ಅಭಿಮಾನ, ಹೆಮ್ಮೆಯಿಂದ ಆಚರಿಸುತ್ತಿರುವ ದೇಶದ ಸ್ವಾತಂತ್ರ್ಯೋತ್ಸವ

ರಾಷ್ಟ್ರವು ಸ್ವಾತಂತ್ರ್ಯೋತ್ಸವವನ್ನು ಆಚರಿಸಲು ಸಜ್ಜಾಗುತ್ತಿದೆ. ಈ ಸಡಗರ ಸಂಭ್ರಮದ ಮಧ್ಯೆ ನಮ್ಮ ಹಿರಿಯರು ಕಂಡ ಕನಸು ನನಸಾಗಿವೆಯೇ? ಎಂಬ ಪ್ರಶ್ನೆ ಹಾಕಿಕೊಂಡು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ದೀನದಲಿತರ ಮಹಿಳೆಯರ ಸಮಸ್ಯೆಗಳು ಪರಿಹಾರವಾಗುವ ಬದಲು ಹೆಚ್ಚಾಗುತ್ತಿವೆ. ಅವುಗಳ ಕುರಿತು ಚಿಂತನೆ ಯಾಗಬೇಕು. ಸಾಮಾಜಿಕ ಸಮಾನತೆ, ಆರ್ಥಿಕ ಸಮಾನತೆ, ರಾಜಕೀಯರ ಸಮಾನತೆಯನ್ನು ಇಂದಿನವರೆಗೂ ಆಗಲಿಲ್ಲ. ದೇಶವು ಬಡತನ, ಹಸಿವುಗಳಿಂದ ಮುಕ್ತಿ, ಶೋಷಣೆ ಮುಕ್ತ ವರ್ಗರಹಿತ ವ್ಯವಸ್ಥೆ ಹೊಂದಲು ನಮಗಿನ್ನೂ ಸಾಧ್ಯವಾಗಲಿಲ್ಲ.

ದೇಶವು ವಿಶ್ವದಲ್ಲಿ ಸಮೃದ್ಧಿ ಸದೃಢ ದೇಶವಾಗಿದ್ದರೂ, ವೈಜ್ಞಾನಿಕ ವಿಜ್ಞಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡುತ್ತಿದ್ದರೂ, ನಮ್ಮ ಸೇವಾ ವ್ಯವಸ್ಥೆ ಜಗತ್ತಿನಲ್ಲಿ ಬಲಿಷ್ಠವಾಗಿ ಹೊರಹೊಮ್ಮಿದ್ದರೂ ಕೆಳಹಂತದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಮಗೆ ಸಾಧ್ಯವಾಗಿಲ್ಲ. ಸ್ವಾತಂತ್ರ್ಯೋತ್ತರ ಸಮಸ್ಯೆಗಳಲ್ಲಿ ಹಾಗೆಯೇ ಸಾಗಿವೆ. ಅವು ಪರಿಹಾರವಾಗಬೇಕು. ಹೆಣ್ಣು ಮಕ್ಕಳನ್ನು ದೇವತೆಯೆಂದು ಪೂಜಿಸಿದ ಪುಣ್ಯಮಯ ದೇಶ ನಮ್ಮದು. ಇಂದು ಸ್ತ್ರೀಯರನ್ನು ಶೋಷಿಸುವ ಸ್ಥಿತಿಯಲ್ಲಿದ್ದೇವೆ. ಎಲ್ಲ ಕ್ಷೇತ್ರದಲ್ಲಿ ಪುರುಷರಿಗೆ ಸರಿಸಮಾನವಾಗಿ ಸಾಧನೆ ಮಾಡುತ್ತಿದ್ದರು. ಮಹಿಳೆಯರು ರಕ್ಷಣೆ ಪಡೆಯುವಲ್ಲಿ ‘ಅಬಲೆ’ ಯಾಗಿಯೇ ಉಳಿದಿರುವುದು ವಿಪರ್ಯಾಸ ಸ್ತ್ರೀ ಪ್ರಕೃತಿ ತಾಯಿ, ಫಲದಾಯಿ ಎಂದರೂ ಅವಳ ಮೇಲಿನ ದೌರ್ಜನ್ಯ ನಿರಂತರ ನಡೆಯುತ್ತಿದೆ. ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆಗಳು ಜರುಗುತ್ತಿವೆ. ಇವು ನಿಲ್ಲಬೇಕು, ಲಂಚ, ರುಷುವತ್ತು, ಭ್ರಷ್ಟಾಚಾರ, ಅನೀತಿ, ಕ್ರೂರ ನಡುವಳಿಕೆಗಳನ್ನು ತಡೆಯಬೇಕಾಗಿದೆ. ದೇಶವು ಸ್ವಾತಂತ್ರ್ಯ ಪಡೆಯುವ ಹಿನ್ನೆಲೆಯಲ್ಲಿ ನಮ್ಮ ಹಿರಿಯರ ತ್ಯಾಗ, ಬಲಿದಾನ, ಆದರ್ಶಗಳು ನಡುವಳಿಕೆಗಳು, ನಿರೀಕ್ಷೆಗಳಲ್ಲಿ ದೇಶದ ಸರ್ವಾಂಗೀಣ ಪ್ರಗತಿ ಸಾಧಿಸುವುದೇ ಆಗಿತ್ತು. ಅವುಗಳು ವ್ಯರ್ಥವಾಗಬಾರದು.

