Thursday, October 21, 2021

ಹೋರಾಟಗಾರನಾಗಿಯೇ ಉಳಿದ ಬಾಬಗೌಡರಿಗೆ ವೃತ್ತಿನಿರತ  ರಾಜಕಾರಣಿಯಾಗಿ ಪರಿವರ್ತನೆಯಾಗಲು  ಕೊನೆಯವರೆಗೂ ಸಾಧ್ಯವಾಗಲಿಲ್ಲ!

Must Read
- Advertisement -

ನೆಲ,ಜಲ,ಭಾಷೆ ಮತ್ತು ರೈತ ಪರ ಹೋರಾಟಗಳನ್ನು ಮೆಟ್ಟಿಲುಗಳನ್ನಾಗಿ ಬಳಸಿಕೊಂಡು ರಾಜಕೀಯದಲ್ಲಿ ಮೇಲೇರಿ ಆಮೇಲೆ ಏರಿದ ಏಣಿಯನ್ನೇ ಒದ್ದು ವೃತ್ತಿನಿರತ ರಾಜಕಾರಣಿಯಾಗಿ ಪರಿವರ್ತನೆಗೊಂಡವರಿದ್ದಾರೆ. ಸಂಸದರು ಅಥವಾ ಶಾಸಕರಾಗಿ ಆಯ್ಕೆಯಾಗಿ ಮಂತ್ರಿ ಪಟ್ಟ ಸಿಕ್ಕ ನಂತರ ತಾವು ನಡೆಸಿದ ಹೋರಾಟಗಳ ಉದ್ದೇಶಗಳನ್ನೇ ಮರೆತವರಿದ್ದಾರೆ. ಆದರೆ ಇದೇ ಮೇ 21ರಂದು ಇಹಲೋಕ ಯಾತ್ರೆ ಮುಗಿಸಿದ ರೈತ ನಾಯಕ ಬಾಬಾಗೌಡ ಪಾಟೀಲರು ಮಾತ್ರ ಕೇಂದ್ರ ಮಂತ್ರಿ,ವಿಧಾನಸಭೆಯ ಸದಸ್ಯರಾದರೂ ತಮ್ಮ ಹೋರಾಟದ ಹಾದಿಯನ್ನು ಬಿಡದ ಅಪರೂಪದ ಅಪ್ಪಟ ರೈತಪರ ಹೋರಾಟಗಾರರಾಗಿದ್ದರು ಎಂಬುದು ಹೋರಾಟಗಾರರಿಗೆ ಒಂದು ಅಭಿಮಾನದ ಸಂಗತಿಯಾಗಿತ್ತು.

ಬೆಳಗಾವಿ ಜಿಲ್ಲೆಯ ಚಿಕ್ಕಬಾಗೇವಾಡಿ ಎಂಬ ಪುಟ್ಟ ಗ್ರಾಮದಿಂದ ದಿಲ್ಲಿಯ ಸಂಸತ್ ಭವನವನ್ನು ತಲುಪಿದ ಬಾಬಾಗೌಡರು ಇತರ ರಾಜಕಾರಣಿಗಳಂತೆ ಅಪ್ಪಟ ವೃತ್ತಿನಿರತ ರಾಜಕಾರಣಿಯಾಗಿದ್ದರೆ ಈಗಲೂ ಅವರು ಬಿಜೆಪಿ ಯಲ್ಲೇ ಉಳಿದು ವಿವಿಧ ಹುದ್ದೆಗಳಲ್ಲಿ ರಾರಾಜಿಸುತ್ತಿದ್ದರೇನೊ. ಆದರೆ ತಾವು ನಂಬಿದ ತತ್ವ ಹಾಗೂ ಜನಪರ ಚಳವಳಿಗಳ ಮೂಲ ಉದ್ದೇಶಗಳಿಗೆ ಪೆಟ್ಟು ಬಿದ್ದಾಗಲೆಲ್ಲ ಪಕ್ಷಗಳನ್ನು ಬದಲಾಯಿಸುತ್ತಲೇ ಬಂದರು. ತಮ್ಮ ರೈತಪರ ಧ್ವನಿಯನ್ನು ಯಾರೂ ಹತ್ತಿಕ್ಕುವದು ಸಾಧ್ಯವೇ ಇಲ್ಲ ಎಂಬ ಸಂದೇಶವನ್ನು ಕೊಡುತ್ತಲೇ ಬಂದರು. ಅವರಿಗೆ ಪಕ್ಷಾಂತರಿ ಎಂಬ ಪಟ್ಟ ಬಂದಿರಬಹುದು. ಆದರೆ ಯಾವ ಉದ್ದೇಶಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿದರು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಬಹುತೇಕರು ಮಾಡಲಿಲ್ಲ.

