ಅನುಪಮ ಸಾಹಿತಿ : ಡಾ.ಗುರುದೇವಿ ಹುಲೆಪ್ಪನವರಮಠ

ಡಾ.ಗುರುದೇವಿ ಹುಲೆಪ್ಪನವರಮಠ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರು. ಕಾವ್ಯ, ಹಾಸ್ಯ, ಶರಣ ಸಾಹಿತ್ಯ, ಸಂಪಾದನೆ, ಜೀವನ ಚರಿತ್ರೆ, ವಿಮರ್ಶೆ ಅಭಿನಂದನಾ, ಗ್ರಂಥಗಳಿಗಲ್ಲದೇ ಸೌಮ್ಯ ಕ್ರಿಯಾಶೀಲ ವ್ಯಕ್ತಿತ್ವಕ್ಕೂ ಹೆಸರಾದವರು. ಸಹಜ ಸರಳ ನಡೆನುಡಿ ಅವರಿಗದು ಹೆತ್ತವರಿಂದ ಬಂದ ಬಳುವಳಿ.

12ನೆಯ ಶತಮಾನದ ಬಸವಾದಿ ಶರಣರು ಕಟ್ಟ ಬಯಸಿದ ಸುಂದರ ಸಮಾಜವನ್ನು ಈಗಿನ ಕಾಲದಲ್ಲಿ ರೂಪಿಸ ಬಯಸುವ ಕನಸು ಕಂಡವರು. ಬಸವಾದಿ ಶರಣರ ವಿಚಾರಗಳನ್ನು ಅಕ್ಷರಶಃ ಆಚರಣೆಯಲ್ಲಿ ತಂದವರು. ತಮ್ಮ ಜೀವನದುದ್ದಕ್ಕೂ ಶರಣರ ವಿಚಾರಗಳನ್ನು ಸಾಹಿತ್ಯದ ಮೂಲಕ ಹಾಗೂ ಉಪನ್ಯಾಸಗಳ ಮೂಲಕ ಜನಮನಕ್ಕೆ ತಲುಪಿಸುವ ಕಾಯಕದಲ್ಲಿ ಯಶಸ್ವಿಯಾದ ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ ಮಹಿಳೆ ಬೆಳಗಾವಿ ಲಿಂಗರಾಜ ಕಾಲೇಜಿನ ಪ್ರಾಧ್ಯಾಪಕಿ ಡಾ.ಗುರುದೇವಿ ಹುಲೆಪ್ಪನವರಮಠ.
ಇವರು ಸವದತ್ತಿ ತಾಲೂಕಿನ ಮುರಗೋಡದವರು. ಮುರಗೋಡ ಸ್ಥಳವು ಮಹಾಂತ ದುರದುಂಡೇಶ್ವರ ಮಠ ಹಾಗೂ ಶಿವಚಿದಂಬರ ಪುಣ್ಯ ಕ್ಷೇತ್ರಗಳಿಂದ ಹೆಸರುವಾಸಿಯಾಗಿದೆ. ತಂದೆ ಉಳವೀಶ, ತಾಯಿ ಶಾಂತಾದೇವಿ, ಈರ್ವರೂ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರು. ಶರಣ ಸಂಸ್ಕøತಿಯ ಸತ್ವ ಸೌಂದರ್ಯಗಳನ್ನು ಸಂಪೂರ್ಣವಾಗಿ ಅನುಭವಿಸಿದ ಸಾರ್ಥಕ ಜೀವಿಗಳು. ನಾಲ್ಕು ಮಕ್ಕಳಲ್ಲಿ ಎರಡನೆಯವರು ಗುರುದೇವಿ. ತಂದೆಯವರು ಶರಣ ಸಾಹಿತಿಗಳಾಗಿದ್ದರಿಮದ ಬಾಲ್ಯದಿಂದಲೇ ಸಾಹಿತ್ಯದತ್ತ ಒಲವು.

1982ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಇಂಗ್ಲೀಷನ್ನು ಅತೀ ಹೆಚ್ಚು ಅಂಕಗಳಿಂದ ತೇರ್ಗಡೆ ಹೊಂದಿ, ಕೆ.ಎಲ್.ಇ. ಸಂಸ್ಥೆಯ ಸದವತ್ತಿಯ, ಶ್ರೀಮಂತ ಬೆಳ್ಳುಬ್ಬಿ ಮಹಾವಿದ್ಯಾಲಯದಲ್ಲಿ ಸೇವೆಯನ್ನು ಪ್ರಾರಂಭಿಸಿದರು. ಗುರುದೇವಿಯವರ ಆಸಕ್ತಿ ಕನ್ನಡ ಸಾಹಿತ್ಯದಲ್ಲಿದ್ದುದರಿಂದ, 1984ರಲ್ಲಿ ಎಂ.ಎ. ಕನ್ನಡವನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ ಗಳಿಸಿರುವದು ವಿಶೇಷ. 1996ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಇಂಗ್ಲೀಷ ಭಾಷೆಯಲ್ಲಿ ‘ಮೆಟಾಪಿಜಿಕಲ್ ಪೊಯಟ್ರಿ ಆ್ಯಂಡ್ ಕನ್ನಡ ವಚನ ಲಿಟರೇಚರ್’ ಪ್ರೌಢ ಪ್ರಬಂಧವನ್ನು ಮಂಡಿಸಿ, ಪಿಹೆಚ್.ಡಿ. ಪದವಿಗೆ ಭಾಜನರಾದರು. ಅಲ್ಲದೇ 1996 ರಿಂದ 2004ರವರೆಗೆ ಧಾರವಾಡದ ಮೃತ್ಯುಂಜಯ ಕಾಲೇಜಿನಲ್ಲಿ
ಸಹ-ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದರು. 2004ರಿಂದ ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಆಂಗ್ಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ.ಗುರದೇವಿಯವರ ಅಪಾರ ಅನುಭವನ್ನು ಗಮನಿಸಿದ ಕೆ.ಎಲ್.ಇ. ಸಂಸ್ಥೆ, ಸ್ನಾತಕೋತ್ತರ ಇಂಗ್ಲೀಷ ವಿಭಾಗಕ್ಕೆ ಪದೋನ್ನತಿ ನೀಡಿ ವರ್ಗಾಯಿಸಿರುವದು ಹೆಮ್ಮೆಯ ಸಂಗತಿ.

ಮೂರು ದಶಕಗಳಿಗೂ ಹೆಚ್ಚು ಕಾಲ ಪ್ರಾಧ್ಯಾಪಕರಾಗಿದ್ದುಕೊಂಡು ಸಾವಿರಾರು ವಿದ್ಯಾರ್ಥಿಗಳಲ್ಲಿ ಬೆಳಕನ್ನು ಮಾಧುರ್ಯವನ್ನು ತುಂಬಿದವರು. ವಿದ್ಯಾರ್ಥಿನಿಯರನ್ನು ಹೊರ ಪ್ರಪಂಚಕ್ಕೆ ಪರಿಚಯಿಸಿ ಅವರಲ್ಲಿ ಧೈರ್ಯ, ಆತ್ಮಸ್ಥೈರ್ಯ, ಛಲ ಮೂಡಿಸುವದು ಇವರ ಸದುದ್ದೇಶ, ಸ್ತ್ರೀ ಪರ ಹೋರಾಟದ ಹಾದಿಯಲ್ಲಿ ವೈಚಾರಿಕವಾಗಿ, ಶೈಕ್ಷಣಿಕವಾಗಿ ಪ್ರಾತ್ಯಕ್ಷಿಕೆಗಳ ಮೂಲಕ ಹೆಜ್ಜೆ ಹಾಕಿದ್ದಾರೆ.
ಡಾ.ಗುರುದೇವಿಯವರ ಸಾಹಿತ್ಯಯಾನದಲ್ಲಿ ಸ್ತ್ರೀ ಪರವಾದ ಕಾಳಜಿ ಇದೆ. ಅವರದು ಮುಕ್ತ ಮನಸ್ಸು ಅಭಿವ್ಯಕ್ತಿ ಕ್ರಮದಲ್ಲಿ ಅದು ಸ್ಪಷ್ಟ, ತಮ್ಮ ಕಾವ್ಯದ ಮೂಲಕ ಸಂಸ್ಕøತಿಯ ಹೆಸರಿನಲ್ಲಿ ಧ್ವನಿ ಕಳೆದುಕೊಂಡ ಸ್ತ್ರೀ ಬದುಕಿನ ಕುರಿತು ಆರ್ಥಪೂರ್ಣವಾದ ಸಾಹಿತ್ಯವನ್ನು ನೀಡಿದ್ದಾರೆ. ಹಾಸ್ಯ ಸಾಹಿತ್ಯಕ್ಕೂ ಇವರ ಕೊಡುಗೆ ಅಪಾರ. ನಗು ಮರೆತು ಹೋಗಿದ್ದರ, ಪರಿಣಾಮ ಇಂದು ನಗೆ ಕೂಟಗಳಿಗೆ ಹೋಗಿ ಜನರು ನಗುತ್ತಿರುವದು ಸಾಮಾನ್ಯವಾಗಿದೆ. ಹಾಗಾಗಿ ಗುರುದೇವಿಯವರ ಹಾಗೂ ಹಾಸ್ಯ ಲೇಖನÀಗಳು ಇಂದು ಪ್ರಸ್ತುತ ಹಾಗೂ ಅರ್ಥಪೂರ್ಣವೆನಿಸಿಕೊಂಡಿವೆ.

ಶರಣ ಸಾಹಿತ್ಯ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಇವರು ವಚನ ಸಾಹಿತ್ಯದ ಬಗ್ಗೆ ಉಪನ್ಯಾಸಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ. ಕನ್ನಡ ಸಾಹಿತ್ಯದ ಜೀವಾಳವೆನಿಸಿರುವ ವಚನ ಸಾಹಿತ್ಯವು ಇವರ ಆಸಕ್ತಿಯ ಸಾಹಿತ್ಯ ಪ್ರಕಾರವಾಗಿದೆ.
ಡಾ.ಗುರುದೇವಿಯವರು ಸಾಹಿತ್ಯದಲ್ಲಿ ಕೃಷಿ ಕೈಕೊಂಡು 20ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ. ಅಲ್ಲದೇ 5 ಸಂಪಾದನೆ ಕೃತಿಗಳು, 4 ಸಹ ಸಂಪಾದಕೀಯ ಹಾಗೂ ಹಲವಾರು ಬಿಡಿ ಲೇಖನಗಳನ್ನು ಪ್ರಕಟಿಸಿದ್ದಾರೆ. ನನ್ನಜ್ಜಿ ಗುಜ್ಜಿ, ಬಿಡುಗಡೆಯ ಸಡಗರ, ಮೂಗು ಮುರಿದವರು. ನೀರು ಬಂತು ನೀರು, ತಮವೆಂಬ ಹುತ್ತದಲ್ಲಿ ಶರಣ ಸನ್ನಿಧಿ, ಶರಣರ ದೃಷ್ಟಿಯಲ್ಲಿ ಮನಸ್ಸು, ಅಜ್ಜಿಗೆ ಜೈ ಜೈ ಜೈ ಭುವಿಯ ಬೆಳಕು, ಶರಣೆಯರ ಸೂಳ್ನುಡಿ ಹೀಗೆ ಒಟ್ಟು 20ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಡಾ.ಗುರುದೇವಿಯವರ ‘ಬಿಡುಗಡೆಯ ಸಡಗರ’ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಎ.-2ನೆಯ ಸೆಮಿಸ್ಟರ್ ಕನ್ನಡ ಪಠ್ಯದಲ್ಲಿ ‘ಅಗಲಿದ ಚಪ್ಪಲಿಗಳ ಅಳಲು’ ಹಾಸ್ಯ ಪ್ರಬಂಧ, ಮಹಿಳಾ ವಿಶ್ವವಿದ್ಯಾಲಯ ವಿಜಯಪುರದ ಪಠ್ಯದಲ್ಲಿ, ‘ಕೆಟ್ಟ ಕನಸು’ ಹಾಸ್ಯ ಪ್ರಬಂಧ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬಿ.ಎ.-2ನೆಯ ಸೆಮಿಸ್ಟರ್ ಪಠ್ಯದಲ್ಲಿ ಹಾಗೂ ‘ಮೂಗು ಮುರಿದವರು’ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಎ.-2ನೆಯ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪಠ್ಯ ವಿಷಯಗಳಾಗಿರುವದು ಹೆಮ್ಮೆಯ ಸಂಗತಿ. ಧಾರವಾಡ ಆಕಾಶವಾಣಿಯಿಂದ ಇವರ ಅನೇಕ ಚಿಂತನಗಳು ಪ್ರಸಾರಗೊಂಡಿವೆ.

ಡಾ.ಗುರುದೇವಿ ಅವರ ಸಾಧನೆಗೆ ಅಪಾರ ಪ್ರಶಸ್ತಿ ಪುರಸ್ಕಾರಗಳು ಅರಸಿಬಂದಿವೆ. ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ತಿನಿಂದ ‘ವಚನ ಶ್ರೀ’ ಪ್ರಶಸ್ತಿ, ಬುದ್ಧ-ಬಸವ-ಅಂಬೇಡ್ಕರ ಶಾಂತಿ ಟ್ರಸ್ಟನಿಂದ ‘ಸುವರ್ಣ ಸಾರ್ಥಕ ಮಹಿಳೆ’ ಪ್ರಶಸ್ತಿ, ಚಿತ್ರದುರ್ಗ ಮುರುಘಾರಾಜೇಂದ್ರ ಬೃಹನ್ಮಠದಿಂದ ‘ಶಿಕ್ಷಕ ರತ್ನ’ ಪ್ರಶಸ್ತಿ, ‘ಅತ್ತಿಮಬ್ಬೆ ಸಾಹಿತ್ಯ’ ಪ್ರಶಸ್ತಿ, ‘ಮಾತೋಶ್ರೀ ರತ್ನಮ್ಮ ಹೆಗ್ಗಡೆ’ ಪ್ರಶಸ್ತಿ, ‘ಹಳಕಟ್ಟಿ ಶ್ರೀ’ ಪ್ರಶಸ್ತಿ, ಉತ್ತಮ ಹಾಸ್ಯ ಸಾಹಿತಿ ಪ್ರಶಸ್ತಿ ಮೊದಲಾದವು ಸಂದ ಮಹತ್ವದ ಪುರಸ್ಕಾರಗಳು.

ಕನ್ನಡ ಸಾಹಿತ್ಯ ಪರಿಷತ್ತು, ಅಖಿಲ ಕರ್ನಾಟಕ ಲೇಖಕಿಯರ ಸಂಘÀ, ಉತ್ತರ ಕರ್ನಾಟಕ ಲೇಖಕಿಯರ ಸಂಘ, ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ, ಸಾಧನಾ, ಎಸ್.ಡಿ. ಇಂಚಲ ಸ್ಮಾರಕ ಸಮಿತಿ ಇಂಥ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಕೊಂಡು ಲೇಖಕಿಯರ
ಸಮೂಹವನ್ನು ಬೆಳೆಸುತ್ತಾ ತಾವು ಬೆಳೆಯುತ್ತಾ ಬಂದವರು ಡಾ.ಗುರುದೇವಿಯವರು. ಸೌಮ್ಯ ವ್ಯಕ್ತಿತ್ವ, ಹಿತಮಿತ ನಡೆ-ನುಡಿಯ ಇವರ ಸಾಹಿತ್ಯ ಕೃಷಿ ಇನ್ನೂ ಸಮೃದ್ಧಿಯಾಗಲಿ, ನೆಮ್ಮದಿಯ ಜೀವನ ಅವರದಾಗಲಿ.
- ಸುರೇಶ ಗುದಗನವರ
ರಾಮದುರ್ಗ