ಹಿಂದಿನವರ ಆದರ್ಶ, ಅನುಕರಣೆ ನಾವು ಪಾಲಿಸುವಂತಾಗಬೇಕು. ಸ್ವಾತಂತ್ರ್ಯೋತ್ಸವ ಅರ್ಥ ಪೂರ್ಣವಾಗಿ ಆಚರಿಸುವಂತಾಗಬೇಕು. ಸಮಸ್ಯೆಗಳೇನು ಇದ್ದರೂ ನಮ್ಮ ದೇಶದ ಹಿರಿಮೆ, ಗರಿಮೆ ಉನ್ನತವಾದದ್ದು ಭಾರತ ದೇಶ ವೈವಿದ್ಯಮಯ ದೇಶ. ನಮ್ಮ ದೇಶದಲ್ಲಿರುವ ವೈವಿದ್ಯಮಯ ಭಾಷೆ, ಶೈಲಿ, ಅನೇಕ ಧರ್ಮಗಳು, ಅನೇಕ ಆಚರಣೆಗಳು, ವಿವಿಧ ವೇಷ ಭೂಷಣಗಳು, ಬೇರೆ ಬೇರೆ ಆಹಾರ ಪದ್ಧತಿಗಳು, ನಡುವಳಿಕೆಗಳು, ವಿಭಿನ್ನ ಸಂಪ್ರದಾಯ, ಭಿನ್ನ ಸಂಸ್ಕೃತಿ ಬೇರೆ ಯಾವುದೇ ದೇಶಗಳಲ್ಲಿ ಕಾಣಲು ಸಾಧ್ಯವಾಗಲಾರದು. ನಮ್ಮ ದೇಶದಲ್ಲಿ ಪ್ರತಿ 30 ರಿಂದ 40 ಕಿಲೋ ಮೀಟರಗೊಮ್ಮೆ ಭಾಷೆ ಬದಲಾಗುತ್ತದೆ. ಉಚ್ಛಾರಣೆ ಕ್ರಮ ಬೇರೆ ಬೇರೆಯಾಗುತ್ತದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹಬ್ಬಿ ನಿಂತಿರುವ ದೇಶದ ಸೊಬಗು ಸೌಂದರ್ಯ ಅನುಪಮ, ಭಾರತವು ಅಡಿಗಡಿಗೆ ವೈವಿದ್ಯವನ್ನು, ಜತೆ ಜತೆಗೆ ಸಮಗ್ರತೆಯನ್ನು ತನ್ನ ಜೊತೆ ಪೊಷಿಸಿಕೊಂಡು ಬಂದಿದೆ. ಇದು ಮಹತ್ವದ ಅಂಶವಾಗಿದೆ. ವಿಶ್ವದ ಇತರೆ ದೇಶಗಳಿಗೆ ಮುಖ್ಯ ಶಿಕ್ಷಣ, ನೈತಿಕತೆ, ತತ್ವ ಶಾಸ್ತ್ರ, ವೇದ ಉಪನಿಷತ್ತು, ಧಾರ್ಮಿಕ ಆಚರಣೆಗಳಿಂದ ಮಾರ್ಗದರ್ಶಿಯಾಗಿದೆ.