- Advertisement -

ಬೆಳಗಾವಿ ಜಿಲ್ಲೆಯಲ್ಲಿ ರೈತಪರ ಹೋರಾಟ ಮೊಳಕೆಯೊಡೆದಿದ್ದು 1977 ರಲ್ಲಿ .ದಿವಂಗತ ಕಾಡಪ್ಪ ಹುಕ್ಕೇರಿ,ಎ.ಆರ್.ಪಂಚಗಾವಿ, ಕಲ್ಯಾಣರಾವ ಮುಚಳಂಬಿ ಮುಂತಾದವರು ಸೇರಿ ರೈತ ಸಮನ್ವಯ ಸಮಿತಿ ರಚಿಸಿ ಚಿಂತನೆ ಆರಂಭಿಸಿದರು.1980 ರಲ್ಲಿ ಅವಿಭಾಜ್ಯ ಧಾರವಾಡ ಜಿಲ್ಲೆಯ ನರಗುಂದದಲ್ಲಿಿ ರೈತ ಬಂಡಾಯ ಸ್ಪೋಟಿಸಿದಾಗ ಅಸ್ತಿತ್ವಕ್ಕೆ ಬಂದದ್ದು ರಾಜ್ಯ ರೈತ ಸಂಘ. ಎಚ್.ಎಸ್.ರುದ್ರಪ್ಪ, ಎನ್.ಡಿ.ಸುಂದರೇಶ ಹಾಗೂ ನಂಜುಂಡಸ್ವಾಮಿ ಮತ್ತಿತರರು ರಾಜ್ಯ ನಾಯಕರಾದರೆ ಬೆಳಗಾವಿ ಜಿಲ್ಲೆಯಲ್ಲಿ ಕುಂದರನಾಡ ಪಾಟೀಲ, ಅಶೋಕ ಹೊನ್ನಾಳಿ ಗಜಪತಿಯ ಸುರೇಶಬಾಬು ,ರುದ್ರಪ್ಪ ಮೊಕಾಶಿ ಮತ್ತಿತರರು ನಾಯಕರಾಗಿದ್ದರು.

- Advertisement -

ಬಾಬಾಗೌಡರು ರೈತ ಚಳವಳಿಯನ್ನು ಪ್ರವೇಶಿಸಿದ್ದ 1983.84 ರಲ್ಲಿ. ಪ್ರವೇಶಕ್ಕೂ ಮೊದಲು ಅವರು ಐ.ಎ.ಎಸ್.ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಐ ಎ ಎಸ್ ಅಧಿಕಾರಿಯಾಗುವ ಅವರ ಕನಸು ನನಸಾಗಲಿಲ್ಲ. ಆದರೆ ಬಾಬಾಗೌಡ ಐ ಎ ಎಸ್ ಆಗಿದ್ದಾರೆ ಎಂಬ ವದಂತಿಗೆ ರೆಕ್ಕೆ ಪುಕ್ಕ ಬಂದು ಬಿಟ್ಟಿತ್ತು.

