್ರತಿಭಟನೆ ಮಾಡುತ್ತಾರೆ. ಸರ್ಕಾರ ಇಡೀ ರಾಜ್ಯದ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಬೇಕು. ಆಯಾ ಪ್ರದೇಶಗಳ ಅಭಿವೃದ್ಧಿಗೆ ಜನ ನಾಯಕರು ಹೋರಾಡುವುದು ಬಿಟ್ಟು ಪ್ರತ್ಯೇಕ ರಾಜ್ಯ ಬೇಕೆಂದು ಕೇಳುವುದು ಮೂರ್ಖತನ ಎಂಬ ವಾದಗಳೂ ಇವೆ . ಕನ್ನಡಿಗರಿಗೆಲ್ಲ ಒಂದೇ ಸೂರು, ಅದು ಕರ್ನಾಟಕ. ಅದನ್ನೇ ಇಬ್ಭಾಗ ಮಾಡಿದರೆ ಸರಿಯೇ? ಅಮ್ಮನೊಂದಿಗೆ ಮಕ್ಕಳು ಇರಬೇಕು ಎಂಬುದೇ ನ್ಯಾಯ.ಅಮ್ಮನನ್ನು ಹಂಚಿಕೊಳ್ಳಲಾದೀತೆ? ಅಮ್ಮ ನಮ್ಮನ್ನು ಬಿಟ್ಟರೂ, ಮಕ್ಕಳೇ ಅಮ್ಮನನ್ನು ಬಿಟ್ಟರೂ ತಬ್ಬಲಿ ಯಾಗುವುದು ಮಕ್ಕಳೇ.

ಪ್ರವಾಸೋದ್ಯಮಕ್ಕೆ ಪುಷ್ಠಿ   

ಪ್ರವಾಸೋದ್ಯಮವು ಭಾರತದಲ್ಲಿ ಅತಿ ದೊಡ್ಡ ಸೇವಾ ವಲಯವಾಗಿದೆ. ಇದು ರಾಷ್ಟ್ರೀಯ ಉಆPಗೆ  ಶೇ.6.23 ಹಾಗೂ ಭಾರತದಲ್ಲಿ ಒಟ್ಟು ಉದ್ಯೋಗಕ್ಕೆ ಶೇ.8.78 ರಷ್ಟು ಕೊಡುಗೆ ನೀಡುತ್ತದೆ. ವಾರ್ಷಿಕ 5 ದಶಲಕ್ಷಕ್ಕಿಂತಲೂ ಹೆಚ್ಚು ವಿದೇಶೀ ಪ್ರವಾಸಿಗರು ಭಾರತಕ್ಕೆ ಆಗಮಿಸಿದ್ದಾರೆ. ಅಂತೆಯೇ, 562 ದಶಲಕ್ಷ ದೇಶೀಯ ಪ್ರವಾಸಿಗರು ಭೇಟಿ ನೀಡಿದ್ದಾರೆ. ಭಾರತದ ಪ್ರವಾಸೋದ್ಯಮ ಸೇವಾ ವಲಯವು 2008 ರಲ್ಲಿ ಸುಮಾರು 100 ಶತಕೋಟಿ ಅಮೇರಿಕನ್ ಡಾಲರ್ ಆದಾಯ ಗಳಿಸಿತು. ವಾರ್ಷಿಕ ಶೇ.9.4. ಅಭಿವೃದ್ಧಿ ದರದಲ್ಲಿ, 2018 ರೊಳಗೆ 275.5 ಶತಕೋಟಿ ಅಮೇರಿಕನ್ ಡಾಲರ್ ಆದಾಯ ತರುವ ಸಾಧ್ಯತೆಯಿದೆ. ಭಾರತದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ ಮತ್ತು ಉತ್ತೇಜನಕ್ಕಾಗಿ ಪ್ರವಾಸೋದ್ಯಮ ಸಚಿವಾಲಯವು ಪ್ರಮುಖ ಸಂಪರ್ಕ ಸೇತುವಾಗಿದೆ. ಇದು ’ಅದ್ಭುತ ಭಾರತ’ ಅಭಿಯಾನ ಹಮ್ಮಿಕೊಂಡಿದೆ.