ಪುರಾತನ ಸಂಸ್ಕೃತಿಯ, ಋಷಿ, ಸಂತ ಮಹಾಂತರ ಸಾಧು ಸತ್ಪುರುಷರ ಜನನ, ಆಚರಣೆ ಮಾರ್ಗದರ್ಶನದಿಂದ ಜಗತ್ತಿಗೆ ಮಾದರಿಯಾಗಿದೆ. ಪ್ರಜೆಗಳ ಸುಖಗೋಸ್ಕರ ಆಡಳಿತ ರಾಜ ಮಹಾರಾಜರು ಇತರರಿಗೆ ಮಾದರಿಯಾಗಿರುವರು. ಜೊತೆಗೆ ಜಗತ್ತಿನ ಅತ್ಯಂತ ಯಶಸ್ವಿ ಪ್ರಜಾಪ್ರಭುತ್ವ ದೇಶ ನಮ್ಮದು. ಇತರ ದೇಶಗಳಿಗೆ ಆದರ್ಶ ಪ್ರಾಯವಾಗಿದೆ. ನಮ್ಮ ದೇಶ ಮಹಾನ್ ದೇಶ ಎನ್ನಲು ಹಲವು ಅಂಶಗಳಿವೆ. ಹಿಂದಿನಿಂದಲೂ ನಾವು ಯಾವುದೇ ದೇಶದ ಮೇಲೆ ಆಕ್ರಮಣ ಮಾಡಿಲ್ಲ. 5 ಸಾವಿರ ವರ್ಷಗಳ ಹಿಂದೆ ಜಗತ್ತಿನ ಹೆಚ್ಚಿನ ಸಂಸ್ಕೃತಿಗಳು ಕಾಡಿನಲ್ಲಿ ವಾಸಿಸುತ್ತಿದ್ದಾಗ ಭಾರತದ ಸಿಂಧೂ ನದಿ ಕಣಿವೆಗಳಲ್ಲಿ ಹರಪ್ಪ ಮೆಹಂಜೋದಾರ ಸಂಸ್ಕೃತಿ ಉನ್ನತವಾಗಿತ್ತು. ಭಾರತದಲ್ಲಿ ಹಿಂದೂ ಬೌದ್ಧ, ಜೈನ ಹಾಗೂ ಸಿಖ ಧರ್ಮಗಳ ಜನ್ಮ ತಾಳಿವೆ. ಜಗತ್ತಿನ ಶೇಕಡಾ 25 ರಷ್ಟು ಜನಸಂಖ್ಯೆ ಈ ಧರ್ಮದಲ್ಲಿವೆ. ಧರ್ಮ ಸಂಹಿಷ್ಣುತೆ ದೇಶ ನಮ್ಮದು. ಎಲ್ಲರನ್ನು ಪ್ರೀತಿಸಿದ, ಗೌರವಿಸಿದ ಪರಂಪರೆ ಹೊಂದಿದ್ದೆವೆ.

ಇಸ್ಲಾಂ ಧರ್ಮವು ಭಾರತದ ಹಾಗೂ ಜಗತ್ತಿನ ಎರಡನೆಯ ಬೃಹತ್ ಧರ್ಮವಾಗಿದೆ. ಯಾವುದೇ ಮುಸ್ಲಿಂ ದೇಶಗಳಲ್ಲಿ ಇಲ್ಲದಷ್ಟು ಸಂಖ್ಯೆಯ 3 ಲಕ್ಷ ಮಸೀದಿಗಳು ಭಾರತದಲ್ಲಿವೆ. ಜಗತ್ತಿನ ಮೊತ್ತಮೊದಲ ವಿಶ್ವವಿದ್ಯಾಲಯ ಕ್ರಿಸ್ತ ಪೂರ್ವ 700 ರಲ್ಲಿ ತಕ್ಷಶೀಲಾದಲ್ಲಿ ನಿರ್ಮಾಣವಾಗಿದೆ. 4ನೇ ಶತಮಾನದಲ್ಲಿ ಕಟ್ಟಲಾದ ನಲಂದಾ ವಿಶ್ವವಿದ್ಯಾಲಯವು ಭಾರತದ ಶಿಕ್ಷಣ ಕ್ಷೇತ್ರದ ಮಹೋನ್ನತ ಸಾಧನೆಯಾಗಿದೆ. 500 ವರ್ಷಗಳ ಹಿಂದೆ ಚರಕ ಮುನಿಯು ಆರ್ಯುವೇದ ಜಗತ್ತಿನ ಮೊದಲ ವೈದ್ಯಕೀಯ ಶಾಖೆ ಆರಂಭಿಸಿದ. ಇಂದು ಜಗತ್ತಿನ 90 ದೇಶಗಳಿಗೆ ಸ್ಟಾಫ್‍ವೇರ್ ಉದ್ಯಮ ರಫ್ತು ನಮ್ಮ ದೇಶ ಮಾಡುತ್ತಿದೆ. ನೌಕಾಯಾನ ವಿದ್ಯೆ ಸಿಂಧೂನದಿಯಲ್ಲಿ 6 ಸಾವಿರ ವರ್ಷಗಳ ಹಿಂದೆ ಪ್ರಚಲಿತದಲ್ಲಿತ್ತು. ಮೂರು ಲಕ್ಷಕ್ಕೂ ಹೆಚ್ಚು ನಿರಾಶ್ರಿತರಿಗೆ ಭಾರತದೇಶವು ಆಶ್ರಯ ನೀಡಿದೆ. ಶ್ರೀಲಂಕಾ, ಟೆಬೇಟ್, ಭೂತಾನ, ಅಪಘಾನಿಸ್ಥಾನ, ಬಾಂಗ್ಲಾ ದೇಶದಿಂದ ಬಂದವರಿಗೆ ಇಲ್ಲಿ ಆಶ್ರಯ ದೊರೆತಿದೆ. ಇಂಥ ಹತ್ತು ಹಲವುಗಳಲ್ಲಿ ಆದರ್ಶತನವನ್ನು ಮೆರೆದಿರುವ ದೇಶ ನಮ್ಮದು ಎಂಬುದು ಅಭಿಮಾನ ಪಡುವ ವಿಷಯವಾಗಿದೆ.

`ಜನನಿ ಜನ್ಮ ಭೂಮಿಂಶ್ಚ, ಸ್ವರ್ಗಾಧಪಿ ಗರೀಯಸಿ` ತಾಯ್ನೆಲವನ್ನೇ ತಾಯಿಯಾಗಿ ಪೂಜಿಸುವ, ಪ್ರೀತಿಸುವ ಜನ ನಮ್ಮವರು ಕಾಶ್ಮೀರದಿಂದ ಕನ್ಯಾ ಕುಮಾರಿ ನಮ್ಮ ಸಮಗ್ರತೆಯ ಸಂಕೇತವಾಗಿದೆ. ತಾಯಿ ಭಾರತೀಯ ಶಿಖರವಾಗಿ ಕಾಶ್ಮೀರ ನಿಂತರೆ, ಪಾದಪದ್ಮಗಳಾಗಿ ಕನ್ಯಾಕುಮಾರಿ ಕಂಗೊಳಿಸುತ್ತದೆ. ಇಂಥ ನಮ್ಮ ಹೆಮ್ಮೆಯ ಭಾರತಾಂಬೆಗೆ ನಮಿಸೋಣ, ಗೌರವಿಸೋಣ ಆಕೆಯ ಗೌರವ, ಸನ್ಮಾನಗಳು ಹೆಚ್ಚಿಸಲು ಮನಸಾರೆ ಶ್ರಮ ಪಟ್ಟು ಕಾರ್ಯ ಮಾಡುವ ಸಂಕಲ್ಪವನ್ನು ಈ 71 ನೇ ಸ್ವಾತಂತ್ರ್ಯೋತ್ಸವದ ಆಚರಣೆಯಲ್ಲಿ ಮಾಡೋಣ ಅಲ್ಲವೇ?
ಬಸವರಾಜ . ಸುಣಗಾರ
ಬೆಳಗಾವಿ.

ನಾಗ ಪಂಚಮಿ ಭರವಸೆ ತುಂಬಲಿ

ಭಾರತ ದೇಶ ಹಬ್ಬಗಳ ತವರೂರು. ಅಂತಹ ಹಬ್ಬಗಳಲ್ಲಿ ನಾಗ ಪಂಚಮಿಯು ಒಂದು. ನಾಗರಾಧನೆ ದೇಶದ ಹಬ್ಬಗಳ ಇತಿಹಾಸದಲ್ಲಿ ವಿನೂತನವಾದ ಸ್ಥಾನವನ್ನು ಪಡೆದುಕೊಂಡಿದೆ. ಮಹಾಭಾರತದಲ್ಲಿಯೂ ಕೂಡಾ ನಾಗ ಜನಾಂಗದ ಕಥೆ ಬರುತ್ತದೆ. ಅರ್ಜನ  ಉಲೂಪಿ ಎಂಬ ನಾಗ ಕನ್ಯೆಯನ್ನು ಮದುವೆ ಆದ ಕಾರಣ ಅವರಲ್ಲಿ ವೈಷಮ್ಯ ಬರಲು ನಾಗರಾಜ ಪರೀಕ್ಷತನನ್ನು ಕಚ್ಚುತ್ತದೆ. ಪರೀಕ್ಷಿತನ ಮಗ ಜನಮೇಜಯನು ತನ್ನ ತಂದೆಯನ್ನು ಕೊಂದ ನಾಗರ ಹಾವಿನ ಜನಾಂಗವನ್ನು ನಾಶ ಮಾಡಲು ಸರ್ಪಯಾಗ ಮಾಡುತ್ತಾನೆ. ಆ ಸಂದರ್ಭದಲ್ಲಿ ಆಸ್ತಿಕ ಋಷಿಯ ಮಧ್ಯಸ್ಥಿಕೆಯಿಂದಾಗಿ ಜನಮೇಜಯನ ಕೋಪ ಅಳಿದು ಹೋಗುತ್ತದೆ.. ಈ ರೀತಿಯಾಗಿ ಮಹಾಭಾರತದ ಕಥೆಯು ನಾಗ ಕುಲವನ್ನು ಪೂಜಿಸುವ ಪರಂಪರೆಗೆ ನಾಂದಿಯಾಯಿತು. ಹೀಗೆ ನಾಗ ಸರ್ಪವು ಗಣಪತಿಯ ಹೊಟ್ಟೆಗೆ ಹಗ್ಗವಾಗಿ, ಪರಮೇಶ್ವರನ ಕೊರಳಲ್ಲಿಯ ಆಭರಣವಾಗಿ, ವಿಷ್ಣುವಿನ ಹಾಸಿಗೆಯಾಗಿ ಅಲಂಕೃತವಾಗಿ ಭೂಲೋಕದ ಸರ್ವ ಮಾನ್ಯರಿಂದಲೂ ಪೂಜಿಸುವ ದೈವಾನು ದೇವತೆಯಾಗಿ ರೂಢಿಯಲ್ಲಿ ಬಂದಿತು.

ನಮ್ಮ ಪುರಾಣ ಮಹಾ ಕಾವ್ಯಗಳಲ್ಲಿ ನಾಗ ಗರುಡರಿಗೆ ಸಂಬಂಧಿಸಿದ ಹಲವಾರು ಉಲ್ಲೇಖಗಳಿವೆ.ತೈತ್ತರಿಯಲ್ಲಿ ನಾಗಪೂಜೆಗೆ ಸಂಬಂಧ ಪಟ್ಟಂತೆ ಅನೇಕ ಶ್ಲೋಕಗಳಿವೆ. ಭಾರತದಲ್ಲಿ ಕೇರಳ, ಆಸ್ಸಾಂ, ನಾಗಾಲ್ಯಾಂಡಗಳಲ್ಲಿ ನಾಗವಂಶಿಯರು ಕಂಡು ಬರುತ್ತಾರೆ. ಜನಮೇಜಯ ಮಹಾರಾಜನು ತಾನು ಮಾಡುತ್ತಿದ್ದ ಸರ್ಪಯಜ್ಞವನ್ನು ಪ್ರಾರಂಭಿಸಿದ್ದು ಶ್ರಾವಣ ಮಾಸದ ಶುದ್ಧ ಪಂಚಮಿಯ ದಿನ. ಇಂಥ ದಿನವೇ ನಾಗ ಪಂಚಮಿಯೆಂದು ಅಂದು ನಾಗದೇವನಿಗೆ ಅಥವಾ ಹುತ್ತಕ್ಕೆ ಹಾಲು ಹಾಕುವುದರ ಮೂಲಕ ನಾಗ ಪಂಚಮಿಯನ್ನು ಶ್ರಾವಣ ಮಾಸದಲ್ಲಿ ಆಚರಿಸುವ ಪರಂಪರೆ ಇದೆ. ಇನ್ನೂಂದು ಐತಿಹ್ಯದ ಪ್ರಕಾರ ಹಿಂದಿನ ಕಾಲದಲ್ಲಿ ಹೊಲದಲ್ಲಿ ರೈತನೊಬ್ಬ ರೆಂಟೆ ಹೊಡೆಯುವಾಗ ಆತನ ರೆಂಟೆಯ ಕುಳಕ್ಕೆ ಅನೇಕ ಹಾವಿನ ಮರಿಗಳು ಸಾವನ್ನಪ್ಪುತ್ತವೆ. ಇದರಿಂದ ಸೇಡಿನಿಂದಾಗಿ ಸರ್ಪವು ಆ ರೈತನ ಕುಟುಂಬದ ಜನರನ್ನೆಲ್ಲ ಕಚ್ಚಿ ಸಾಯಿಸುತ್ತದೆ.

ನಂತರ ಉಳಿದ ಅವನ ಮಗಳನ್ನು ಹುಡುಕಿಕೊಂಡು ಅವಳ ಗಂಡನ ಮನೆಗೆ ಹೋಗುತ್ತದೆ. ಆದರೆ ಅಲ್ಲಿ ಅವಳು ಮಣ್ಣಿನ ನಾಗಪ್ಪನನ್ನು ಮಾಡಿ ಪೂಜಿಸಿ ಹಾಲಿನ ಅಭಿಷೇಕ ಮಾಡುತ್ತಿರುತ್ತಾಳೆ.ಇದನ್ನು ನೋಡಿದ ಹಾವು ಶಾಂತವಾಗಿ ರೈತನ ಎಲ್ಲಾ ಮಕ್ಕಳನ್ನು ಮತ್ತೆ ಬದುಕಿಸುತ್ತದೆ. ಆ ದಿನದಿಂದ ರೈತ ಸಮುದಾಯದ ಎಲ್ಲಾ ಜನರು ತಮ್ಮ ಹೊಲದೊಳಗಿನ ಮಣ್ಣನನ್ನು ತಂದು ನಾಗದೇವನನ್ನು ಮಾಡಿ ಪೂಜಿಸುವ ಪರಂಪರೆಗೆ ಸಾಕ್ಷಿಯಾಗುತ್ತಾರೆ. ಹೀಗೆ ನಾಗರ ಪಂಚಮಿ ಹಬ್ಬ ಬೆಳೆದು ಬರಲು ನಾಂದಿಯಾಯಿತು.

ಪಂಚಮಿ ಹಬ್ಬ ಬಂದೀತವ್ವ , ಅಣ್ಣಾ ಬರಲಿಲ್ಲಾ ಕರಿಲಾಕ ಎಂಬ ಹಾಡು ಪಂಚಮಿ ಹಬ್ಬದಲ್ಲಿ ಅಣ್ಣ ತಂಗಿ, ಅಕ್ಕಂದಿರ ಸಂಬಂಧವನ್ನು ವಾತ್ಸಲ್ಯದ ಬೆಸುಗೆಯಲ್ಲಿ ಬಂಧಿಸಿ ಬಿಡುತ್ತದೆ. ತವರು ಮನೆಯಿಂದ ಅಕ್ಕ, ತಂಗಿಯರನ್ನು ಮೊದಲೆ ನಾಲ್ಕು ದಿನ ತವರಿಗೆ ಕರೆದುಕೊಂಡು ಬಂದು ಅವಳಿಂದ ಉಂಡಿ ಮುತಾಂದ ಪಂಚ ಪಕ್ವಾನಗಳನ್ನು ಮಾಡಿಸಿ ಹಾವಿಗೆ ಹಾಲೆರೆಯುವುದರ ಮೂಲಕ ಹಬ್ಬಕ್ಕೆ ಕಳೆ ಕಟ್ಟುತ್ತಾರೆ.ಅಂದು ಬೇಗನೆ ಎದ್ದು ನಾಗ ಪೂಜೆಯನ್ನು ಮಾಡಿ ಮನೆಯ ಮಂದಿ ಎಲ್ಲಾಸೇರಿ  ದೇವರ ಪಾಲ ಹಿರಿಯರ ಪಾಲ ಅಪ್ಪ,ಅಮ್ಮನ ಪಾಲ ಎಂದು ಹೇಳುವುದರ ಮೂಲಕ ನಾಗದೇವನಿಗೆ ಹಾಲಿನ ಅಭಿಷೇಕ ಮಾಡುತ್ತಾರೆ. ಮೂರನೇ ದಿನ ಹುತ್ತು ಮುರಿಯುವ ಸಂಪ್ರದಾಯ ಅಂದು ಕೊಬ್ಬರಿ ಬಟ್ಟಲ ಒಡೆದು ಬೆಳ್ಳಿ ನಾಗಪ್ಪನಿಗೆ ಇಲ್ಲವೇ ದೇವಾಲಯದ ಹೊರಗೆ ಇರುವ ನಾಗಪ್ಪನಿಗೆ ಹಾಲು ಹೊಯ್ಯುತ್ತಾರೆ. ನಾಲ್ಕನೇಯ ದಿನ ವರ್ಷ ತೊಡಕು ಇದ್ದು ಅಂದು ಮಣ್ಣೆತ್ತಿನ ಅಮವಾಸ್ಯೆಯಿಂದ ಮಾಡಿದ ದಿನದಿಂದ ಎಲ್ಲಾ ಮಣ್ಣಿನಿಂದ ಮಾಡಿದ ಎತ್ತು, ಈಶ್ವರ, ಗುಳ್ಳವ್ವನ ಮೂರ್ತಿಗಳನ್ನು ಹೊಲಕ್ಕೆ ಒಯ್ದು ಪೂಜೆ ಮಾಡಿ ಅಂಬಲಿ ಚರಗವನ್ನು ಹೊಲದ ತುಂಬೆಲ್ಲಾ ಚೆಲ್ಲುವ ರೂಡಿದಿದರಿಂದ ಹೊಲದಲ್ಲಿ ಪೈರು ಚನ್ನಾಗಿ ಬರುತ್ತದೆ ಎಂಬ ನಂಬಿಕೆ ಇದೆ. ಇದನ್ನು ಉತ್ತರ ಕರ್ನಾಟಕದಲ್ಲಿ ನಾವು ಬಹಳಷ್ಟು ಕಾಣುತ್ತೆವೆ.

ನಾಗ ಪಂಚಮಿ ದಿನದಂದು ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರಿಗೂ ಅಂದು ಜೋಕಾಲಿ ಆಡಿ ಸಂಭ್ರಮಿಸುತ್ತಾರೆ. ಊರ ಮುಂಭಾಗದ ದೊಡ್ಡ ಗಿಡಗಳಿಗೆ ಹಗ್ಗಗಳನ್ನು ಕಟ್ಟಿ ಜೀಕಿ ನಲಿಯುತ್ತಾರೆ. ಎದುರಿಗೆ ಉಂಡಿ, ಕೊಬ್ಬರಿ ಬಟ್ಟಲಗಳನ್ನು ಕಟ್ಟಿ ಅವುಗಳನ್ನು ಜೋರಾಗಿ ಜೀಕಿ ಬಾಯಿಂದ ಕಚ್ಚಿ ತಂದವರಿಗೆ ಬಹುಮನಗಳನ್ನು ಕೊಡುತ್ತಾರೆ. ಕೆಲವೊಂದು ಕಡೆ ಭಾರವಾದ ಕಲ್ಲುಗಳನ್ನು ಎತ್ತುವುದರ ಮುಲಕ ಇನ್ನೂ ಹತ್ತು ಹಲವು ಮನರಂಜನೆಯ ಸ್ಪರ್ಧೆಗಳು ಕೂಡಾ ನಡೆಯುತ್ತವೆ. ಮಳೆಗಾಲದ ತಂಪಾದ ವಾತವರಣದಲ್ಲಿ ಮಾನವನ ಶರೀರವು ಸುಸ್ಥಿರವಾಗಿರಲೆಂದು ಎಳ್ಳಿನ, ಶೇಂಗಾ, ಲಡಗಿ, ರವಾ, ತಂಬಿಟ್ಟು, ಅಳಿಟ್ಟು .ಬುಂದಿ, ಕೊಬ್ಬರಿ, ಶೇವ್, ಗುಳಕಪ್ಪಡಿ, ಮುಂತಾದ ಹತ್ತು ಹಲವು ತರ ತರದ ಉಂಡಿಗಳನ್ನು ಕಟ್ಟಿ ನಾಗಪ್ಪನಿಗೆ ನೈವೇದ್ಯ ಸಲ್ಲಿಸಿ ಪ್ರಸಾದ ರೂಪದಲ್ಲಿ ಸೇವಿಸುತ್ತಾರೆ. ಅರಳು, ಚೂಡಾ, ಕಡಲೆ ಉಸಳಿ ಚಕ್ಕಲಿ, ಮುಂತಾದವು ಖಾರದ ರೂಪದಲ್ಲಿ ಮಾಡಲ್ಪಟ್ಟಿರುತ್ತವೆ.