ಬಾಬಾಗೌಡರು ಮಾತನಾಡಲು ನಿಂತರೆ ರೈತರ ಮೇಲೆ ಮೋಡಿ ಮಾಡತೊಡಗಿದಾಗ ರೈತ ಸಮೂಹದಲ್ಲಿ ಸಂಚಲನ ಉಂಟಾಗತೊಡಗಿತು. ರೈತರ ಶೋಷಣೆಯ ವಿರುದ್ಧ ಬಾಬಾಗೌಡರ ಮಾತು ಕೇಳಲು ಸಹಸ್ರಾರು ಜನರು ಸೇರತೊಡಗಿದಾಗ ಸರಕಾರಿ ಅಧಿಕಾರಿಗಳು ಕರ ವಸೂಲಿಗೆ ಹಳ್ಳಿಗಳನ್ನು ಪ್ರವೇಶಿಸಲು ಹೆದರತೊಡಗಿದರು.ಸಾಮಾನ್ಯ ರೈತರು ಹೆಗಲ ಮೇಲೆ ಹಸಿರು ವಸ್ತ್ರ ಹಾಕಿಕೊಂಡು ಸರಕಾರಿ ಕಚೇರಿಗಳನ್ನು ಪ್ರವೇಶಿಸಿದರೆ ಅಧಿಕಾರಿಗಳು ಗೌರವ ಕೊಟ್ಟು ಮಾತನಾಡಿಸುವ ಪರಿಪಾಠ ಆರಂಭವಾಯಿತು. ಒಮ್ಮೊಮ್ಮೆ ಇದು ಅತಿಯಾಗಿ ಅಧಿಕಾರಿಗಳನ್ನು ಕೂಡಿ ಹಾಕಿ ಧಮ್ಕಿ ಹಾಕಿದ ಘಟನೆಗಳೂ ನಡೆದುಹೋದವು.

ಈ ರೈತ ಪರ ಹೋರಾಟಗಾರ 1989 ರಲ್ಲಿ ಧಾರವಾಡ ಮತ್ತು ಕಿತ್ತೂರು ವಿಧಾನಸಭೆ ಮತಕ್ಷೇತ್ರಗಳಿಂದ ರೈತ ಸಂಘದಿಂದ ಸ್ಪರ್ಧಿಸಿದಾಗ ರಾಜ್ಯದ 150 ಕ್ಷೇತ್ರಗಳಲ್ಲಿಯೂ ರೈತ ಹೋರಾಟಗಾರರು ಸ್ಪರ್ಧಿಸಿದ್ದರು.ಆದರೆ ಬಾಬಾಗೌಡರೊಬ್ಬರೇ ಎರಡರಲ್ಲೂ ಆಯ್ಕೆಯಾದರು.ನಂತರ ಧಾರವಾಡ ಸ್ಥಾನಕ್ಕೆ ರಾಜೀನಾಮೆ ನೀಡಿ ನಂಜುಂಡಸ್ವಾಮಿ ಅವರನ್ನು ಆರಿಸಿ ತಂದರು.

ಇವರ ಮೇಲೆ ಬಿಜೆಪಿ ಕಣ್ಣು ಬಿದ್ದಿದ್ದು 1998 ರ ಲೋಕಸಭೆ ಚುನಾವಣೆ ಕಾಲಕ್ಕೆ.ಬೆಳಗಾವಿಯಿಂದ ಬಿಜೆಪಿ ಟಿಕೆಟ್ ಪಡೆದು ಆರಿಸಿ ಬಂದು ಕೇಂದ್ರದಲ್ಲಿ ಗ್ರಾಮೀಣ ಅಭಿವೃದ್ಧಿ ಖಾತೆಯ ಮಂತ್ರಿಯೂ ಆದರು.ಗ್ರಾಮ ಸಡಕ್ ಯೋಜನೆಯನ್ನೂ ಜಾರಿಗೆ ತಂದರು.ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ವಿಶ್ವಾಸವನ್ನೂ ಗಳಿಸಿದರು.ಆದರೆ ಒಂದೇ ವರ್ಷದಲ್ಲಿ ಸರಕಾರ ಕುಸಿಯಿತು.1999 ರಲ್ಲಿ ಮತ್ತೆ ಬಾಬಾಗೌಡರಿಗೆ ಟಿಕೆಟ್ ಸಿಕ್ಕಿತಾದರೂ ಬಿಜೆಪಿ ಲೋಕಶಕ್ತಿ ಗೊಂದಲದಲ್ಲಿ ಹಾಗೂ ಬಾಬಾಗೌಡರ “ಒಳ ವಿರೋಧಿಗಳ”ತಂತ್ರದಿಂದಾಗಿ ಆದ ಮತ ವಿಭಜನೆಯ ಪರಿಣಾಮವಾಗಿ ಸೋಲಬೇಕಾಯಿತು.