ವಿಶ್ವ ಪರ್ಯಟನ ಮತ್ತು ಪ್ರವಾಸೋದ್ಯಮ ಸಮಿತಿ ಯ ಪ್ರಕಾರ, ಪರ್ಯಟನ ವಲಯದಲ್ಲಿ ಅತಿ ಹೆಚ್ಚು ಅಭಿವೃದ್ಧಿಯ ಸಾಮಥ್ರ್ಯ ಹೊಂದಿರುವ ಭಾರತ ಉಪಖಂಡಕ್ಕೆ ಮುಂದಿನ ಹತ್ತು ವರ್ಷಗಳವರೆಗೆ ಪ್ರವಾಸೋದ್ಯಮಕ್ಕೆ ಪೂರಕವಾದ ಅಗತ್ಯ ಸಾಮಥ್ರ್ಯವಿದೆ. ವಿಶ್ವದಲ್ಲೇ ಅತಿ ಜನಪ್ರಿಯ ಪ್ರವಾಸೀ ಕೇಂದ್ರ ಬಿಂದುವಾಗಿ ಹೊರಹೊಮ್ಮಲಿದೆ. 2007 ರಲ್ಲಿ ಬಿಡುಗಡೆಯಾದ ಪರ್ಯಟನ ಮತ್ತು ಪ್ರವಾಸೋದ್ಯಮ ಪೈಪೆÇೀಟಿಯ ವರದಿ ಯ ಪ್ರಕಾರ, ಭಾರತ ದರಗಳ ಸ್ಫರ್ಧೆಯಲ್ಲಿ ಆರನೆಯ ಸ್ಥಾನ ಹಾಗೂ ಸುರಕ್ಷತೆ ಹಾಗೂ ಭದ್ರತೆಯ ವಿಚಾರದಲ್ಲಿ 39ನೆಯ ಸ್ಥಾನದಲ್ಲಿದೆ. ಹೊಟೆಲ್ ಕೊಠಡಿಗಳ ಕೊರತೆ ಸೇರಿದಂತೆ ಅಲ್ಪ ಮತ್ತು ಮಧ್ಯಮಾವಧಿಯ ಹಿನ್ನಡೆಯುಂಟಾದರೂ, ಪ್ರವಾಸೋದ್ಯದ ಆದಾಯವು 2007 ರಿಂದ 2017ರ ವರೆಗಿನ ಅವಧಿಯಲ್ಲಿ ಶೇ. 42 ರಷ್ಟು ವೃದ್ಧಿ ಕಾಣಲಿದೆ.

ಭಾರತದಲ್ಲಿ ವೈದ್ಯಕೀಯ ಪ್ರವಾಸೋದ್ಯಮ ಕ್ಷೇತ್ರವು ಗಮನಾರ್ಹ ಅಭಿವೃದ್ಧಿ ಹೊಂದುತ್ತಿದೆ. 2010 ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾ ಕೂಟವು ಭಾರತದ ಪ್ರವಾಸೋದ್ಯಮಕ್ಕೆ ಗಮನಾರ್ಹ ಪೆÇ್ರೀತ್ಸಾಹ ನೀಡಿತ್ತು. ಅಂತೆಯೇ ಪ್ರವಾಸೋದ್ಯಮದ ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ ಹೋಟೆಲ್ ಉದ್ಯಮದ ಕೊಡುಗೆಯೂ ಸಾಕಷ್ಟಿದೆ.

ಕರ್ನಾಟಕದಲ್ಲಿ ಹೊಟೇಲ್ ಉದ್ಯಮದ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇದೇಕಾರಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದು ಇಲ್ಲಿ ಗಮನಾರ್ಹ. ಕರ್ನಾಟಕ ಪ್ರದೇಶ ಹೊಟೇಲ್ ಮತ್ತು ಉಪಹಾರ ಮಂದಿರಗಳ ಸಂಘದ ಪದಾಧಿಕಾರಿಗಳೊಂದಿಗೆ  ಚರ್ಚಿಸಿರುವ ಅವರು, ರಾಜ್ಯದಲ್ಲಿ ಹೊಟೇಲ್ ಉದ್ಯಮವಲ್ಲದೆ ಪ್ರವಾಸೋದ್ಯಮಕ್ಕೂ ವಿಪ ಅವಕಾಶಗಳಿವೆ.

ಸಾಂಸ್ಕೃತಿಕ ರಾಜಧಾನಿ ಎನಿಸಿರುವ ಮೈಸೂರು, ವಾಣಿಜ್ಯ ಕೇಂದ್ರವೆನಿಸಿದ ಹುಬ್ಬಳ್ಳಿ, ಕರಾವಳಿಯ ಮಂಗಳೂರು- ಉಡುಪಿ, ಮಲೆನಾಡಿನ ಶಿವಮೊಗ್ಗ, ಘಟ್ಟ ಪ್ರದೇಶವಾದ ಕೊಡಗು ಸೇರಿದಂತೆ, ಉತ್ತರ ಕರ್ನಾಟಕದ ಬೆಳಗಾವಿ ಬೀದರ್, ಕಲಬುರಗಿ ಮತ್ತಿತರ ಜಿಲ್ಲೆಗಳಲ್ಲೂ ಅನೇಕ ಪ್ರವಾಸಿ, ಐತಿಹಾಸಿಕ ಮತ್ತು ಧಾರ್ಮಿಕ ಪ್ರೇಕ್ಷಣೀಯ ಸ್ಥಳಗಳಿವೆ. ಇವುಗಳ ಅಭಿವೃದ್ಧಿಯನ್ನು ಆದ್ಯತೆ ಮೇರೆಗೆ ಕೈಗೊಳ್ಳಲು ಸೂಚನೆ ನೀಡಿರುವುದು ಮಹತ್ವದ ಹೆಜ್ಜೆ.

ಶಿವಮೊಗ್ಗವನ್ನು ಕೇಂದ್ರವಾಗಿಟ್ಟುಕೊಂಡು ಸುತ್ತಲಿನ ಉತ್ತರಕನ್ನಡ, ಉಡುಪಿ ಜಿಲ್ಲೆಗಳ ಪ್ರವಾಸಿ ತಾಣಗಳಲ್ಲಿ ಉತ್ತಮ ರಸ್ತೆ, ಪ್ರಯಾಣ ಮತ್ತು ವಸತಿಗೆ ಉತ್ತಮ ವ್ಯವಸ್ಥೆ, ಗೈಡ್ಗಳ ನೇಮಕ ಮುಂತಾದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಮತ್ತು ಸೂಕ್ತ ಮಾಹಿತಿಯನ್ನು ಪ್ರವಾಸಿಗರಿಗೆ ನೀಡುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡುವ ಅವಶ್ಯಕತೆಯೂ ಇದೆ.

ಹೊಟೇಲ್ಗಳ ಪರವಾನಗಿ ನವೀಕರಣ ಹಾಗೂ ಬೆಂಗಳೂರು ನಗರದ ವಸತಿ ಬಡಾವಣೆಗಳ ಹೊಟೇಲ್ಗಳ ಪರವಾನಗಿ ನವೀಕರಣ ಸರಳೀಕರಿಸುವ ಬಗ್ಗೆ ಮುಖ್ಯ ಮಂತ್ರಿಗಳು ತ್ವರಿತವಾಗಿ ಪರಿಶೀಲಿಸಿದಲ್ಲಿ ಪ್ರವಾಸೋದ್ಯಮಕ್ಕೆ ಪುಷ್ಠಿ ನೀಡಿದಂತಾಗುತ್ತದೆ.

ಕಲಿಕಾಮಟ್ಟ ಸುಧಾರಣೆಯತ್ತ..!

ಇದು ಅತ್ಯಾಧುನಿಕವಾದ ಮಾಹಿತಿ ತಂತ್ರಜ್ಞಾನದ ದಿನಗಳು. ಒಂದಿಲ್ಲೊಂದು ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಶ್ರೀನಗರದ ಗ್ರೀನ್ ವ್ಯಾಲಿ ಎಜುಕೇಶನ್ ಇನ್ ಸ್ಟಿಟ್ಯೂಟ್ ಬೆಂಗಳೂರು ಮೂಲದ ಟೆಕ್ ಅವಂತ್-ಗಾರ್ಡೆ ಮತ್ತು ಮೈಕ್ರೋಸಾಫ್ಟ್ ಸಂಸ್ಥೆಗಳ ಸಹಯೋಗದಲ್ಲಿ ಎಂಎಎಸ್ ಪಿ ಪಿಆರ್‍ಒ ಕಾರ್ಯಕ್ರಮವನ್ನು ಅಳವಡಿಸಿಕೊಂಡು ಭವಿಷ್ಯದ ಉತ್ತಮ ಶಿಕ್ಷಣಕ್ಕಾಗಿ ಸಿದ್ಧತೆ ಮಾಡಿಕೊಂಡಿರುವುದು ತಂತ್ರಜ್ಞಾನದ ಕೊಡುಗೆ ಎನ್ನಬಹುದು.


ಟೆಕ್ ಅವಂತ್- ಗಾರ್ಡೆ ಬೆಂಗಳೂರಿನಲ್ಲಿ ಗ್ರೀನ್ ವ್ಯಾಲಿ ಎಜುಕೇಶನ್ ಇನ್ ಸ್ಟಿಟ್ಯೂಟ್ ನ ಶಿಕ್ಷಕರಿಗೆ ಮತ್ತು ಐಟಿ ತಜ್ಞರಿಗೆ ವಿಶೇಷವಾದ ತರಬೇತಿಯನ್ನು ನೀಡಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ಸಹಕಾರಿಯಾಗುವಂತೆ ಮಾಡಿದೆ. ಭಾರತದ ಜ್ಞಾನದ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಕಾರಣ ಮತ್ತು ಹೆಚ್ಚು ಶಾಲೆಗಳು ಈ ಎಂಎಎಸ್ ಪಿ ಪಿಆರ್ ಒ ಕಾರ್ಯಕ್ರಮವನ್ನು ಅಳವಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರವನ್ನು ಈ ತರಬೇತಿ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.


ಕಾಶ್ಮೀರದ ಗ್ರೀನ್ ವ್ಯಾಲಿ ಸ್ಕೂಲ್ಗೆ ತಂತ್ರಜ್ಞಾನ ಪರಿಣಿತ ಸಂಸ್ಥೆಗಳಾಗಿರುವ ಮೈಕ್ರೋಸಾಫ್ಟ್ ಮತ್ತು ಟೆಕ್ ಅವಂತ್- ಗಾರ್ಡೆ ಕಾಶ್ಮೀರದಲ್ಲಿ ಆಗುತ್ತಿರುವ ಶೈಕ್ಷಣಿಕ ನಷ್ಟವನ್ನು ಹೋಗಲಾಡಿಸಿ ಶಿಕ್ಷಣದ ಗುಣಮಟ್ಟವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಈ ತರಬೇತಿಯನ್ನು ನೀಡುತ್ತಿವೆ ಎಂದು ಶ್ರೀನಗರದ ಗ್ರೀನ್ ವ್ಯಾಲಿ ಎಜುಕೇಶನ್ ಇನ್ ಸ್ಟಿಟ್ಯೂಟ್ ನ ಸಹ- ಮಾಲೀಕ ಮತ್ತು ಐಟಿ ಮುಖ್ಯಸ್ಥರು ತಿಳಿಸಿರುವುದನ್ನು ನಾವಿಲ್ಲಿನೆನಪಿಸಿಕೊಳ್ಳಬಹುದು.


ಮೈಕ್ರೋಸಾಫ್ಟ್ ಮತ್ತು ಟೆಕ್ ಅವಂತ್- ಗಾರ್ಡೆ ಒಟ್ಟಾಗಿ ಸೇರಿ ಶಿಕ್ಷಣ ಸಂಸ್ಥೆಗಳಿಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಅತ್ಯುತ್ತಮ ಶಿಕ್ಷಣ ನೀಡುವ ಸಂಬಂಧ ನೆರವಾಗುತ್ತಿವೆ. ಮೈಕ್ರೋಸಾಫ್ಟ್ ಆಸ್ಪೈರ್ ಸ್ಕೂಲ್ ಪೆÇ್ರೀಗ್ರಾಂ (ಎಂಎಎಸ್ ಪಿ ಪಿಆರ್ ಒ) ಶಾಲೆಗಳನ್ನು ರೂಪಾಂತರಗೊಳಿಸುವುದು ಮತ್ತು ಶಾಲಾ ಕ್ಯಾಂಪಸ್ ಗಳನ್ನು ಆಧುನಿಕ ಕಲಿಕಾ ಕೇಂದ್ರಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತ ಜನಪರ ಧೋರಣೆ ಅನುಸರಿಸುತ್ತಿರುವುದು ಶ್ಲಾಘನೀಯ.


ಈ ಎಂಎಎಸ್ ಪಿ ಪಿಆರ್ ಒ ಕಾರ್ಯಕ್ರಮ ಭೋದನೆ ಮತ್ತು ಕಲಿಕಾ ಅನುಭವವನ್ನು ಶ್ರೀಮಂತಗೊಳಿಸುತ್ತದೆ. ಅಂದರೆ, ಬೋಧನೆ ಮತ್ತು ಕಲಿಕಾ ಮಟ್ಟವನ್ನು ಸುಧಾರಣೆ ಮಾಡುತ್ತದೆ. ಅಲ್ಲದೇ, ಇಡೀ ಶಿಕ್ಷಣ ಸಂಸ್ಥೆಯ ಕ್ಯಾಂಪಸ್ ಅನ್ನು ಡಿಜಿಟಲ್ ಕ್ಯಾಂಪಸ್ ಅನ್ನಾಗಿ ರೂಪಾಂತರಗೊಳಿಸುತ್ತದೆ ಎಂಬುದು ಇಲ್ಲಿ ಮುಖ್ಯ ಅಂಶ.

 

ಮಾನವೀಯ ಅಂತಃಕರಣ ದೊಡ್ಡದು

ಪ್ರಕೃತಿಯೇ ಒಂದು ವಿಸ್ಮಯ. ನಾವು ಪ್ರಕೃತಿಯ ವಿರುದ್ಧ ನಡೆದರೆ ಅನಾಹುತ ಕಟ್ಟಿಟ್ಟ ಬುತ್ತಿ. ಕೇರಳದ ಪ್ರವಾಹ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ 1 ಸಾವಿರ ಕೋಟಿ ರೂ. ಮೊತ್ತದ ಪ್ರೀಮಿಯಂ ಕಟ್ಟಬೇಕಾಗುತ್ತದೆ ಎಂದು ವಿಮಾ ಕಂಪನಿಳು ಲೆಕ್ಕ ಹಾಕಿರುವುದು ಗಂಭೀರತೆಗೆ ಸಾಕ್ಷಿ.


ಈ ನಡುವೆ ಕೇರಳದ ಮಹಾ ವಿಪತ್ತಿನಲ್ಲಿ ಅಪಾರ ಸಾವು ನೋವು, ನಷ್ಟಗಳಾಗಿರುವುದರಿಂದ ಇನ್ನೊಂದೆರಡ್ಮೂರು ದಿನಗಳಲ್ಲಿ ಪರಿಹಾರ ನೀಡುವ ಕೆಲಸ ಆರಂಭಿಸಲಾಗುವ ಬಗ್ಗೆ ಮಾಹಿತಿಗಳು ತಿಳಿಸುತ್ತವೆ. ಈ ಸಂಬಂಧದ ಅರ್ಜಿಗಳನ್ನ ನಾಲ್ಕೈದು ದಿನಗಳಲ್ಲಿ ಸಲ್ಲಿಕೆ ಮಾಡಲಾಗುವುದು ಹಾಗೂ ಆ ಬಳಿಕ ವಿಮಾ ಕಂಪನಿಗಳು ಎಷ್ಟು ಪ್ರಮಾಣದ ಪರಿಹಾರ ನೀಡಬೇಕಾಗುತ್ತದೆ ಎಂಬ ಅಂದಾಜು ಸಿಗಲಿದೆ ಎಂದು ಒರಿಯಂಟಲ್ ಇನ್ಶೂರೆನ್ಸ್ ಕಂಪನಿಯ ಚೇರ್ಮನ್ ಎಂಡಿ ಎ.ವಿ. ಗಿರಿರಾಜ್ ಕುಮಾರ್ ಹೇಳಿರುವುದು ಇತರೆ ವಿಮಾ ಸಂಸ್ಥೆಗಳಿಗೂ ಪ್ರೇರಣೆ ನೀಡಿದೆ ಎನ್ನಬಹುದು.
ಮಾರುತಿ ಕಂಪನಿ ಈಗಾಗಲೇ ಕೇರಳದ ನಿರಾಶ್ರಿತರಿಗೆ 2 ಕೋಟಿ ರೂ. ಪರಿಹಾರ ಘೋಷಿಸಿದೆ. ಕೇರಳ ಸಿಎಂ ಪರಿಹಾರ ನಿಧಿಗೆ ಚೆಕ್ ಹಸ್ತಾಂತರಿಸಿದೆ. ಇನ್ನು ಜುಂಕಿ ದೇವಿ ಬಜಾಜ್ ಗ್ರಾಮ ವಿಕಾಸ ಕಂಪನಿ 1 ಕೋಟಿ ರೂ. ನೀಡಿದೆ. ಮಾರುತಿ ಸುಜೂಕಿ ಸಹ 2 ಕೋಟಿ ರೂ. ಪರಿಹಾರ ನಿಧಿಯನ್ನ ನೀಡಿದ್ದಲ್ಲದೇ ಹೆಚ್ಚುವರಿ 1.5 ಕೋಟಿ ಅನುದಾನವನ್ನೂ ಒದಗಿಸಿರುವುದು ನಿಜಕ್ಕೂ ಮಾನವೀಯ ಅಂತಃಕರಣದ ಕಾರ್ಯ ಎಂದೇ ಹೇಳಬೇಕು.


ಸ್ಟಾರ್ ಇಂಡಿಯಾ ಕಂಪನಿ ಸಹ ಕೇರಳ ನಿರಾಶ್ರಿತರಿಗೆ ಹಣ ನೀಡುವಂತೆ ಆಸ್ಸೋಂ ಸಿಎಂ ಪರಿಹಾರ ನಿಧಿಗೆ 5 ಕೋಟಿ ರೂ. ನೀಡಿದೆ. ಈ ಬಗ್ಗೆ ಮಾತನಾಡಿರುವ ದಕ್ಷಿಣ ಭಾರತೀಯ ಮ್ಯಾನೇಜರ್ ಕೆ ಮಾಧವನ್ ಕೇರಳ ಸಿಎಂ ಪಿಣರಾಯಿ ವಿಜಯನ್ಗೆ ಚೆಕ್ ಹಸ್ತಾಂತರಿಸಿರುವುದು ಅವರ ಕಾಳಜಿ ಮತ್ತು ಮಾನವೀಯ ಮೌಲ್ಯಗಳ ಬದ್ಧತೆಗೆ ಸಾಕ್ಷಿಯಾಗಿದೆ. ಹೀರಾಗ್ರೂಪ್ ಸಹ ಕೇರಳದ ಜನರ ನೆರವಿಗೆ ನಿಂತಿದೆ.. ಕೋಟಿ ರೂ. ಚೆಕ್ ಅನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ಗೆ ಹಸ್ತಾಂತರಿಸಿದ್ದಾರೆ. ಅಷ್ಟೇ ಅಲ್ಲ ಬಿಸ್ಕಟ್, 100 ಟನ್ ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳನ್ನ ಪೂರೈಸಿದ್ದಾರೆ. ಒಂದಲ್ಲ ಎರಡಲ್ಲ ನೂರಾರು ಕಂಪನಿಗಳು, ಸಾವಿರಾರು ಸಂಘಸಂಸ್ಥೆಗಳು ಸಂತ್ರಸ್ತರ ಬೆನ್ನಿಗೆ ನಿಂತಿವೆ.


ಇಲ್ಲಿ ಯಾವುದೇ ಜಾತಿ ಧರ್ಮ ಅಂತಸ್ತುಗಳು ಅಡ್ಡ ಬರುತ್ತಿಲ್ಲ.ಯಾರಿಗೂ ಅದು ಲೆಕ್ಕಕ್ಕಿಲ್ಲ. ರಾಜ್ಯದ ಬಹುತೇಕ ಹಳ್ಳಿ ಪಟ್ಟಣ ನಗರಗಳಲ್ಲಿ ಜನ ಚೆಂದಾ ಎತ್ತಿ ಸಂತ್ರಸ್ತರ ಪರಿಹಾರ ನಿಧಿಗೆ ಕಳಿಸುತ್ತಿರುವುದು ನಮ್ಮ ಜನ ಅಂತಃಕರಣದ ಕಣಜ ಎನ್ನುವುದಕ್ಕೆ ಸಾಕ್ಷಿ. ಸಂಕಷ್ಟದಲ್ಲಿ ನಾವೆಲ್ಲ ಒಂದು ಎನ್ನುವುದನ್ನು ಜನ ತೋರಿಸುತ್ತಿದ್ದಾರೆ.