ಆದರೆ ಇಂದು ಆಧುನಿಕ ಪಾಶ್ಚಿಮಾತ್ಯ ದೇಶಗಳ ಸಂಸ್ಕøತಿಯಿಂದಾಗಿ ನಾಗ ಪಂಚಮಿಯನ್ನು ವೈಭೋವಿತವಾಗಿ ಆಚರಿಸುವ ಪರಿಪಾಠ ಆಗುತ್ತಿಲ್ಲ. ಕೇವಲ ಗ್ರಾಮೀಣ ಭಾಗದಲ್ಲಿ ಮಾತ್ರ ಕಾಣುತ್ತೇವೆ  ಇಂತಹ ಹಬ್ಬಗಳು ಮಾನವೀಯ ಸಂಬಂಧಗಳನ್ನು ಬೆಸೆಯುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನಮ್ಮ ಸಂಪ್ರದಾಯಗಳು, ಪದ್ಧತಿಗಳು, ಆಚರಣೆಗಳು ಮುಂದಿನ ಪೀಳಿಗೆಗೆ ರವಾಣೆಯಾಗಬೇಕು. ಅಂದಾಗ ಮಾತ್ರ ಬದುಕಿಗೆ ಒಂದು ಅರ್ಥ ಬರುತ್ತದೆ. ದುರದೃಷ್ಟವಶಾತ್ ಇಂದು ಹಾವುಗಳ ಸಂತತಿ ಅಳಿವಿನ ಅಂಚಿನಲ್ಲಿದೆ. ಬೇರೆ ಬೇರೆ ಉದ್ಧೇಶಗಳಿಗೆ ಹಾವುಗಳನ್ನು ಹಿಡಿದು, ಇಲ್ಲವೇ ಕೊಂದು ಮಾರಾಟ ಮಾಡಲಾಗುತ್ತಿದೆ. ಅವುಗಳ ಸಂತತಿಯನ್ನು ಉಳಿಸಿ ಬೆಳಿಸ ಬೇಕಾಗಿದೆ. ಇಂದು ಬರಗಾಲದ ಭೀಕರ ಛಾಯೆಯಲ್ಲಿ ನಮ್ಮ ರೈತರು ನಲುಗಿದ್ದಾರೆ.

ಸಾಕಷ್ಟು ಖರ್ಚು ಮಾಡಿ ನಾಗ ಪಂಚಮಿಯ ಹಬ್ಬವನ್ನು ಮಾಡುವ ಶಕ್ತಿ ಅವರಲ್ಲಿ ಉಳಿದಿಲ್ಲ. ಆದರೂ ಸಾಲ ಸೋಲ ಮಾಡಿ ಹಬ್ಬವನ್ನು ಆಚರಿಸುವುದರ ಬದಲು ಶಾಸ್ತ್ರೋಪ್ತವಾಗಿ ಸರಳವಾಗಿ ಹಬ್ಬವನ್ನು ಆಚರಿಸಿದರೆ ಒಳ್ಳೆಯದು. ಆತ್ಮಸ್ಥ್ಯೆರ್ಯದಿಂದ ಜೀವನವನ್ನು ಎದುರಿಸಿ ಮುಂದಿನ ಹಬ್ಬಗಳನ್ನು ಸಂತೋಷದಿಂದ ಆಚರಿಸುವ ಕಾಲದ ಕಡೆಗೆ ಅವರು ಕಾಯಬೇಕಾಗಿದೆ. ಬದುಕಿನಲ್ಲಿ ಹತಾಶೆ ಹೊಂದಬೇಡಿ. ಯಾವುದಕ್ಕೂ ಒಳ್ಳೆಯ ಕಾಲ ಬಂದೇ ಬರುತ್ತದೆ. ಸರ್ವ ಅನ್ನದಾತರಿಗೂ ಈ ನಾಗ ಪಂಚಮಿ ಹಬ್ಬ ಬದುಕಿನಲ್ಲಿ ಭರವಸೆಯನ್ನು ಮೂಡಿಸುವ ಹಬ್ಬವಾಗಲಿ ಎಂದೇ ಆಶಿಸೋಣ.

ನಾಗರ ಪಂಚಮಿ ನಾಡಿನ ಮಹಿಳೆಯ ಪಾಲಿಗೆ ವಿಶಿಷ್ಟ ಹಬ್ಬ. ಹಳ್ಳಿಗಳಲ್ಲಿ ಮಹಿಳೆಯ ಆಚರಣೆ ಕಣ್ಣತುಂಬಿ ನೋಡುವುದೆ ಒಂದು ಹಬ್ಬ.

  • ಬಸವರಾಜ. ಗಂ. ಪುರಾಣಿಕಮಠ

ಇತಿಹಾಸ ಉಪನ್ಯಾಸಕರು

ಬೈಲಹೊಂಗಲ