ಆ ನಂತರದ ರಾಜಕೀಯ ಭಿನ್ನಾಭಿಪ್ರಾಯದಿಂದಾಗಿ ಬಿಜೆಪಿ ತೊರೆದ ಬಾಬಾಗೌಡರು ಇನ್ನಿತರ ಪಕ್ಷಗಳತ್ತ ಮುಖಮಾಡಿದರು.ಕೊನೆಗೆ ರಾಜ್ಯ ರೈತ ಸಂಘವನ್ನೂ ತೊರೆದು ಸ್ವಂತ ಸಂಘಟನೆಯನ್ನು ಹುಟ್ಟು ಹಾಕಿದರು.

ಕೇಂದ್ರದ ಮಂತ್ರಿಯಾದಗಲೂ ಬಾಬಾಗೌಡರಿಗೆ ಮಂತ್ರಿಯ ಖದರು ಬರಲಿಲ್ಲ. ಕೆಂಪು ದೀಪದ ಖಯಾಲಿಗೆ ಹೊಂದಾಣಿಕೆಯಾಗಲಿಲ್ಲ. ಅವರು ರಾಜ್ಯಕ್ಕೆ ಬಂದು ಪ್ರವಾಸ ಮಾಡುವಾಗಲು “ಇವರೆಂಥ ಕೇಂದ್ರ ಮಂತ್ರಿ”ಎಂಬ ಮೂದಲಿಕೆಯ ಮಾತುಗಳಿಗೇನೂ ಬರವಿರಲಿಲ್ಲ!

ನಾಡು,ನುಡಿ,ಗಡಿಯ ವಿಷಯ ಬಂದಾಗಲೂ ಗೌಡರು ನಮ್ಮೊಂದಿಗೆ ಕೈಜೋಡಿಸಿದ್ದಾರೆ.1997 ರಲ್ಲಿ ನಡೆದ ಬೆಳಗಾವಿ ಜಿಲ್ಲೆಯ ವಿಭಜನೆ ವಿರುದ್ಧ ನಡೆದ ಚಳವಳಿಯಲ್ಲೂ ಭಾಗವಹಿಸಿದ್ದರು.

ನಿಜವಾದ ಹೋರಾಟಗಾರು ರಾಜಕೀಯದಲ್ಲಿ ಪ್ರವೇಶಿಸಿ ಯಶಸ್ವಿಯಾಗುವದು ತುಂಬ ಕಠಿಣ.ಪ್ರವೇಶಿಸಿ ಅಲ್ಲಿಯ ವಾತಾವರಣಕ್ಕೆ ಹೊಂದುಕೊಳ್ಳುವದು ಇನ್ನೂ ಕಠಿಣ.ಇದಕ್ಕೆ ಬಾಬಾಗೌಡರೇ ಒಂದು ಒಳ್ಳೆಯ ಉದಾಹರಣೆ.

 

– ಅಶೋಕ ಚಂದರಗಿ, ಹಿರಿಯ ಪತ್ರಕರ್ತರು

ಅಧ್ಯಕ್ಷರು,ಬೆಳಗಾವಿ ಜಿಲ್ಲಾ ಕನ್ನಡ

ಸಂಘಟನೆಗಳ ಕ್ರಿಯಾ ಸಮಿತಿ

ಬೆಳಗಾವಿ

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -