ಅಪರೂಪದ ಗಡಿ ಭಾಗದ ರಂಗ ಭೂಮಿ ಕಲಾವಿದ ಮಲ್ಲಿಕಾರ್ಜುನ ಮಡ್ಡಿ

ರಂಗಭೂಮಿ ಎಲ್ಲರನ್ನು ಕೈಚಾಚಿ ಕರೆದರೂ ಕಲಾ ದೇವತೆ ಆಶೀರ್ವದಿಸುವದು  ಕೆಲವರಿಗೆ ಮಾತ್ರ. ಇದು ದೇವರು ನೀಡುವ ಕೊಡುಗೆ ಎಂದರೆ ತಪ್ಪಾಗಲಾರದು. ರಂಗಭೂಮಿ ಮುಳ್ಳಿನ ಹಾಸಿಗೆಯಿದ್ದಂತೆ. ವಯಸ್ಸು ಇರುವ ವರೆಗೆ ಮಾತ್ರ ಕಲಾವಿದನ ಜೀವನ  ಅವರ ಅಂತಿಮ ದಿನಗಳನ್ನು ನೋಡಿದರೆ ಕಟುಕರ ಹೃದಯ ಕೂಡ ಕರಗುತ್ತದೆ. ರಂಗಭೂಮಿಯ ಕಲಾವಿದರಲ್ಲಿ ಮಿಂಚಿದವರು ಏಣಗಿ ಬಾಳಪ್ಪ ಹಾಗೂ ಶ್ರೀ 1008 ಜಗದ್ಗುರು ರೇಣುಕಾಚಾರ್ಯ ನಾಟ್ಯ ಸಂಘದ ಒಡೆಯರಾದ ಮಲ್ಲಿಕಾರ್ಜುನ ಸೋಮಶೇಖರ ಮಡ್ಡಿ. ಜಗವೆಲ್ಲ ನಗುತಿರಲಿ ಜಗದಳಿವು ನನಗಿರಲಿ ಎಂಬಂತೆ ಅವರು ತಮ್ಮ ಅಳಿಲನ್ನು ಎರಡನೇಯವರಿಗೆ ತೋರಿಸದೆ ರಾತ್ರಿ ತಮ್ಮ ಕಲೆ ಪ್ರದರ್ಶಿಸಿ ಜನರನ್ನು ರಂಜಿಸುವದೇ ಕಲಾವಿದನ ಜೀವನ.

ತಾಲೂಕಿನ ಅಮ್ಮಣಗಿಯ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವದಲ್ಲಿ ನಾಟಕಗಳ ದರ್ಬಾರು.ಟಿಲ್ಲಿ 3 ನಾಟ್ಯ ಸಂಘಗಳು ವಿವಿಧ ನಾಟಕಗಳನ್ನು ಪ್ರದರ್ಶಿಸುತ್ತಿವೆ ಅದರಲ್ಲಿ ಮೈದಂರ್ಗಿಯ ಮಡ್ಡಿಯವರ ನಾಟ್ಯ ಸಂಘ ಒಂದು. ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವ ಹಲವಾರು ನಾಟಕ ಕಂಪನಿಗಳು ಬಂದಾಗಿ ಸಂಘದೊಡೆಯರು ಬೀದಿಗೆ ಬಂದಿದ್ದಾರೆ. ಸರಕಾರ ನಾಟಕ ಕಂಪನಿಗಳಿಗೆ ನೀಡುತ್ತಿರುವ ಅನುದಾನ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಾಗಿದೆ. ರಂಗಭೂಮಿ ಕಲಾವಿದರು ಅಲೆಮಾರಿಗಳು. ಇಂದು ಇಲ್ಲಿಯಾದರೆ ನಾಳೆ ಎಲ್ಲಿ ಎಂಬುದು ಅವರಿಗೆ ಗೊತ್ತಿರುವದಿಲ್ಲ. ಉನ್ನತ ಮಟ್ಟದ ಶಿಕ್ಷಣ ಪಡೆಯುವದು ದುಸ್ತರ. ಕಂಪನಿಯಲ್ಲಿಯ  ಕಲಾವಿದೆಯನ್ನೇ ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳುವದು. ಶಿಕ್ಷಣ ಕಡಿಮೆಯಿದ್ದರೂ ಕಲೆ ಅವರಲ್ಲಿ ಕರಗತವಾಗಿರುತ್ತದೆ. ಪ್ರೇಕ್ಷಕರ ಮನ ಸೂರೆಗೊಳ್ಳುವ ಕಲೆ ಹಾಗೂ ಶಕ್ತಿ ಆವರಲ್ಲಿರುತ್ತದೆ. ಬೆಳ್ಳಿ ತೆರೆ ಹಾಗೂ ಕಿರುತೆರೆಗಳತ್ತ ಕಲಾವಿದರು ಆಕರ್ಷಿತರಾಗುತ್ತಿರುವದರಿಂದ ನಾಟಕ ಕಂಪನಿಗಳಿಗೆ ಕಲಾವಿದರ ಕೊರತೆ ಯಾಗುತ್ತಿದೆ. ಹಿರಿಯ ನಾಟ್ಯ ಕಲಾವಿದ ಹಾಗೂ ಸಂಘದೊಡೆಯ ಮಲ್ಲಿಕಾರ್ಜುನ ಮಡ್ಡಿಯವರು ಅಮ್ಮಣಗಿ ಜಾತ್ರೆಯಲ್ಲಿ ಪತ್ರಿಕೆಯೊಂದಿಗೆ ತಮ್ಮ ಅಳಿಲನ್ನು ತೊಡಿಕೊಂಡರು. ಜಾತ್ರೆಯಲ್ಲಿ 15 ದಿನಗಳ ವರೆಗೆ ಅವರು ವಿವಿಧ ನಾಟಕಗಳನ್ನು  ಪ್ರದರ್ಶಿಸಲಿದ್ದಾರೆ. ನೋಟ ಬ್ಯಾನಿನಿಂದ ಆದಾಯಕ್ಕೆ ಪೆಟ್ಟು ಬಿದ್ದಿರುವದನ್ನು ತಿಳಿಸಿದ ಅವರು ಗುಂಗು ಹಿಡಿಶ್ಯಾಳ ಗೌರಿ, ಹೊತ್ತು ನೋಡಿ ಹೊಡತಾ ಹಾಕು, ಭೂಮಿ ತೂಕದ ಹೆಣ್ಣು, ಛೀ ಕಳ್ಳಿ ಬಾ ಹೊಳ್ಳಿ, ಜಗಜ್ಯೋತಿ ಬಸವೇಶ್ವರ, ಸತ್ಯ ಹರಿಶ್ಚಂದ್ರ, ವರ ನೋಡಿ ಹೆಣ್ಣು ಕೊಡು, ಆಕಿ ಹಂಗ ಮಗ ಹಿಂಗ ಹೀಗೆ ನೂರಾರು ನಾಟಕಗಳನ್ನು ಕರ್ನಾಟಕ ಹಾಗೂ ಮಹಾರಾಷ್ಟ್ರದ ಮೂಲೆ ಮೂಲೆಗಳಲ್ಲಿ ಪ್ರದರ್ಶಿಸಿ ಜನ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ರಂಗ ಭೂಮಿಗೆ ಬರುವ ಕಲಾವಿದರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿರುವ ವಿಷಾದವನ್ನು ವ್ಯಕ್ತ ಪಡಿಸಿದ ಅವರು ಪ್ರೇಕ್ಷಕರ ಸಂಖ್ಯೆ ಮಾತ್ರ ಹೆಚ್ಚಾಗುತ್ತಿದೆಯೆಂದರು. 75 ವಸಂತ ತುಂಬಿದ ಮಡ್ಡಿಯವರು ಈಗಲೂ ಯುವಕರಂತೆ ಕಂಪನಿಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ಕಲಾವಿದರನ್ನು ಪ್ರೋತ್ಸಾಹಿಸಿ ಕಂಪನಿಯನ್ನು ಮುಂದುವರೆಸಿಕೊಂಡು  ಹೊಗುತ್ತಿದ್ದಾರೆ. ಇವರ ಧರ್ಮ ಪತ್ನಿ ಚೆನ್ನಮ್ಮ ಹಾಗೂ ಪುತ್ರರನ್ನು ರಂಗಭೂಮಿಗೆ ತರದೆ ವಿದ್ಯಾವಂತರನ್ನಾಗಿ ಮಾಡಿದ್ದಾರೆ.

ಮಡ್ಡಿಯವರು  ಸೊಲ್ಲಾಪೂರ ಜಿಲ್ಲೆ ಅಕ್ಕಲಕೋಟಿನ ಮೈದಂರ್ಗಿಯಲ್ಲಿ  ಬಡತನ ಕುಟುಂಬದಲ್ಲಿ ಜನಿಸಿದರು. ಆರ್ಥಿಕ ಮುಗ್ಗಟ್ಟಿನಿಂದ ಕೇವಲ 2 ನೇ ತರಗತಿ ವರೆಗ ಶಿಕ್ಷಣ ಪಡೆದು ತಿಲಾಂಜಲಿ ನೀಡಿ ರಂಗಭೂಮಿಯನ್ನು ಪ್ರವೇಶಿಸಿದರು. ಕನ್ನಡ ಮೇಲೆ ಇವರಿಗೆ ತುಂಬಾ ಅಭಿಮಾನ ಮಹಾರಾಷ್ಟ್ರದಲ್ಲಿ ಕನ್ನಡ ಶಾಲೆ ಮುಚ್ಚುವ ನಿರ್ಣಯ ತೆಗೆದುಕೊಂಡಾಗ ಹೋರಾಟ ಮಾಡಿ ಉಳಿಸಿದರು ಈಗ ಗಡಿನಾಡ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕನ್ನಡ ಭಾಷೆ ಉಳಿಸಿ ಬೆಳೆಸುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ. ಮಲ್ಲಿಕಾರ್ಜುನ ಮಡ್ಡಿಯವರು ಇಂದು ಸುಸ್ಥಿತಿಯಲ್ಲಿದ್ದರೂ ಬಡತನದ ಕಹಿ ಮರೆಯದೆ ಆಳಂದ, ತಾಂಬಾ, ಮೈಂದರ್ಗಿ, ಹುಣಸಗಿ, ಮಾದನ ಹಿಪ್ಪರಗಿಯಲ್ಲಿಯ ನೂರಾರು ಬಡ ಮಕ್ಕಳಿಗೆ ಬಟ್ಟೆ, ಆರ್ಥಿಕ ಸಹಾಯ ಮಾಡಿ ಅವರನ್ನು ಮೇಲೆತ್ತುವ ಪ್ರಯತ್ನ ಮಾಡುತ್ತಿದ್ದಾರೆ. ಸರಕಾರದಿಂದ ಬರುವ ಮಾಶಾಸನವನ್ನು ಇದಕ್ಕೆ ಮೀಸಲಿಟ್ಟಿದ್ದಾರೆ. ಧಾರ್ಮಿಕ, ಸಾಮೂಹಿಕ ವಿವಾಹಗಳಲ್ಲಿ ಅನ್ನ ಸಂತರ್ಪನೆ ಮಾಡುತ್ತಿದ್ದಾರೆ. ಹಾಸ್ಯ ಕಲಾವಿದೆ, ಸಚಿವೆ ಉಮಾಶ್ರೀ ಇವರ ಕಲೆ ಮೆಚ್ಚಿ ಗೌರವಿಸಿದ್ದಾರೆ. ಮೂಡಬಿದ್ರಿಯ ಅಳ್ವಾ ಸಂಸ್ಥೆ ಇವರಿಗೆ ಸುವರ್ಣ ರಂಗ ಪ್ರಶಸ್ತಿ ಹಾಗೂ ಅಕ್ಕಲಕೋಟದಲ್ಲಿ ಪ್ರದರ್ಶಿಸಲಾದ ಆಕಿ ಹಂಗ ಮಗ ಹಿಂಗ ನಾಟಕದ 101 ನೇ ಪ್ರದರ್ಶನದಲ್ಲಿ ಇವರನ್ನು ಅದ್ಧೂರಿಯಾಗಿ ಸನ್ಮಾನಿಸಲಾಯಿತು. ಹಲವಾರು ಪ್ರಶಸ್ತಿ, ಪುರಸ್ಕಾರಗಳು ಇವರ ಮುಡಿಗೆ ಸೇರಿವೆ. ಇವರ ನಾಟಕ ಕಂಪನಿಯಲ್ಲಿ ಸುಮಾರು 20 ಕಲಾವಿದರಿದ್ದಾರೆ
ಇವರು  ಕಳೆದ ಹಲವಾರು ವರ್ಷಗಳಲ್ಲಿ ರೂ. 17 ಲಕ್ಷ ನಷ್ಟ ಅನುಭವಿಸಿದರೂ ಎದೆಗುಂದದೆ ಕಂಪನಿಯನ್ನು ಮುನ್ನೆಡೆಸುತ್ತಿರುವದು ಶ್ಲಾಘನೀಯ.. ಕಷ್ಟ ಕಾಲದಲ್ಲಿ ಇವರಿಗೆ ಎಲ್ಲ ರೀತಿಯಲ್ಲಿ ಧೈರ್ಯ ತುಂಬಿದವರು ಕಂಪನಿಯ ವ್ಯವಸ್ಥಾಪಕ  ಬಸವಣ್ಣಿ ಗೊಬ್ಬೂರರು. ನಾಟಕ ಕಂಪನಿಯಲ್ಲಿ ಇವರಿಂದ ಇನ್ನೂ ಹೆಚ್ಚಿನ ನಾಟಕಗಳು ಪ್ರದರ್ಶನಗೊಳ್ಳಲಿ. ಕಂಪನಿಯಲ್ಲಿ  ವಿರುಪಾಕ್ಷಿ ಹೊಂಬಳ, ಖಾಜೇಸಾಬ ಅಮ್ಮಿನಗಡ, ಗಿರಿ ದಾವಣಗೆರೆ, ಶಿವಶಂಕರ ಉಮದಿ, ಅವಿನಾಶ ಅಕ್ಕಲಕೋಟ, ಮೂರ್ತಿ ಕೊಪ್ಪಳ, ವಿಜಯಕುಮಾರ ಹೆಗಡೆ, ಕುಮಾರ ಬಿಜಾಪೂರ, ಪಂಚು ಬನಹಟ್ಟಿ, ಆನಂದ ಮೈಲಾರ, ಎಸ್.ಬೀಳಗಿ,  ಹಫೀಜಾ ಬೇಗಂ ಅಮ್ಮಿನUಗಡ, ಕಾವ್ಯಾ ಉಮದಿ, ಪ್ರಿಯಾ ಅಕ್ಕಲಕೋಟ, ಕವಿತಾ ಭದ್ರಾವತಿ,  ಕಲಾವಿದರು ಅಭಿನಯಿಸುತ್ತಿದ್ದಾರೆ.  ಇವರಿಂದ ಇನ್ನೂ ಹೆಚ್ಚಿನ ನಾಟಕಗಳು  ಪ್ರದರ್ಶನಗೊಂಡು  ಪ್ರೇಕ್ಷಕರ ಮನ ರಂಜಿಸಲೆಂದು ನನ್ನ ಶುಭ ಹಾರೈಕೆ..!

ರಾಮಣ್ಣಾ ನಾಯಿಕ   ಪತ್ರಕರ್ತರು
ಹುಕ್ಕೇರಿ